ಗೋಣಿಕೊಪ್ಪ ವರದಿ, ಜ. 22 : ದಿಡ್ಡಳ್ಳಿಯಲ್ಲಿ ಭೂಮಿ ಹಕ್ಕಿಗಾಗಿ ಬುಡಕಟ್ಟು ಜನಾಂಗದ ಜೀವನದಲ್ಲಿ ತಲ್ಲಣ ಸೃಷ್ಟಿಸಲು ಸರ್ಕಾರಿ ಸಂಸ್ಥೆಗಳ ಅವೈಜ್ಞಾನಿಕ ಯೋಜನೆಗಳು ಮೂಲ ಕಾರಣ ಎಂದು ಹನಗೋಡು ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕ ಡಾ. ಹೆಚ್. ಜಯಕುಮಾರ್ ಆರೋಪಿಸಿದರು.
ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಬುಡಕಟ್ಟು ಕಲ್ಪನೆಯಲ್ಲಿ ಕೊಡಗಿನ ಬುಡಕಟ್ಟು ಜನಾಂಗಗಳ ಬದುಕು ಕುರಿತಾದ ರಾಷ್ಟ್ರೀಯ ಸಂಕಿರಣದಲ್ಲಿ ದಿಡ್ಡಳ್ಳಿಯಲ್ಲಿ ಜೇನುಕುರುಬರನ್ನು ಒಕ್ಕಲೆಬ್ಬಿಸಿದ ಪರಿಣಾಮ ಹಾಗೂ ಪರಿಹಾರಗಳು ಎಂಬ ವಿಷಯದಲ್ಲಿ ಮಾತನಾಡಿದರು. ಮರೆಯಾಗುತ್ತಿ ರುವ ಬುಡಗಟ್ಟು ಜನಾಂಗಗಳು ಹಾಗೂ ಬಹುಮತೀಯರ ರಾಜಕೀಯ ವಿಷಯ ಮಂಡಿಸಿದ ತಲಚೇರಿ ಸರ್ಕಾರಿ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ. ಸಾಬು ಥೋಮಸ್, ಕೊಡಗಿನ ಬುಡಕಟ್ಟು ಜನಾಂಗಗಳ ಶೈಕ್ಷಣಿಕವಾಗಿ ಹಿಂದುಳಿದ ಕಾರಣ ಅಭಿವೃದ್ದಿ ಹೊಂದಿಲ್ಲ. ಶಿಕ್ಷಣ ವಂಚಿತರ ಸಂಖ್ಯೆ ಅಧಿಕವಾಗಿದೆ. ಶೈಕ್ಷಣಿಕ ಹಾಗೂ ರಾಜಕೀಯ ಸಬಲತೆ ಕಂಡು ಬರುತ್ತಿಲ್ಲ. ಅಭಿವೃದ್ದಿಯ ಕಾರ್ಯ ಗಳು ಬುಡಕಟ್ಟು ಜನಾಂಗಗಳನ್ನು ಪ್ರತಿನಿಧಿಸುತ್ತಿಲ್ಲ. ಬುಡಕಟ್ಟು ಜನಾಂಗಗಳು ಹೆಚ್ಚಿರುವ ಪ್ರಾಂತ್ಯಗಳಲ್ಲಿ ಅಭಿವೃದ್ದಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವಾಗ ಜನಾಂಗಗಳ ಹಿತದೃಷ್ಟಿಯನ್ನು ಕಾಪಾಡಬೇಕು ಎಂದು ಹೇಳಿದರು.
ಜಾಗತೀಕರಣ ಹಾಗೂ ಬುಡಕಟ್ಟು ಜನಾಂಗಗಳು ವಿಷಯದಲ್ಲಿ ಕೇರಳ ವಿಶ್ವವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಡಾ. ಸುರೇಶ್ ಮಾತನಾಡಿ, ಜಾಗತೀಕರಣ ಬುಡಕಟ್ಟು ಜನಾಂಗಗಳ ಜೀವನ ಕ್ರಮದಲ್ಲಿ ಬದಲಾವಣೆ ತಂದಿದೆ. ಮಾನವ ಹಕ್ಕುಗಳ ಮೇಲೆ ಪ್ರಭಾವ ಬೀರಿ ಬುಡಕಟ್ಟು ಜನಾಂಗಗಳನ್ನು ದುರ್ಬಲರನ್ನಾಗಿ ಮಾಡಿದೆ. ಕಡೆಗಣನೆಗೆ ಒಳಗಾದ ಕಾರಣ ಜಾಗತೀಕರಣದ ಪರಿಣಾಮಗಳನ್ನು ಹೆಚ್ಚಾಗಿ ಬುಡುಕಟ್ಟು ಜನಾಂಗ ಅನುಭವಿಸುತ್ತಿರುವದನ್ನು ನಾವು ಕಾಣಬಹುದಾಗಿದೆ. ಸಂಘಟನೆ ಹಾಗೂ ಶಿಕ್ಷಣದ ಕೊರತೆಯಿಂದಾಗಿ ಹಕ್ಕುಗಳನ್ನು ಪಡೆಯಲು ಸಾಧ್ಯವಾಗಿಲ್ಲ ಎಂದು ಹೇಳಿದರು. ಆರೋಗ್ಯ ರಕ್ಷಣೆಯಲ್ಲಿ ಮಲೆ ಕುಡಿಯ ಜನಾಂಗದ ಅಪ್ರತಿಮ ಜ್ಞಾನ ಎಂಬ ವಿಷಯವನ್ನು ಮಾನವ ಶಾಸ್ತ್ರೀಯ ತಜ್ಞರುಗಳಾದ ಡಾ. ಚೆಲುವಾಂಬ, ಡಾ. ಕೆ. ಜಿ ರಮೇಶ್, ಡಾ. ಅಪ್ಪಾಜಿ ಗೌಡ ಅವರುಗಳು ಮಂಡಿಸಿದರು. ಪೊನ್ನಂಪೇಟೆ ಅರಣ್ಯ ಮಾಹವಿದ್ಯಾಲಯ ಮುಖ್ಯಸ್ಥ ಡಾ. ಸಿ.ಜಿ ಕುಶಾಲಪ್ಪ, ಕಾರ್ಯಕ್ರಮ ಸಂಚಾಲಕ ಡಾ. ಜಡೇಗೌಡ, ಪ್ರಾಧ್ಯಾಪಕರುಗಳಾದ ಡಾ. ಕೆಂಚರೆಡ್ಡಿ, ಡಾ. ರಾಮಕೃಷ್ಣ ಹೆಗಡೆ ಉಪಸ್ಥಿತರಿದ್ದರು.