ಮಡಿಕೇರಿ, ಜ. 22: ‘ಸರಕಾರಿ ಕೆಲಸ ದೇವರ ಕೆಲಸ’ ಎಂಬ ಮಾತಿದೆ. ಹಾಗಾಗಿ ಪ್ರಾಮಾಣಿಕವಾಗಿ ದೇವರ ಕೆಲಸ ಮಾಡುವ ಸರಕಾರಿ ಸಿಬ್ಬಂದಿಗಳಿಗೆ ಸರಕಾರ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತಿದೆ. ವಸತಿ ಸೌಕರ್ಯವನ್ನು ಕೂಡ ನೀಡಿದೆ. ಆದರೆ ಇಲ್ಲೊಬ್ಬ ಅಧಿಕಾರಿ ಸರಕಾರಿ ಕೆಲಸ ತನ್ನ ಸ್ವಂತ ಕೆಲಸವೆಂಬಂತೆ ಯಾರಿಗೋ ಮಂಜೂರಾದ ವಸತಿಗೃಹದ ಕೀಲಿ ಪಡೆದುಕೊಂಡು ಇನ್ನಿತರ ಚಟುವಟಿಕೆಗಳಿಗೆ ಬಳಸಿಕೊಂಡಿದ್ದಲ್ಲದೆ, ಮನೆಗೆ ಕಾಂಪೌಂಡ್ ನಿರ್ಮಿಸಲು ಮುಂದಾದ ಸಂದರ್ಭ ಸ್ಥಳೀಯರ ಆಕ್ಷೇಪದಿಂದಾಗಿ ಕಾಮಗಾರಿ ಸ್ಥಗಿತಗೊಂಡ ಘಟನೆ ಇಂದು ನಡೆದಿದೆ.
ಇಲ್ಲಿನ ಫೀ.ಮಾ. ಕಾರ್ಯಪ್ಪ ವೃತ್ತದಿಂದ ಸಿದ್ದಾಪುರ ಕಡೆಗೆ ತೆರಳುವ ರಸ್ತೆ ಬದಿಯಲ್ಲಿ ಲೋಕೋಪಯೋಗಿ ಇಲಾಖೆಗೆ ಸೇರಿದ ವಸತಿಗೃಹಗಳಿವೆ. ಎಲ್ಲಾ ವಸತಿಗೃಹಗಳಲ್ಲಿ ಸಿಬ್ಬಂದಿಗಳು ವಾಸವಾಗಿದ್ದಾರೆ. ಆದರೆ, ಒಂದು ಗೃಹ ಮಾತ್ರ ಕಳೆದ 2 ವರ್ಷಗಳಿಂದ ಖಾಲಿ ಬಿದ್ದಿದೆ.
(ಮೊದಲ ಪುಟದಿಂದ) ಈ ವಸತಿಗೃಹ ಲೋಕೋಪಯೋಗಿ ಇಲಾಖೆ ತಾಂತ್ರಿಕ ಸಹಾಯಕರಾದ ನಟೇಶ ಎಂಬವರಿಗೆ ಮಂಜೂರಾಗಿದೆ. ಆದರೆ ಅವರು ಅಲ್ಲಿ ವಾಸವಾಗಿಲ್ಲ. ಹಾಗಾಗಿ ಗೃಹದ ಕೀಲಿ ಕೈ ಪಡೆದುಕೊಂಡಿದ್ದ ಇಲಾಖೆಯ ಕಿರಿಯ ಅಭಿಯಂತರ ದೇವರಾಜು ಎಂಬವರು ಗೃಹವನ್ನು ಇನ್ನಿತರ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದರು. ಈ ಹಿಂದೆ ಮನೆಯೊಳಗೆ ಹಳೆಯ ಮರದ ಕೆಲಸ ಮಾಡಿದ್ದಲ್ಲದೆ, ಹೊರಗಿನವರು, ಚಲನಚಿತ್ರ ತಂಡದವರಿಗೆ ತಂಗಲು ಬಿಟ್ಟುಕೊಟ್ಟಿದ್ದರು. ಇದಕ್ಕೆ ಅಕ್ಕಪಕ್ಕದವರು ಆಕ್ಷೇಪಿಸಿದ್ದರಿಂದ ಮನೆಗೆ ಬೀಗ ಹಾಕಿದ್ದರು.
