ನಾಪೋಕ್ಲು, ಜ. 22: ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಷನ್ ವತಿಯಿಂದ ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಸಲ್ಪಡುವ ರಾಜ್ಯ ಮಟ್ಟದ ಪ್ರತಿಭೋತ್ಸವ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಸಾಂಸ್ಕøತಿಕ ಹಬ್ಬವಾಗಿದ್ದು, ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ರಾಷ್ಟ್ರದ ಹಿತಾಸಕ್ತಿಗಾಗಿ ಬಳಸಬೇಕೆಂದು ಕರ್ನಾಟಕ ರಾಜ್ಯ ಎಸ್‍ವೈಎಸ್ ಅಧ್ಯಕ್ಷ ಜಿ.ಎಂ. ಮುಹಮ್ಮದ್ ಕಾಮಿಲ್ ಸಖಾಫಿ ಹೇಳಿದರು.

ನಾಪೋಕ್ಲು ಸಮೀಪದ ಕೊಟ್ಟಮುಡಿ ಮರ್ಕಝುಲ್ ಹಿದಾಯದಲ್ಲಿ ಎರಡು ದಿನಗಳ ಕಾಲ ನಡೆದ ರಾಜ್ಯ ಮಟ್ಟದ ಪ್ರತಿಭೋತ್ಸವ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎಸ್‍ಎಸ್‍ಎಫ್ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಎಸ್‍ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂಎಸ್‍ಎಂ ಝೈನಿ ಕಾಮಿಲ್ ಮಾತನಾಡಿ, 2003ರಲ್ಲಿ ಪ್ರಾರಂಭಗೊಂಡ ಪ್ರತಿಭೋತ್ಸವದ ಮೂಲಕ ಎಸ್‍ಎಸ್‍ಎಫ್ ಸಾಧಿಸಿರುವ ಸಾಧನೆ ಅನನ್ಯವೆಂದು ಬಣ್ಣಿಸಿದರು. ಪ್ರತಿಭೋತ್ಸವದಲ್ಲಿ ಪ್ರತಿಭೆಗಳನ್ನು ನೆರೆದವರು ಇಂದು ರಾಜ್ಯ ಸಮಿತಿಯ ನಾಯಕತ್ವವನ್ನು ವಹಿಸಿ ಕೊಂಡಿದ್ದಾರೆಂದು ಹರ್ಷ ವ್ಯಕ್ತಪಡಿಸಿದರು.

ಶಕ್ತಿ ದಿನಪತ್ರಿಕೆ ಸಲಹಾ ಸಂಪಾದಕ ಬಿ.ಜಿ.ಅನಂತಶಯನ ಮಾತನಾಡಿ, ಪ್ರತಿಯೊಬ್ಬರನ್ನು ಪ್ರೀತಿಸಲು ಕಲಿಯಬೇಕು. ಎಲ್ಲರಲ್ಲೂ ದೇವನನ್ನು ಕಾಣಬೇಕು ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು. ಕೊಡಗು ಜಿಲ್ಲಾ ನಾಯಿಬ್ ಖಾಜಿ ಮಹಮುದ್ ಉಸ್ತಾದ್ ಎಡಪಾಲ, ