ಮಡಿಕೇರಿ, ಜ. 22: ಮುಂದಿನ ದಿನಗಳಲ್ಲಿ ಮಹಾನಗರಗಳಂತೆ ಮಡಿಕೇರಿ ನಗರಸಭಾ ವ್ಯಾಪ್ತಿ ಯಲ್ಲಿಯೂ, ನೀರು ಬಳಕೆದಾರರಿಗೆ ನಲ್ಲಿಗಳಲ್ಲಿ ಮೀಟರ್ ಅಳವಡಿಸುವ ಮೂಲಕ ಮಿತ ಬಳಕೆಗೆ ಕ್ರಮ ಕೈಗೊಳ್ಳುವದನ್ನು ನಿರ್ಧರಿಸಲಾಗಿದೆ. ಈ ದಿಸೆಯಲ್ಲಿ ನಗರಸಭೆಯಿಂದ ಈಗಾಗಲೇ ಜಿಲ್ಲಾಧಿಕಾರಿ ಮುಖಾಂತರ ಸರಕಾರದ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸ ಲಾಗಿದೆ ಎಂದು ಗೊತ್ತಾಗಿದೆ.
ಈ ಬಗ್ಗೆ ನಗರಸಭಾ ಆಯುಕ್ತೆ ಶುಭ ಅವರಿಂದ ‘ಶಕ್ತಿ’ ಪ್ರತಿಕ್ರಿಯೆ ಬಯಸಿದಾಗ, ನಗರದ ಎಲ್ಲ ವ್ಯಾಪಾರೋದ್ಯಮಗಳು ಸೇರಿದಂತೆ ಮನೆಗಳಿಗೆ ಮುಂದಿನ ದಿನಗಳಲ್ಲಿ ನೀರು ಪೊರೈಕೆ ಸಂಬಂಧ ಮಿತ ಬಳಕೆಯ ದಿಸೆಯಲ್ಲಿ ಎಲೆಕ್ಟ್ರಾನಿಕ್ ವ್ಯವಸ್ಥೆಯಡಿ ಮೀಟರ್‍ಗಳನ್ನು ಅಳವಡಿಸಲು ಸೂಕ್ತ ಯೋಜನೆ ರೂಪಿಸುತ್ತಿರುವದಾಗಿ ಖಚಿತಪಡಿಸಿದರು.
ಅಲ್ಲದೆ, ಇಂತಹ ಪರಿಣಾಮಕಾರಿ ಯೋಜನೆಯಿಂದ ವ್ಯಾಪಾರೋದ್ಯಮ, ಹೊಟೇಲ್‍ಗಳು, ವಸತಿಗೃಹಗಳ ಸಹಿತ ಮನೆಗಳಲ್ಲಿ ಕೂಡ ನೀರು ಬಳಕೆಯ ಮಹತ್ವ ತಿಳಿಯುವದು ಸಾಧ್ಯವೆಂದು ಅಭಿಪ್ರಾಯಪಟ್ಟರಲ್ಲದೆ, ಪ್ರಸಕ್ತ ಮಡಿಕೇರಿಯಲ್ಲಿ ಸುಮಾರು 8518 ಮನೆಗಳು ಅಧಿಕೃತವಾಗಿ ನಮೂದಿಸಲ್ಪಟ್ಟಿವೆ ಎಂದು ಮಾಹಿತಿ ನೀಡಿದರು.
ನೀರಿನ ಕೊರತೆಯಿಲ್ಲ: ಮಡಿಕೇರಿ ನಗರಕ್ಕೆ ಕುಡಿಯುವ ನೀರಿಗಾಗಿ ರೂಪುಗೊಂಡಿರುವ ಕುಂಡಾಮೇಸ್ತ್ರಿ ಯೋಜನೆಯಿಂದಾಗಿ ಕಳೆದ ಸಾಲಿನಿಂದ ಕುಡಿಯುವ ನೀರಿಗೆ ಯಾವದೇ ರೀತಿಯಲ್ಲಿಯೂ ಸಮಸ್ಯೆ ಎದುರಾಗಿಲ್ಲವೆಂದು ಇದೇ ಸಂದರ್ಭ ನಗರಸಭೆಯ ಮಾಜಿ ಅಧ್ಯಕ್ಷ ಪಿ.ಡಿ. ಪೊನ್ನಪ್ಪ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಎಸ್. ರಮೇಶ್ ನೆನಪಿಸಿದ್ದಾರೆ. ಈ ಯೋಜನೆ ಯಿಂದಾಗಿ ನಗರದ ಜನತೆಗೆ ಬೇಸಿಗೆಯಲ್ಲಿಯೂ ವರ್ಷಪೂರ್ತಿ ಟ್ಯಾಂಕರ್‍ಗಳಲ್ಲಿ ನೀರು ಸರಬರಾಜು ಗೊಳಿಸುವದು ತಪ್ಪಿದಂತಾಗಿದೆ ಎಂದು ನೆನಪಿಸಿದ್ದಾರೆ.
ನಗರದ ಜನತೆಗೆ ಶುದ್ಧ ಕುಡಿಯುವ ನೀರಿನ ಘಟಕಗಳ ಮತ್ತು ಶೇಖರಣಾ ವ್ಯವಸ್ಥೆಯನ್ನು ಇನ್ನಷ್ಟು ಶುಚೀಕರಣದೊಂದಿಗೆ ಅಭಿವೃದ್ಧಿಗೊಳಿಸಲು ರೂ. 70 ಲಕ್ಷದ ಕ್ರಿಯಾಯೋಜನೆಯೊಂದಿಗೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಕೂಡ ಸಲ್ಲಿಸಲಾಗಿದೆ. ಈ ವ್ಯವಸ್ಥೆಯೊಂದಿಗೆ ಆದ್ಯತೆ ಮೇರೆಗೆ ಮಹದೇವಪೇಟೆ, ಜಯನಗರ, ದೇಚೂರು ಮುಂತಾದೆಡೆಗಳಲ್ಲಿ ಮೊದಲು ಮೀಟರ್ ಅಳವಡಿಸುವ ಇಂಗಿತ ವನ್ನು ನಗರಸಭೆ ಪ್ರಮುಖರು ವ್ಯಕ್ತಪಡಿಸಿದ್ದಾರೆ.