ಸಿದ್ದಾಪುರ, ಜ. 22: ಕಾಡಾನೆ ಧಾಳಿಗೆ ಸಿಲುಕಿ ಕಾಫಿ ಬೆಳೆಗಾರರೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದಲ್ಲಿ ನಡೆದಿದೆ.ಕರಡಿಗೋಡು ಗ್ರಾಮದ ನಿವಾಸಿ ಹಾಗೂ ಕಾಫಿ ಬೆಳೆಗಾರರಾದ ಕುಕ್ಕುನೂರು ಮೋಹನ್ ದಾಸ್ (70) ಎಂಬವರು ಇಂದು ತೋಟದಲ್ಲಿ ಮಧ್ಯಾಹ್ನ ಕಾಫಿ ಕುಯ್ದು, ಊಟಕ್ಕೆಂದು ತೆರಳುವ ಸಂದರ್ಭ ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳ ಹಿಂಡಿನ ಪೈಕಿ ಒಂಟಿ ಸಲಗವೊಂದು ಏಕಾಏಕಿ ಮೋಹನ್ ದಾಸ್ ಅವರ ಮೇಲೆ ಧಾಳಿ ನಡೆಸಿ ಸೊಂಡಿಲಿನಿಂದ ಎತ್ತಿ ದೂರಕ್ಕೆ ಎಸೆದ ಪರಿಣಾಮ ಗಂಭೀರ ಗಾಯಗೊಂಡ ಮೋಹನ್ ದಾಸ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೋಹನ್ ದಾಸ್ ಇಂದು ಬೆಳಗ್ಗೆ ಎಂದಿನಂತೆ ಕಾಫಿ ತೋಟದಲ್ಲಿ ಕಾಫಿ ಕುಯ್ಯಲು ಕಾರ್ಮಿಕರನ್ನು ಬಿಟ್ಟು ತಾವು ಕೂಡ ಅವರೊಂದಿಗಿದ್ದರು. ಸಮೀಪದ ಕಾಫಿ ತೋಟದಲ್ಲಿ ಸುಮಾರು 6 ಕ್ಕೂ ಅಧಿಕ ಕಾಡಾನೆಗಳು ಬೀಡುಬಿಟ್ಟಿದ್ದು ಈ ಕುರಿತು ಎಚ್ಚರ ವಹಿಸುವಂತೆ ಕಾರ್ಮಿಕರೊಂದಿಗೆ ಮಾತನಾಡಿದ್ದರು ಎನ್ನಲಾಗಿದೆ. ಅಪರಾಹ್ನ 12.40 ರ ಸಮಯಕ್ಕೆ ಕಾರ್ಮಿಕರನ್ನು ಊಟಕ್ಕೆ ತೆರಳುವಂತೆ ತಿಳಿಸಿ ಬಳಿಕ ತಾನು ಊಟಕ್ಕೆಂದು ಬರುತ್ತಿದ್ದ ಸಂದರ್ಭ ಕಾಡಾನೆ ಧಾಳಿ ನಡೆಸಿದೆ.
ಕಾಡಾನೆಯು ಮೋಹನ್ ದಾಸ್ ಅವರನ್ನು ಸೊಂಡಿಲಿನಿಂದ ಒಂದು ತೋಟದಿಂದ ಇನ್ನೊಂದು ತೋಟಕ್ಕೆ ಎಸೆದಿದೆ. ಕಾಡಾನೆ ತುಳಿತಕ್ಕೆ ಸಿಲುಕಿ ಮೋಹನ್ ದಾಸ್ ಅವರ ಮುಖ ಹಾಗೂ ಕಾಲು ಜಖಂಗೊಂಡಿದ್ದು ಅವರ ಬಟ್ಟೆ ಸಂಪೂರ್ಣ ಹರಿದು ಚಿಂದಿಯಾಗಿದೆ. ಮೋಹನ್ ದಾಸ್ ಅವರ ತೋಟದ ಸಮೀಪದಲ್ಲಿದ್ದ ಕಿಸಾನ್ ಎಂಬವರು ಊಟಕ್ಕೆಂದು ತೆರಳುವ ಸಂದರ್ಭ ಕಾಲುದಾರಿಯಲ್ಲಿ ಮೋಹನ್ ದಾಸ್ ಅವರು ಧರಿಸಿದ್ದ ಬಟ್ಟೆ ಹಾಗೂ ಪಾದರಕ್ಷೆಗಳು ಬಿದ್ದಿರುವದನ್ನು ಕಂಡು ಸಂಶಯದಿಂದ ತೋಟದತ್ತ ನೋಡಿದಾಗ ಕಾಫಿ ಗಿಡಗಳ ಮಧೆÉ್ಯ ಮೋಹನ್ ದಾಸ್ ಅವರ ಮೃತ ದೇಹ ಕಂಡು ಸಂಬಂಧಿಕರಿಗೆ ಕರೆಮಾಡಿ ಮಾಹಿತಿ ನೀಡಿದರು. ನಂತರ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದರು. ಕಾರ್ಮಿಕರು ಕೂಡ ಕೆಲಸ ಮಾಡುತ್ತಿರುವ ಸ್ಥಳದಿಂದ ಭಯ ಭೀತರಾಗಿ ಸ್ಥಳಕ್ಕೆ ಬಂದರು. ನಂತರ ಅರಣ್ಯ ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದರು. ಸ್ಥಳಕ್ಕೆ ವೀರಾಜಪೇಟೆ ಡಿ.ಎಫ್.ಓ. ಮರಿಯಾ ಕ್ರಿಸ್ಟಿರಾಜ್, ಎ.ಸಿ.ಎಫ್. ರೋಶಿಣಿ, ಉಪವಲಯ ಅರಣ್ಯಾದಿ üಕಾರಿ ದೇವಯ್ಯ, ತಹಶೀಲ್ದಾರ್ ಗೋವಿಂದರಾಜು, ಸಿದ್ದಾಪುರ ಠಾಣಾಧಿಕಾರಿ ಸುಬ್ರಮಣ್ಯ, ಇತರ ಇಲಾಖಾಧಿಕಾರಿಗಳು ಹಾಜರಿದ್ದರು.
