ವರದಿ-ಸಿಂಚು ಕುಶಾಲನಗರ, ಜ. 21: ದುಬಾರೆ ಸಾಕಾನೆ ಶಿಬಿರದಿಂದ ಚತ್ತೀಸ್‍ಘಡ್ ರಾಜ್ಯಕ್ಕೆ 3 ಆನೆಗಳನ್ನು ಕೊಂಡೊಯ್ಯಲು ಅಲ್ಲಿನ ಹಿರಿಯ ಅಧಿಕಾರಿಗಳು ಕಳೆದ 3 ದಿನಗಳಿಂದ ಸಿದ್ದತೆ ನಡೆಸುತ್ತಿದ್ದು ಈ ನಡುವೆ ಸಂಬಂಧಿಸಿದ 3 ಆನೆಗಳ ಹುಡುಕಾಟ ಪ್ರಾರಂಭಗೊಂಡಿದೆ.

ಶಿಬಿರದಿಂದ ಸಾಕಾನೆಗಳನ್ನು ಬೇರೆ ರಾಜ್ಯಗಳಿಗೆ ಸ್ಥಳಾಂತರಿಸುವ ಸರಕಾರದ ನಿರ್ಧಾರವನ್ನು ಪ್ರತಿಭಟಿಸಿರುವ ಕೆಲವು ಮಾವುತರು ಆನೆಯನ್ನು ಕಾಡಿನಿಂದ ಶಿಬಿರಕ್ಕೆ ತರದಿರುವ ಹಿನ್ನಲೆಯಲ್ಲಿ ಈ ಹುಡುಕಾಟ ಕಂಡುಬಂದಿದೆ.

ಈ ನಡುವೆ ಮಾವುತ ಮುಖಂಡ ಜೆ.ಕೆ. ಡೋಬಿ ಜಿಲ್ಲೆಯ ಹಿರಿಯ ಅಧಿಕಾರಿಗಳೊಂದಿಗೆ ಆನೆ ಸ್ಥಳಾಂತರಿಸದಂತೆ ಮನವಿ ಸಲ್ಲಿಸಿದರೂ ಪ್ರಯೋಜನವಾಗದೇ ಇದೀಗ ಮಾವುತರ ತಂಡವೊಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಲು ತೆರಳಿರುವ ಬಗ್ಗೆ ವರದಿಯಾಗಿದೆ.

ಸಾಕಾನೆಗಳು ಮತ್ತು ಮಾವುತರ ನಡುವೆ ಅವಿನಾಬಾವ ಸಂಬಂಧ ಹಿನ್ನೆಲೆಯಲ್ಲಿ ಬಿಟ್ಟುಕೊಡಲು ತಯಾರಿಲ್ಲದ ಕೆಲವು ಮಾವುತರು ಸಂಕಷ್ಟ ಹೇಳಿಕೊಳ್ಳಲು ತೆರಳಿದ್ದಾರೆ. ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಗೃಹ ಕಛೇರಿಯಲ್ಲಿ ಡೋಬಿ ಮತ್ತು ತಂಡದ ಸದಸ್ಯರು ಭಾನುವಾರ ಬೆಳಗಿನಿಂದ ಭೇಟಿಗಾಗಿ ಕಾದು ಕುಳಿತಿರುವದಾಗಿ ತಿಳಿದುಬಂದಿದೆ. ಯಾವದೇ ಹಂತದಲ್ಲಿಯೂ ದುಬಾರೆ ಶಿಬಿರದಿಂದ ಆನೆಗಳನ್ನು ಬೇರೆ ರಾಜ್ಯಕ್ಕೆ ಸ್ಥಳಾಂತರಿಸದಂತೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ಇತ್ತ ಚತ್ತೀಸ್‍ಘಡ್ ರಾಜ್ಯದಿಂದ ಆಗಮಿಸಿದ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡ ಸರಕಾರದ ಆದೇಶದ ಹಿನ್ನೆಲೆಯಲ್ಲಿ ಜಿಲ್ಲೆಯ ಅರಣ್ಯ ಅಧಿಕಾರಿಗಳ ಮೊರೆ ಹೋಗಿದ್ದು ಸೋಮವಾರ ದುಬಾರೆ ಯಿಂದ 3 ಮತ್ತು ತಿತಿಮತಿಯಿಂದ 3 ಆನೆಗಳನ್ನು ಕೊಂಡೊಯ್ಯಲು ಪೂರ್ವಸಿದ್ಧತೆ ನಡೆಸಿದ್ದಾರೆ.