ಇದೀಗ ಇಂದು ದಿಢೀರನೆ ಇಟ್ಟಿಗೆ, ಮರಳು, ಸಿಮೆಂಟ್ ತಂದು ಮನೆಯ ಪ್ರವೇಶ ದಾರಿ ಹಾಗೂ ಪಕ್ಕದ ಮನೆಯ ಅಂಗಳದಲ್ಲಿ ಅಡ್ಡಲಾಗಿ ಆವರಣಗೋಡೆ ನಿರ್ಮಿಸಲು ಮುಂದಾಗಿದ್ದಾರೆ. ಇದನ್ನು ಗಮನಿಸಿದ ಆ ವಿಭಾಗದ ನಗರಸಭಾ ಸದಸ್ಯೆ ವೀಣಾಕ್ಷಿ ಪಕ್ಕದ ಮನೆಯವರಿಗೆ ವಿಚಾರ ತಿಳಿಸಿ, ಕಾಮಗಾರಿ ಬಗ್ಗೆ ಆಕ್ಷೇಪಿಸಿದ್ದಾರೆ. ಈ ಸಂದರ್ಭ ಅಭಿಯಂತರ ದೇವರಾಜು ಉದ್ಧಟತನದಿಂದ ವರ್ತಿಸಿದ್ದಾರೆ. ಅಸಭ್ಯವಾಗಿ ಮಾತನಾಡಿದ್ದಾರೆ. ಅಲ್ಲದೆ, ಕಾಮಗಾರಿಗೆ ಅಡ್ಡಿಪಡಿಸು ತ್ತಿರುವದಾಗಿ ದೂರು ನೀಡುವದಾಗಿ ಬೆದರಿಸಿದ್ದಾರೆ.
ಇದರಿಂದ ಅಸಮಾಧಾನಿತರಾದ ಅಕ್ಕಪಕ್ಕದವರು ಮಾಧ್ಯಮದವರಿಗೆ ವಿಷಯ ತಿಳಿಸಿದ್ದಾರೆ. ಮಾಧ್ಯಮ ದವರು ಬರುತ್ತಾರೆಂದು ತಿಳಿದ ಕೂಡಲೇ ಅಭಿಯಂತರ ಹಾಗೂ ಗುತ್ತಿಗೆದಾರ ರಾಜೀವ ಲೋಚನ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಆದೇಶವಿಲ್ಲ!
ಕಾಮಗಾರಿ ಬಗ್ಗೆ ಗುತ್ತಿಗೆದಾರ ರಾಜೀವ ಅವರಲ್ಲಿ ಪ್ರಶ್ನಿಸಿದಾಗ ಅವರಿಗೆ ಇನ್ನೂ ಕೂಡ ಕಾಮಗಾರಿ ನಡೆಸುವ ಬಗ್ಗೆ ಯಾವದೇ ಅನುಮತಿ, ಆದೇಶ ಪತ್ರ ನೀಡಿಲ್ಲ. ಬದಲಿಗೆ ಇಂಜಿನಿಯರ್ ಹೇಳಿದಕ್ಕಾಗಿ ಕೆಲಸ ಆರಂಭಿಸಿರುವದಾಗಿ ತಿಳಿಸಿದ್ದಾರೆ. ಈ ನಡುವೆ ಅಭಿಯಂತರರು ತರಾತುರಿಯಲ್ಲಿ ಕಚೇರಿಗೆ ತೆರಳಿ ‘ವಕ್ ಆರ್ಡರ್’ ಮಾಡಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಇತ್ತ ಗುತ್ತಿಗೆದಾರರು ಕಾಂಪೌಂಡ್ ಕೆಲಸ ನಿಲ್ಲಿಸಿ, ಮನೆಯ ಸುತ್ತ ಸ್ವಚ್ಛಗೊಳಿಸಲು ಕೆಲಸಗಾರರಿಗೆ ಸೂಚಿಸಿದ್ದಾರೆ.
