ಮಡಿಕೇರಿ, ಜ. 22 : ಕೊಡಗು ಜಿಲ್ಲೆಯ ಮತ್ತಿಗೋಡುವಿನಿಂದ ಮೂರು ಹಾಗೂ ದುಬಾರೆ ಸಾಕಾನೆ ಶಿಬಿರದಿಂದ ಮೂರು ಆನೆಗಳನ್ನು ಸೇರಿದಂತೆ ಒಟ್ಟು 6 ಆನೆಗಳನ್ನು ಇಂದು ಛತ್ತಿಸ್‍ಘಡ ರಾಜ್ಯಕ್ಕೆ ಲಾರಿಗಳ ಮುಖಾಂತರ ಒಯ್ಯಲಾಯಿತು. ದುಬಾರೆಯ ಸಾಕಾನೆ ಶಿಬಿರದಲ್ಲಿ 30ಕ್ಕೂ ಅಧಿಕ ಆನೆಗಳಿದ್ದು, ಈ ಪೈಕಿ ಇಂದು ಮೂರು ಆನೆಗಳನ್ನು ಮತ್ತು ಮತ್ತಿಗೋಡುವಿನಲ್ಲಿದ್ದ 20ಕ್ಕೂ ಅಧಿಕ ಆನೆಗಳ ಪೈಕಿ ಮೂರನ್ನು ಹೊರರಾಜ್ಯಕ್ಕೆ ಕಳುಹಿಸಿಕೊಡಲಾಯಿತು.
*ಗೋಣಿಕೊಪ್ಪಲು : ಕೊಡಗಿನ ಮತ್ತಿಗೋಡು ಶಿಬಿರದಲ್ಲಿ ನೀಡಿದ ಆಹಾರ ತಿಂದು ಆರೋಗ್ಯಕರವಾಗಿದ್ದ ಮೂರು ಆನೆಗಳು ಸೋಮವಾರ ಸಂಜೆ ಕೊಡಗಿನ ಗಡಿದಾಟಿದವು. ಅಲ್ಲಿಂದ ಮುಂದೆ ರಾಜ್ಯವನ್ನೇ ದಾಟಿ ಉತ್ತರ ಭಾರತದ ಛತ್ತೀಸ್‍ಗಡ್ ರಾಜ್ಯಕ್ಕೆ ತೆರಳಲಿವೆ. ಕೊಳ್ಳೆಗಾಲ ವನ್ಯಜೀವಿ ವಿಭಾಗದ ರಾಂಪುರದಲ್ಲಿ 2016ರಲ್ಲಿ ಸೆರೆ ಹಿಡಿದಿದ್ದ ದುರ್ಯೋಧನ (32), ಅಂತರಸಂತೆ ವನ್ಯಜೀವಿ ವಿಭಾಗದ ಸುಂಕದಕಟ್ಟೆ ಸಾಕಾನೆ ಶಿಬಿರದಿಂದ ತಂದಿದ್ದ ಗಂಗೆ (21), ಯೋಗಲಕ್ಷ್ಮಿ (15) ಆನೆಗಳು ಸೋಮವಾರ ಸಂಜೆ ತೆರಳಿದವು.
