ಮಡಿಕೇರಿ, ಜ. 21: ಶಬ್ದ ಮತ್ತು ಅರ್ಥಗಳ ಸಹಭಾವವೇ ಸಾಹಿತ್ಯ. ಸಾಹಿತ್ಯದಿಂದ ಸಹಬಾಳ್ವೆ ಸಾಧ್ಯವಿದೆ. ಸಾಹಿತ್ಯಕ್ಕೆ ಸಮಾಜವನ್ನು ಒಂದುಗೂಡಿಸುವ ಸಾಮಥ್ರ್ಯವಿದೆ ಎಂದು ಸಂಸ್ಕøತ ಭಾರತೀಯ ಡಾ. ವಿಶ್ವಾಸ್ ಅಭಿಪ್ರಾಯಪಟ್ಟರು. ನಗರದ ಕ್ರಿಸ್ಟಲ್ ಕೋರ್ಟ್ ಸಭಾಂಗಣದ ವೇದವ್ಯಾಸ ವೇದಿಕೆಯಲ್ಲಿ ನಡೆದ ಅಖಿಲ ಭಾರತೀಯ ಸಾಹಿತ್ಯ ಪರಿಷದ್‍ನ ಜಿಲ್ಲಾ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಸಾಹಿತ್ಯ ಸುಖದ ಸಾಧನ. ಸಾಂಸಾರಿಕ ಸುಖಕ್ಕೆ ಸಾಹಿತ್ಯ ಆಧಾರ. ರಸಾಭಿವ್ಯಕ್ತಿಗಳಾಗಿ ಸಾಹಿತ್ಯ ರಚನೆ ಮಾಡಬೇಕು. ಸಾಹಿತ್ಯದಿಂದ ಸಮಾಜ ಪರಿವರ್ತನೆ ಆಗಬೇಕು. ಆದರೆ ಇಂದು ಸಾಹಿತ್ಯಾಸಕ್ತರ ಸಂಖ್ಯೆ ಕಡಿಮೆ ಆಗುತ್ತಿರುವದು ವಿಪರ್ಯಾಸವೆಂದು ಹೇಳಿದರು.
ಪರಿಷದ್‍ನ ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ ಮಾತನಾಡಿ ಸುಖೀ ಸಂಸಾರಕ್ಕೆ ರಾಮಾಯಣ ಹಾಗೂ ಮಹಾಭಾರತದ ಮಹಾಕಾವ್ಯ ಪ್ರೇರಣೆಯಾಗಿ ಸಮಾಜಕ್ಕೆ ದೊಡ್ಡಕೊಡುಗೆ ನೀಡಿದೆ. ಆದರೆ ಇಂದು ಪಾಶ್ಚಿಮಾತ್ಯ ಸಂಸ್ಕøತಿಯ ಗಾಳಿಯಿಂದಾಗಿ ಭಾರತೀಯ ಕೌಟುಂಬಿಕ ಜೀವನ ಮೌಲ್ಯ ಅಧಃಪತನಕ್ಕೆ ಇಳಿದಿದ್ದು, ಸಾಹಿತ್ಯದಿಂದ ಸರಿಪಡಿಸಬೇಕಾಗಿದೆ ಎಂದು ಹೇಳಿದರು.
ಪರಿಷದ್‍ನ ರಾಜ್ಯಾಧ್ಯಕ್ಷ ಡಾ. ದೊಡ್ಡರಂಗೇಗೌಡ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಹೆಚ್ಚಾಗಿ ಸಂಸಾರವನ್ನೇ ನಾಶ ಮಾಡುವಂತಹ ಸಾಹಿತ್ಯಗಳು ಬರುತ್ತಿರುವದು ದುರ್ಧೈವದ ಸಂಗತಿಯಾಗಿದೆ. ಕೌಟುಂಬಿಕ ಜೀವನ ಮೌಲ್ಯಗಳು ಇಂದಿನ ಮಕ್ಕಳಿಗೆ ಸಿಗುತ್ತಿಲ್ಲ. ಮೌಲ್ಯಗಳಿಗೆ ಒತ್ತು ನೀಡಿ ಸಾಹಿತಿಗಳು ಕೆಲಸ ಮಾಡಬೇಕು. ಸಾಹಿತಿಗಳು, ಕವಿಗಳು ಒಂದಾಗಿ ಭಾರತದ ಗೌರವವನ್ನು ಇಮ್ಮಡಿಗೊಳಿಸಬೇಕು. ಸಮ್ಮೇಳನದಲ್ಲಿ ಅಂಗೀಕರಿಸಿದ ನಿರ್ಣಯಗಳನ್ನು ಸರ್ಕಾರಗಳಿಗೆ ತಲಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವದು ಎಂದರು. ಪರಿಷದ್‍ನ ಅಧ್ಯಕ್ಷ ಅಡ್ಡಂಡ ಕಾರ್ಯಪ್ಪ ನಿರ್ಣಯ ಮಂಡಿಸಿದರು.
ಬಳಿಕ ಮಡಿಕೇರಿಯ ನೃತ್ಯ ಮಂಟಪ ಟ್ರಸ್ಟ್ ವತಿಯಿಂದ ಭರತನಾಟ್ಯ, ಕೊಡವ ಸಮಾಜದಿಂದ ಬೊಳಕಾಟ್, ಕೊಡಗು ಗೌಡ ಯುವ ವೇದಿಕೆ ವತಿಯಿಂದ ಹುತ್ತರಿಕೋಲು, ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಿಂದ ಕಂಗೀಲು ನೃತ್ಯ, ಶ್ರೀದೇವಿ ಮಹಿಳಾ ವಿಭಾಗದಿಂದ ತಿರುವಾದಿರ ಕಳಿ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಮಹಾಬಲೇಶ್ವರ ಭಟ್, ಮೊಣ್ಣಂಡ ಶೋಭಾ ಸುಬ್ಬಯ್ಯ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಕೆ.ಕೆ. ದಿನೇಶ್ ಕುಮಾರ್, ಅರುಣ್ ಕುಮಾರ್, ಶಿವಾಜಿ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು, ನಗರದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನಿರ್ದೇಶಕರು ಉಪಸ್ಥಿತರಿದ್ದರು. ನಿರ್ದೇಶಕರಾದ ಹರೀಶ್ ಸರಳಾಯ, ಅಗೋಳಿಕಜೆ ಧನಂಜಯ, ಕಡ್ಲೇರ ಆಶಾ ಧರ್ಮಪಾಲ್ ಕಾರ್ಯಕ್ರಮ ನಿರೂಪಿಸಿದರೆ ಪರಿಷದ್‍ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೋರನ ಜಿ. ಸುನೀಲ್ ಸ್ವಾಗತಿಸಿ, ಸಂಚಾಲಕ ಎಂ.ಕೆ. ಜಯಕುಮಾರ್ ವಂದಿಸಿದರು.
ಕವಿಗೋಷ್ಠಿ
ಕಾವೇರಿ ತಾಯ ಒಡಲು- ಹಲವು ಭಾಷೆಗಳ ಮಡಿಲು ಬಹುಭಾಷಾ ಕವಿಗೋಷ್ಠಿ ನಡೆಯಿತು.
ಮುರಳಿ ಕೃಷ್ಣ ಬೆಳಾಲು, ಮುಲ್ಲೇಂಗಡ ರೇವತಿ ಪೂವಯ್ಯ, ಶಿವದೇವಿ ಅವನೀಶ್ಚಂದ್ರ, ಬಿ.ಹೆಚ್. ಉಲ್ಲಾಸ್, ಸುನೀಲ್ ಲೋಕೇಶ್, ಸಬಲಂ ಬೋಜಣ್ಣ ರೆಡ್ಡಿ, ಬಿ.ಹೆಚ್. ತಳವಾರ್, ಹಾ.ತಿ. ಜಯಪ್ರಕಾಶ್, ವಿವಿಧ ಭಾಷೆಗಳಲ್ಲಿ ಕವನ ವಾಚಿಸಿದರು. ಕವಿ ನಾಗೇಶ್ ಕಾಲೂರು ಅಧ್ಯಕ್ಷತೆ ವಹಿಸಿದ್ದರು.