ಗೋಣಿಕೊಪ್ಪ ವರದಿ, ಜ. 22 : ಅಮ್ಮತ್ತಿ-ಹಂಚಿಕಾಡುನಲ್ಲಿರುವ ಕನ್ನಡ ಮಠದ ತೋಟವನ್ನು ಪ್ರಾಕೃತಿಕವಾಗಿ ಸಂರಕ್ಷಿಸಿಕೊಂಡು ಕನ್ನಡದ ಜನತೆಗೆ ಪ್ರಾಕೃತಿಕ ಸಂಪನ್ಮೂಲ ಪ್ರೇಕ್ಷಣೀಯ ತಾಣವಾಗಿ ಅಭಿವೃದ್ದಿ ಪಡಿಸುವ ಚಿಂತನೆ ನಡೆಸಲಾಗಿದೆ ಎಂದು ಕನ್ನಡ ಮಠ ಮಠಾಧಿಪತಿ ಚನ್ನ ಬಸವದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ನ್ಯಾಯಾಲಯದ ತೀರ್ಪಿನಂತೆ ಕನ್ನಡ ಮಠದ ಸ್ವಾಧೀನಕ್ಕೆ ಬಂದಿರುವ 197 ಏಕ್ರೆ ಜಾಗದ ಆವರಣದಲ್ಲಿ ಮೊದಲ ಬಾರಿಗೆ ಆಯೋಜಿಸಿದ್ದ ಬೆಟ್ಟದಪುರ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ವೀರಶೈವ ನೌಕರರ ಬಳಗ ವಾರ್ಷಿಕ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಕರ್ನಾಟಕದ ಜನತೆಗೆ ಕೊಡಗಿನ ಪ್ರಕೃತಿ ಸೌಂದರ್ಯವನ್ನು ವೀಕ್ಷಿಸಲು ಅವಕಾಶ ನೀಡಲಾಗುವದು. ಇದರಂತೆ ಅಭಿವೃದ್ದಿಗಾಗಿ ಚಿಂತನಾ ಸಮಿತಿ ರಚಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರಾಕೃತಿಕವಾಗಿ ಸಂರಕ್ಷಿಸಿಕೊಂಡು ಅಭಿವೃದ್ದಿ ಪಡಿಲಾಗುವದು. ಚಿಂತನಾ ಸಮಿತಿ ನೀಡುವ ತಾಂತ್ರಿಕ ವರದಿ ಆಧರಿಸಿ ಅಭಿವೃದ್ದಿ ನಡೆಸಲಾಗುವದು ಎಂದರು.ಮುಖ್ಯ ಭಾಷಣಕಾರರಾಗಿ ಶರಣಧರ್ಮ ವಿಶ್ವಧರ್ಮ ಎಂಬ ವಿಷಯದಲ್ಲಿ ಪಿರಿಯಾಪಟ್ಟಣ ನೌಕರರ ಸಂಘದ ಪ್ರ. ಕಾರ್ಯದರ್ಶಿ ಪರಮಶಿವಯ್ಯ ಮಾತನಾಡಿದರು.

ಪುರಸ್ಕಾರ : ಈ ಕಾರ್ಯಕ್ರಮದಲ್ಲಿ ಅಲ್ಲಿನ ಅನ್ನದಾಸೋಹ ಸಮಿತಿ ಸಂಚಾಲಕ ಎ. ಬಿ. ನಾಗರಾಜು, ಹಾರನಹಳ್ಳಿ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಕೆ. ಸಿ. ಸತೀಶ್, ಪ್ರಗತಿಪರ ರೈತ ಉಮೇಶ್, ಮಾದರಿ ವ್ಯಾಪಾರಿ ನಟರಾಜು, ಸಂಘ ಸಂಚಾಲಕ ಪಿ. ಶಿವಕುಮಾರ್, ಉಪಾಧ್ಯಕ್ಷೆ ಸವಿತಾ ಧರ್ಮಪಾಲ್, ಖಜಾಂಜಿ ನಿರಂಜನ್, ಹಿಂದೂ ಜಾಗರಣಾ ವೇದಿಕೆ ಕಾರ್ಯದರ್ಶಿ ಮಲ್ಲೇಶ್, ಎಸೆಸೆಲ್ಸಿಯಲ್ಲಿ ಸಾಧನೆಗೈದ ಅಶ್ವಿನಿ, ಬಿ. ಆರ್. ಭೂಮಿಕಾ, ಕಾಮಾಕ್ಷಿ, ಅಂಗವಿಕಲ ಮಲ್ಲೇಗೌಡ, ಅನುಶ್ರೀ ಅವರುಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ದಿಂಡಕಾಡು ಬಸವಜ್ಯೋತಿ ಮಠಾಧಿಪತಿ ಅಪ್ಪಾಜಿಸ್ವಾಮಿ, ಕೆರಗೋಡು ಗುರುಮಲ್ಲೇಶ್ವರ ಮಠಾಧಿಪತಿ ಮಲ್ಲಿಕಾರ್ಜುನ ಸ್ವಾಮಿ, ಪಿರಿಯಾಪಟ್ಟಣ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಮಂಜುನಾಥಸ್ವಾಮಿ, ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ವೀರಶೈವ ನೌಕರರ ಬಳಗ ಅಧ್ಯಕ್ಷ ಬಿ. ಸಿ. ಮಹಾದೇವಪ್ಪ, ನೌಕರರ ಕ್ಷೇಮಾಭಿವೃದ್ದಿ ಸಂಘ ಅಧ್ಯಕ್ಷ ಶಿವಯೋಗ, ಮೈಸೂರು ಜಿಲ್ಲಾ ನೌಕರರ ಸಂಘದ ಉಪಾಧ್ಯಕ್ಷ ಪಿ. ಎಂ. ನಾಗರಾಜು, ಮುಖ್ಯಶಿಕ್ಷಕ ಎಂ. ಮಲ್ಲೇಶ್, ಪಿರಿಯಾಪಟ್ಟಣ ತಾಲೂಕು ಸಂಘದ ಅಧ್ಯಕ್ಷ ನಾಗಶೆಟ್ಟಿ, ಸಂಘದ ಪ್ರಮುಖರುಗಳಾದ ಎಚ್. ಕೆ. ಶಿವಮೂರ್ತಿ, ಕೆ.ಎಸ್. ಮಹಾದೇವಪ್ಪ, ನಾಗೇಂದ್ರ, ಪತ್ರಕರ್ತ ನವೀನ್‍ಕುಮಾರ್ ಉಪಸ್ಥಿತರಿದ್ದರು. ಮಹಾದೇವಪ್ಪ ಸ್ವಾಗತಿಸಿ, ಸತೀಶ್ ನಿರೂಪಿಸಿದರು.