ಈಗಾಗಲೆ ಆನೆಯನ್ನು ಸಾಗಿಸಲು ಛತ್ತೀಸ್‍ಘಡ್‍ನ ಸಿಸಿಎಫ್, ವನ್ಯಜೀವಿ ವಿಭಾಗದ ವೈದ್ಯರು, ಐಎಫ್‍ಎಸ್ ಅಧಿಕಾರಿಗಳು, ಆರ್‍ಎಫ್‍ಒ, ಆನೆ ಕ್ಷೇತ್ರ ನಿರ್ದೇಶಕರು ಆಗಮಿಸಿದ್ದಾರೆ. ಆನೆಯೊಂದಿಗೆ ಮತ್ತಿಗೋಡು ಶಿಬಿರದ ಕಾವಾಡಿಗಳಾದ ಜಿ.ಎ.ಸಂತೋಷ್, ಹರೀಶ್, ನಂಜುಂಡಸ್ವಾಮಿ ತೆರಳಿದರು. ಇವರು ಕೆಲವಾರು ತಿಂಗಳು ಛತ್ತಿಸ್‍ಗಡ್‍ದಲ್ಲಿದ್ದು ಬಳಿಕ ಮರಳಲಿದ್ದಾರೆ. ಈ ಆನೆಗಳನ್ನು ಪಳಗಿಸಲು ಮೂರು ತಿಂಗಳಹಿಂದೆಯೇ ಛತ್ತಿಸ್‍ಘಡ್‍ದಿಂದ ಮೂವರು ಮಾವುತರು ಮತ್ತಿಗೋಡಿಗೆ ಬಂದಿದ್ದರು. ಇವರು ಛತ್ತಿಸ್‍ಗಡ್‍ಗೆ ತೆರಳಿದ ಆನೆಯೊಂದಿಗೆ ಒಡನಾಟ ಇಟ್ಟುಕೊಂಡು ಅವುಗಳನ್ನು ಪಳಗಿಸಿದ್ದಾರೆ. ಪರಸ್ಪರ ಎರಡು ರಾಜ್ಯಗಳ ಒಪ್ಪಂದದಂತೆ ಆನೆಗಳನ್ನು ಛತ್ತಿಸ್‍ಗಡ್‍ಗೆ ಕಳಿಸಲಾಗುತ್ತಿದೆ ಎಂದು ಆನೆಶಿಬಿರದ ವಲಯ ಅರಣ್ಯಾಧಿಕಾರಿ ಕಿರಣ್‍ಕಮಾರ್ ತಿಳಿಸಿದರು. ವನ್ಯಜೀವಿ ವಿಭಾಗದ ವೈದ್ಯಾಧಿಕಾರಿ ಡಾ.ಮುಜೀಬ್, ಎಸಿಎಫ್ ಪ್ರಸನ್ನಕುಮಾರ್ ಹಾಜರಿದ್ದರು.
ಕುಶಾಲನಗರ ವರದಿ
ಕುಶಾಲನಗರ: ಮಾವುತರ ತೀವ್ರ ವಿರೋಧದ ನಡುವೆ ದುಬಾರೆ ಸಾಕಾನೆ ಶಿಬಿರದಿಂದ ಮೂರು ಸಾಕಾನೆಗಳನ್ನು ಛÀತ್ತೀಸ್‍ಘಡ ರಾಜ್ಯಕ್ಕೆ ಕೊಂಡೊಯ್ಯಲಾಯಿತು. ಸಾಕಾನೆಗಳಾದ ಅಜ್ಜಯ್ಯ, ತೀರ್ಥರಾಮ, ಪರಶುರಾಮ ಮೂರು ಆನೆಗಳನ್ನು ಛತ್ತೀಸ್‍ಘಡದಿಂದ ಆಗಮಿಸಿದ್ದ ಹಿರಿಯ ಅಧಿಕಾರಿಗಳು, ಸಿಬ್ಬಂದಿಗಳು ಲಾರಿ ಮೂಲಕ ಸ್ಥಳಾಂತರಿಸುವ ಸಂದರ್ಭ ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಅಶೋಕ್‍ಕುಮಾರ್ ಗರ್ಗ್ ಸೇರಿದಂತೆ ಹಿರಿಯ ಅಧಿಕಾರಿಗಳು, ಸಿಬ್ಬಂದಿಗಳು ಶಿಬಿರದಿಂದ ಬೀಳ್ಕೊಟ್ಟರು. ಶಿಬಿರದಿಂದ ಸಾಕಾನೆಗಳನ್ನು ಒಯ್ಯುವ ಬಗ್ಗೆ ಕೆಲವು ಮಾವುತರು ತೀವ್ರ ವಿರೋಧ ವ್ಯಕ್ತಪಡಿಸುವದರೊಂದಿಗೆ ಅಧಿಕಾರಿಗಳು ಮತ್ತು ಮಾವುತರ ನಡುವೆ ಶೀತಲ ಸಮರ ಕಂಡುಬಂದಿತ್ತು. 3 ದಿನಗಳಿಂದ ಈ ಮೂರು ಆನೆಗಳನ್ನು ಕಾಡಿನಿಂದ ಶಿಬಿರಕ್ಕೆ ತರಲು ಕೂಡ ಹಿಂದೇಟು ಹಾಕಿದ ಘಟನೆ ನಡೆದಿತ್ತು.