ನಾಪೆÇೀಕ್ಲು, ಜ. 22: ನಾಲ್ಕುನಾಡು ವ್ಯಾಪ್ತಿಯಲ್ಲಿ ಈ ವರ್ಷದ ಕಾಫಿ ಫಸಲಿನಲ್ಲಿ ಭಾರೀ ಕುಸಿತ ಕಂಡು ಬಂದಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ. ಬೆರಳೆಣಿಕೆಯ ಬೆಳೆಗಾರರನ್ನು ಹೊರತು ಪಡಿಸಿದರೆ ಈ ವ್ಯಾಪ್ತಿಯಲ್ಲಿ ಈ ವರ್ಷದ ಕಾಫಿ ಪಸಲಿನಲ್ಲಿ ಶೇ. 40 ರಿಂದ 60 ರಷ್ಟು ಫಸಲು ಕುಸಿತಗೊಂಡಿದೆ. ಕಾಫಿ ಫಸಲು ಕುಸಿತ, ನೆಲಕಚ್ಚಿದ ಕಾಫಿ ಧಾರಣೆ, ಕಾರ್ಮಿಕರ ಕೊರತೆ, ದುಬಾರಿ ಕೂಲಿ ಬೆಳೆಗಾರರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.
ಈ ವ್ಯಾಪ್ತಿಯ ನಾಲಡಿ, ಯವಕಪಾಡಿ, ನೆಲಜಿ, ಪೇರೂರು, ಬಲ್ಲಮಾವಟಿ ವ್ಯಾಪ್ತಿಯಲ್ಲಿ ಪ್ರತೀ ವರ್ಷ ಹೆಚ್ಚಿನ ಮಳೆಯ ಕಾರಣದಿಂದ ಕಾಫಿ ಪಸಲಿನ ಕೊರತೆ ಕಂಡುಬರುತ್ತಿದೆ. ಆದರೆ ಪ್ರಸಕ್ತ ವರ್ಷ ಎಲ್ಲಾ ಕಡೆಗಳಲ್ಲಿಯೂ ಕಾಫಿ ಫಸಲಿನಲ್ಲಿ ಕುಸಿತ ಕಂಡುಬಂದಿದೆ. ಇದು ಹವಾಮಾನ ವೈಪರೀತ್ಯದಿಂದ ಉಂಟಾಗಿದೆಯೇ ಅಥವಾ ಬೇರೆ ಕಾರಣ ಇದೆಯೇ ಎಂಬ ಬಗ್ಗೆ ಬೆಳೆಗಾರರಿಗೆ ತಿಳಿಯದಂತಾಗಿದೆ.
ಈ ಬಾರಿಯ ಕಾಫಿ ಫಸಲಿನ ಬಗ್ಗೆ `ಶಕ್ತಿ’ ಬೆಳೆಗಾರರ ಅಭಿಪ್ರಾಯ ಸಂಗ್ರಹಿಸಿದಾಗ ನಾಲಡಿ ಗ್ರಾಮದ ಬೊಳಿಯಾಡಿರ ಸಂತು ಸುಬ್ರಮಣಿ, ಕುಂಜಿಲ ಗ್ರಾಮದ ಬಾಚಮಂಡ ಲವ ಚಿಣ್ಣಪ್ಪ, ಕೊಳಕೇರಿ ಗ್ರಾಮದ ಕುಂಡ್ಯೋಳಂಡ ಸಂಪತ್ ದೇವಯ್ಯ, ನೆಲಜಿ ಗ್ರಾಮದ ಮುಕ್ಕಾಟಿರ ವಿನಯ್, ಪೇರೂರು ಗ್ರಾಮದ ಪಾಲೆಯಡ ಅಯ್ಯಪ್ಪ, ಬಲ್ಲಮಾವಟಿ ಗ್ರಾಮದ ಚೋಕಿರ ಭೀಮಯ್ಯ ಕಳೆದ ಬಾರಿ ಉತ್ತಮ ಹೂ ಮಳೆಯಾದರೂ ಕೂಡ ಕಾಫಿ ಫಸಲು ಕಡಿಮೆಯಾಗಿದೆ ಇದಕ್ಕೆ ಕಾರಣ ತಿಳಿದು ಬಂದಿಲ್ಲ ಎಂದು ತಿಳಿಸಿದ್ದಾರೆ.
ಕಾಫಿ ಫಸಲು ಕೊರತೆಯಿಂದ ಕಂಗಾಲಾದ ಬೆಳೆಗಾರರಿಗೆ ದಿನದಿಂದ ದಿನಕ್ಕೆ ಬೆಲೆ ಕುಸಿತ, ಕಾರ್ಮಿಕರ ಕೊರತೆ, ಹೆಚ್ಚಿದ ಕೂಲಿ ಸಮಸ್ಯೆ ಉಂಟುಮಾಡಿದೆ. ಕಾಫಿ ಮಂಡಳಿ ಕಾಫಿಗೆ ಬೆಂಬಲ ಬೆಲೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಬಿದ್ದಾಟಂಡ ಪಾಪ ಮುದ್ದಯ್ಯ ಅಭಿಪ್ರಾಯಪಟ್ಟಿದ್ದಾರೆ.