ಸಿದ್ದಾಪುರ, ಜ. 22: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆ.ಡಿ.ಎಸ್. ಅಧಿಕಾರಕ್ಕೆ ಬರುವ ಮೂಲಕ ಕುಮಾರಸ್ವಾಮಿ ಮುಂದಿನ ಮುಖ್ಯಮಂತ್ರಿಯಾಗುವದು ಖಚಿತ ಎಂದು ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಅಭಿಪ್ರಾಯಪಟ್ಟರು.
ಮರಗೋಡುವಿನ ವಿವೇಕಾನಂದ ಯುವಕ ಸಂಘದ ಸಭಾಂಗಣದಲ್ಲಿ ಜೆ.ಡಿ.ಎಸ್ ಕಾರ್ಯಕರ್ತರ ಸಭೆ ಹಾಗೂ ತಾ. 29ರ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಮಾಜಿ ಸಚಿವ ಹಾಗೂ ಜೆ.ಡಿ.ಎಸ್ ಮುಖಂಡ ಬಿ.ಎ ಜೀವಿಜಯ ಮಾತನಾಡಿ, ಮುಂಬರುವ ಚುನಾವಣೆಯನ್ನು ಎದುರಿಸಲು ಜೆ.ಡಿ.ಎಸ್ ರಾಜ್ಯದಲ್ಲಿ ಹಾಗೂ ಜಿಲ್ಲೆಯಲ್ಲಿ ಸಜ್ಜಾಗಿದ್ದು, ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ವೀರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಜೆ.ಡಿ.ಎಸ್. ಪಕ್ಷದ ಅಭ್ಯರ್ಥಿ ಯಾಗಿ ಸಂಕೇತ್ ಪೂವಯ್ಯ ಅವರ ಹೆಸರನ್ನು ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ಹಾಗೂ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಆಯ್ಕೆಮಾಡಿದ್ದಾರೆ ಎಂದರು.
ಜೆ.ಡಿ.ಎಸ್. ಪರಿಶಿಷ್ಟ ವರ್ಗದ ರಾಜ್ಯ ಉಪಾಧ್ಯಕ್ಷ ಎಸ್.ಎಂ ರಾಜಾರಾವ್ ಮಾತನಾಡಿ, ಜೆ.ಡಿ.ಎಸ್. ಪಕ್ಷದ ಪರ ಜಿಲ್ಲೆಯಲ್ಲಿ ಅಲೆ ಇದ್ದು, ಬಿ.ಜೆ.ಪಿ ಹಾಗೂ ಕಾಂಗ್ರೆಸ್ ಪಕ್ಷ ಅಭಿವೃದ್ಧಿ ಪರ ಕಾಳಜಿ ವಹಿಸದೆ ರಾಜಕೀಯದಲ್ಲಿ ಕಾಲಹರಣ ಮಾಡುತ್ತಿದೆ ಎಂದು ಟೀಕಿಸಿದರು. ಯುವ ಜೆ.ಡಿ.ಎಸ್. ಅಧ್ಯಕ್ಷ ಸಿ.ಎಲ್. ವಿಶ್ವ ಮಾತನಾಡಿ, ತಾ. 29 ರಂದು ಜಿಲ್ಲಾ ಯುವ ಜೆ.ಡಿ.ಎಸ್. ಸಮಾವೇಶ ನಡೆಯಲಿದೆ ಎಂದರು.
ಈ ಸಂದರ್ಭ ಜೆ.ಡಿ.ಎಸ್ ಮುಖಂಡರಾದ ಹೊಸೂರು ಸತೀಶ್ ಜೋಯಪ್ಪ, ಕೆ.ಎಂ.ಬಿ. ಗಣೇಶ್, ನಂದಾ ನಾಣಯ್ಯ, ಬಿದ್ರುಪಣೆ ಮೋಹನ್, ಜಗದೀಶ್, ವಿಶ್ವನಾಥ್, ಇಬ್ರಾಹಿಂ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಹಾಜರಿದ್ದರು. ಬಿದ್ರುಪಣೆ ಮೋಹನ್ ಸ್ವಾಗತಿಸಿ ವಂದಿಸಿದರು.