ಮಡಿಕೇರಿ, ಜ. 22: ಕೊಡಗಿನ 7ನೇ ಹೊಸಕೋಟೆ ಗ್ರಾ.ಪಂ. ವ್ಯಾಪ್ತಿಯ ಅಂದಗೋವೆ ಹಾಗೂ ಹಾರಂಗಿ ಬಳಿಯ ಬೊಳ್ಳೂರುವಿನಲ್ಲಿ ಅಕ್ರಮ ಗಣಿಗಾರಿಕೆಯ ಆರೋಪ ಹಿನ್ನೆಲೆ ಕರ್ನಾಟಕ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಶೋಕ್ ಕುಮಾರ್ ಗರ್ಗ್ ಅವರು ಖುದ್ದು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಸರಕಾರ ಹಾಗೂ ಅರಣ್ಯ ಇಲಾಖೆಗೆ ದೂರುಗಳ ಹಿನ್ನೆಲೆಯಲ್ಲಿ ರಾಜ್ಯ ಅಧಿಕಾರಿ ಸ್ಥಳ ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲದೆ ಊರುಡುವೆ ಜಾಗ ಮತ್ತು ಅರಣ್ಯ ಸಂರಕ್ಷಿತ ಪ್ರದೇಶದಲ್ಲಿ ಗಣಿಗಾರಿಕೆ ಸಂಬಂಧ ವಿಷಯ ಸಂಗ್ರಹಿಸಿರುವ ಅವರು ಸರಕಾರಕ್ಕೆ ವರದಿ ಸಲ್ಲಿಸಲಿದ್ದಾರೆ.
ಅಲ್ಲದೆ ಹಾರಂಗಿ ಯೋಜನೆ ಯಡಿ ಜಲಾಶಯದ ಹಿನ್ನೀರು ಪ್ರದೇಶ ದಲ್ಲಿ ನೀರಿನಿಂದ ಮುಳುಗಡೆ ಯೊಂದಿಗೆ ಜಾಗ ಕಳೆದು ಕೊಂಡಿರುವ ವರಿಗೆ ಹುದುಗೂರು ಗ್ರಾ.ಪಂ. ವ್ಯಾಪ್ತಿಯಲ್ಲಿನ ಹುಲುಗುಂದದಲ್ಲಿ ಪುನರ್ವಸತಿ ಹೊಂದಿರುವವರಿಗೆ ಸಾಗುವಳಿ ಚೀಟಿ ನೀಡುವ ಕುರಿತಾಗಿಯೂ ಅವರು ಖುದ್ದು ಭೇಟಿಯೊಂದಿಗೆ ಸರಕಾರಕ್ಕೆ ಪರಿಶೀಲನಾ ವರದಿ ನೀಡಲಿದ್ದಾರೆ.
ನಿನ್ನೆ ಸಂಜೆ ಬಳಿಕ ಜಿಲ್ಲೆಗೆ ಆಗಮಿಸುವದರೊಂದಿಗೆ ಮೇಲಿನ ವಿವಾದಗಳ ಬಗ್ಗೆ ಮಾಹಿತಿ ಕಲೆ ಹಾಕಿರುವ ಅಶೋಕ್‍ಕುಮಾರ್ ಗರ್ಗ್ ಇಂದು
(ಮೊದಲ ಪುಟದಿಂದ) ಮಡಿಕೇರಿಗೆ ಆಗಮಿಸುವದರೊಂದಿಗೆ ಕೊಡಗಿನ ತೀರ್ಥಕ್ಷೇತ್ರಗಳಾದ ತಲಕಾವೇರಿ ಹಾಗೂ ಭಾಗಮಂಡಲಕ್ಕೆ ಭೇಟಿ ನೀಡಿ ರಾಜಧಾನಿಗೆ ಹಿಂತೆರಳಿದ್ದಾರೆ.
ಕೊಡಗು ವೃತ್ತ ಸಂರಕ್ಷಣಾಧಿಕಾರಿ ಹೇಳಿಕೆ : ಕೊಡಗು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್. ಲಿಂಗರಾಜ್ ಅವರು ಈ ಕುರಿತು ‘ಶಕ್ತಿ’ಯೊಂದಿಗೆ ಮಾತನಾಡುತ್ತಾ, ಗಣಿಗಾರಿಕೆ ಬಗ್ಗೆ ವಿವಾದ ಹಿನ್ನೆಲೆಯಲ್ಲಿ ಮೇಲಧಿಕಾರಿಗಳು ಖುದ್ದು ಭೇಟಿ ನೀಡಿದ್ದಾಗಿ ಸ್ಪಷ್ಟಪಡಿಸಿದರು. ಅಲ್ಲದೆ ದುಬಾರೆ ಸಾಕಾನೆ ಶಿಬಿರದಲ್ಲಿ 30 ಆನೆಗಳು ಇದ್ದು, ನಿರ್ವಹಣೆ ಇತ್ಯಾದಿ ಕಷ್ಟಸಾಧ್ಯವೆಂದು ನೆನಪಿಸಿದರು.