ಕಾಮಗಾರಿ ಸ್ಥಗಿತ
ವಿಷಯ ತಿಳಿದು ಸ್ಥಳಕ್ಕೆ ಸಹಾಯಕ ಕಾರ್ಯಪಾಲಕ ಅಭಿಯಂತರ ಇಬ್ರಾಹಿಂ, ತಾಂತ್ರಿಕ ಸಹಾಯಕ ನಟೇಶ್ ಹಾಗೂ ದೇವರಾಜು ಸ್ಥಳಕ್ಕೆ ಬಂದಿದ್ದಾರೆ. ಈ ಸಂದರ್ಭ ಸ್ಥಳೀಯರು ದೇವರಾಜು ಅವರಿಂದ ಆಗುತ್ತಿರುವ ತೊಂದರೆ ಬಗ್ಗೆ ಇಬ್ರಾಹಿಂ ಅವರ ಗಮನಕ್ಕೆ ತಂದಿದ್ದಾರೆ. ಅಲ್ಲದೆ ನಟೇಶ್ ಅವರಿಗೆ ಮಂಜೂರಾದ ಮನೆಯನ್ನು ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ದೂರಿದರು. ಮಹಿಳೆಯರೊಂದಿಗೂ ಅನುಚಿತವಾಗಿ ವರ್ತಿಸುತ್ತಿರುವ ಬಗ್ಗೆ ಗಮನ ಸೆಳೆದರು.
ಸ್ಥಗಿತಕ್ಕೆ ಸೂಚನೆ
ವಿಷಯ ತಿಳಿದುಕೊಂಡ ಇಬ್ರಾಹಿಂ ಅವರು ರೂ. 2 ಲಕ್ಷ ವೆಚ್ಚದಲ್ಲಿ ಕಾಂಪೌಂಡ್ ಹಾಗೂ ದುರಸ್ತಿ ಕಾರ್ಯ ಕೈಗೊಂಡಿದ್ದು, ಕಾಂಪೌಂಡ್ ಅವಶ್ಯವಿಲ್ಲದಿದ್ದು, ಅದನ್ನು ಸ್ಥಗಿತಗೊಳಿಸಿ ದುರಸ್ತಿ ಕಾರ್ಯ ಮಾಡುವಂತೆ ಸೂಚಿಸಿದರು. ಅಲ್ಲದೆ ಮನೆಯನ್ನು ಬಳಸಿಕೊಳ್ಳದಿದ್ದಲ್ಲಿ ಮನೆಯನ್ನು ಹಿಂತಿರುಗಿಸುವಂತೆ ನಟೇಶ್ ಅವರಿಗೂ ಸೂಚನೆ ನೀಡಿದರು. ಪ್ರತಿಕ್ರಿಯಿಸಿದ ನಟೇಶ್ ಅವರು 15 ದಿನಗಳಲ್ಲಿ ವಸತಿಗೃಹಕ್ಕೆ ಬರುವದಾಗಿ ಹೇಳಿದರು.
ಇದೇ ವಸತಿಗೃಹದ ಹಿಂಭಾಗ ದಲ್ಲಿರುವ ವಸತಿಗೃಹದಲ್ಲಿ ನೆಲೆಸಿರುವ ದೇವರಾಜು ಅವರಿಗೆ ಇನ್ನು ಮುಂದಕ್ಕೆ ಇಂತಹ ಕಾರ್ಯಕ್ಕೆ ಮುಂದಾಗದಂತೆ ಸೂಚನೆ ನೀಡಿದರು. ನಂತರದಲ್ಲಿ ಪರಿಸ್ಥಿತಿ ತಿಳಿಯಾಯಿತು.