ಮುಗಿಲು ಮುಟ್ಟಿದ ಆಕ್ರಂದನ
ಕಾಡಾನೆ ಧಾಳಿಗೆ ಸಿಲುಕಿ ದಾರುಣವಾಗಿ ಮೃತಪಟ್ಟ ಮೋಹನ್ ದಾಸ್ ಅವರ ಸಾವಿನ ಕುರಿತು ಅವರ ಪತ್ನಿ ಹಾಗೂ ಪುತ್ರಿಯರು, ಅಳಿಯಂದಿರು ಹಾಗೂ ಕುಟುಂಬಸ್ಥರು ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಇದೇ ಸಂದರ್ಭದಲ್ಲಿ ಕೆಲಸಕ್ಕಾಗಮಿಸಿದ್ದ ಸಮೀಪದ ತೋಟದ ಕಾರ್ಮಿಕರು ಕೂಡ ಮೃತದೇಹವನ್ನು ಕಂಡು ಕಣ್ಣೀರಿಡುತ್ತಿರುವ ದೃಶ್ಯ ಕಂಡು ಬಂತು.
ಅರಣ್ಯ ಸಚಿವರ ವಿರುದ್ದ ಮೊಕದ್ದಮೆ : ಸಂಕೇತ್
ಕಾಡಾನೆ ಧಾಳಿಗೆ ಸಿಲುಕಿ ಮೃತಪಟ್ಟ ಮೋಹನ್ ದಾಸ್ ಅವರ ಮೃತದೇಹವನ್ನು ವೀಕ್ಷಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಜೆ.ಡಿ.ಎಸ್ ಪಕ್ಷದ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಕಳೆದ 3 ವರ್ಷಗಳಿಂದ ಕಾಡಾನೆ ಧಾಳಿಗೆ ಸಿಲುಕಿ 38 ಮಂದಿ ಮೃತಪಟ್ಟಿದ್ದು ಸಿದ್ದಾಪುರ ಭಾಗದಲ್ಲಿ ಕಾಫಿ ಬೆಳೆಗಾರರು ಸೇರಿದಂತೆ 18 ಮಂದಿ ಕಾಡಾನೆ ಧಾಳಿಗೆ ಸಾವನ್ನಪ್ಪಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವರು ಜಿಲ್ಲೆಯಲ್ಲಿ ಕಾಡಾನೆ ಧಾಳಿಯನ್ನು ತಡೆಯಲು ಆಸಕ್ತಿ ವಹಿಸದೇ ನಿರ್ಲಕ್ಷ್ಯ ವಹಿಸಿರುವದು ಖಂಡನೀಯ. ಈ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಹಾಗೂ ಅರಣ್ಯ ಇಲಾಖಾಧಿಕಾರಿಗಳ ಮೇಲೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗುವದೆಂದು ತಿಳಿಸಿದರು. ಇದಲ್ಲದೆ ಇಲಾಖಾಧಿಕಾರಿಗಳು ಕಾಡಾನೆ ಧಾಳಿಗೆ ಸಿಲುಕಿ ಸಾವನಪ್ಪಿದ ಕುಟುಂಬಕ್ಕೆ 5 ಲಕ್ಷ ಪರಿಹಾರದ ಬದಲು ರೂ. 25 ಲಕ್ಷ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಮೃತ ಮೋಹನ್ ದಾಸ್ ಅವರ ಕುಟುಂಬದವರು ಅರಣ್ಯ ಇಲಾಖೆಯ ವಿರುದ್ದ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದಲ್ಲಿ ಕಾನೂನು ಹೋರಾಟದ ಸಂಪೂರ್ಣ ವೆಚ್ಚವನ್ನು ಜೆ.ಡಿ.ಎಸ್ ಪಕ್ಷವು ಭರಿಸಲಿದೆ ಎಂದು ಸಂಕೇತ್ ತಿಳಿಸಿದರು.