ಅಲ್ಲದೆ ಸರಕಾರದ ಆದೇಶದಂತೆ ಛತ್ತಿಸ್‍ಘಡಕ್ಕೆ ಮೂರು ಸಾಕಾನೆಗಳನ್ನು ಸಾಗಿಸಿದ್ದು, ಅವುಗಳೊಂದಿಗೆ ನುರಿತ ಮಾವುತರು ತಿಂಗಳುಗಟ್ಟಲೆ ಅಲ್ಲಿಗೆ ತೆರಳಿ, ಈಗಾಗಲೇ ತರಬೇತಿಗೊಂಡಿರುವ ಛತ್ತಿಸ್‍ಘಡದ ಮಾವುತರು ಹೊಂದಿಕೊಂಡ ಬಳಿಕ ಹಿಂತಿರುಗಲಿದ್ದಾರೆ ಎಂದು ಮಾಹಿತಿ ನೀಡಿದರು.
ಬೆಳಗಾರನ ಸಾವಿಗೆ ಆತಂಕ: ಕಳೆದ ಆರು ತಿಂಗಳ ಬಳಿಕ ಇಂದು ಸಿದ್ದಾಪುರ ಬಳಿ ಬೆಳೆಗಾರರೊಬ್ಬರು ಕಾಡಾನೆ ಧಾಳಿಯಿಂದ ಸಾವನ್ನಪ್ಪಿದ ಬಗ್ಗೆ ವಿಷಾದಿಸಿದ ಲಿಂಗರಾಜ್, ಆನೆ - ಮಾನವ ಸಂಘರ್ಷ ತಪ್ಪಿಸಲು ಇಲಾಖೆಯಿಂದ ಸಾಧ್ಯವಾಗುವ ಕ್ರಮಗಳನ್ನು ಅನುಸರಿಸುತ್ತಿದ್ದು, ಇಂತಹ ದುರಂತಗಳು ಮರುಕಳಿಸದಂತೆ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಕಾಮಗಾರಿ ಪರಿಶೀಲನೆ : ಅರಣ್ಯ ಇಲಾಖೆಯಿಂದ ಅಲ್ಲಲ್ಲಿ ವನ್ಯ ಪ್ರಾಣಿಗಳಿಗಾಗಿ ನೀರಿನ ಕೆರೆಗಳನ್ನು ಕೂಡ ತೆಗೆಸಲಾಗಿದೆ ಎಂದ ಅವರು, ಮಾಂದಲಪಟ್ಟಿ ವ್ಯಾಪ್ತಿಯಲ್ಲಿ ನಿರರ್ಥಕ ಕೆರೆಗಳೊಂದಿಗೆ ನೀರಿಲ್ಲದೆ ಇಲಾಖೆ ಹಣ ವ್ಯರ್ಥಗೊಂಡಿರುವ ಆರೋಪ ಕುರಿತು ಖುದ್ದು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವದು ಎಂದು ಭರವಸೆ ನೀಡಿದರು.
ಭಾಗಮಂಡಲ ವರದಿ
ಕರಿಕೆ: ರಾಜ್ಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆ) ಅಶೋಕ್ ಕುಮಾರ್ ಗರ್ಗ್ ಅವರು ಭಾಗಮಂಡಲ ತಲಕಾವೇರಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ ತಲಕಾವೇರಿ ವನ್ಯಧಾಮಕ್ಕೆ ಭೇಟಿ ನೀಡಿ ಔಷಧೀಯ ಸಸ್ಯಗಳ ನರ್ಸರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ ಅರಣ್ಯ ಸಂರಕ್ಷಣೆ, ಆನೆ ಮಾನವ ಸಂಘರ್ಷದ ಬಗ್ಗೆ ಸೂಕ್ತ ಭದ್ರತಾ ಕ್ರಮವಹಿಸುವಂತೆ ಸೂಚಿಸಿದರು. ಅಗತ್ಯವಿರುವ ಕಡೆ ರೈಲ್ವೆ ಕಂಬಿ ಅಳವಡಿಸುವಂತೆ ಸಲಹೆ ನೀಡಿದರು. ಈ ಸಂದರ್ಭ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜು, ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಾಣಾಧಿಕಾರಿ ಜಯ, ವಲಯಾರಣ್ಯಾಧಿಕಾರಿ ಮರಿಸ್ವಾಮಿ, ಆರ್‍ಎಫ್‍ಒ ಚಂಗಪ್ಪ ಹಾಜರಿದ್ದರು.