ಅರಣ್ಯ ಇಲಾಖೆ ವಿರುದ್ದ ಆಕ್ರೋಶ
ಬೆಳೆಗಾರರು, ಕಾರ್ಮಿಕರು ಹಾಗೂ ಗ್ರಾಮಸ್ಥರು ತಂಡೋಪ ತಂಡವಾಗಿ ಸ್ಥಳಕ್ಕೆ ಆಗಮಿಸಿ, ಅರಣ್ಯ ಇಲಾಖೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ತೋಟದಿಂದ ಸ್ಥಳಾಂತರ ಮಾಡಬೇಕೆಂದು ಒತ್ತಾಯಿಸಿದರಲ್ಲದೆ, ಕಾಡಾನೆಗಳ ಹಾವಳಿಯಿಂದಾಗಿ ಕಾಫಿ ತೋಟದಲ್ಲಿ ಕಾರ್ಮಿಕರಿಗೆ ಕೆಲಸಮಾಡಲು ಭಯವಾಗುತ್ತಿದ್ದು ಕೂಡಲೇ ಕಾಡಾನೆಗಳು ಕಾಫಿ ತೋಟಗಳಿಗೆ ನುಗ್ಗದಂತೆ ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಆಗ್ರಹಿಸಿದರು. ಅರಣ್ಯ ಇಲಾಖಾಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
ಅರಣ್ಯ ಇಲಾಖೆಯ ವಿರುದ್ದ ಮೊಕದ್ದಮೆ
ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ಮೋಹನ್ ದಾಸ್ ಅವರ ಮೃತದೇಹವನ್ನು ಸ್ಥಳದಲ್ಲೇ ಮರಣೋ ತ್ತರ ಪರೀಕ್ಷೆ ನಡೆಸಲಾಯಿತು. ಮೋಹನ್ ದಾಸ್ ಅವರ ದಾರುಣ ಸಾವಿಗೆ ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿ ಜಿಲ್ಲಾ ಬೆಳೆಗಾರರು ಹಾಗೂ ಕಾರ್ಮಿಕರ ಅರಣ್ಯ ಹೋರಾಟ ಸಮಿತಿ ವತಿಯಿಂದ ಅರಣ್ಯ ಇಲಾಖಾಧಿಕಾರಿ ಗಳ ವಿರುದ್ದ ಸಿದ್ದಾಪುರ ಠಾಣೆಗೆ ದೂರು ನೀಡಲಾಗಿದೆ.
ಸಿದ್ದಾಪುರ ಸ್ವಯಂಪ್ರೇರಿತ ಬಂದ್
ಕಾಡಾನೆ ಧಾಳಿಗೆ ಸಿಲುಕಿ ದಾರುಣವಾಗಿ ಮೃತಪಟ್ಟ ಕರಡಿಗೋಡು ಗ್ರಾಮದ ಕಾಫಿ ಬೆಳೆಗಾರ ಹಾಗೂ ಶಾಂತ ಸ್ವಭಾವದವರಾಗಿದ್ದ ಕುಕ್ಕುನೂರು ಮೋಹನ್ ದಾಸ್ ಅವರ ಸಾವಿನ ಸುದ್ದಿಯಿಂದ ಸಿದ್ದಾಪುರ ಕೆಲ ಕಾಲ ಶೋಕದಲ್ಲಿ ಮುಳುಗಿತ್ತು. ಸಿದ್ದಾಪುರ ಪಟ್ಟಣದ ವರ್ತಕರು ಅಂಗಡಿಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಮುಚ್ಚಿ ಸಂತಾಪ ಸೂಚಿಸಿದರು.
ಜನಪ್ರತಿನಿಧಿಗಳ ಭೇಟಿ
ಸ್ಥಳಕ್ಕೆ ಜಿಲ್ಲೆಯ ಶಾಸಕರಾದ ಕೆ.ಜಿ.ಬೋಪಯ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ ಭೇಟಿ ನೀಡಿದರು.
-ವರದಿ: ವಾಸು, ಸುಧಿ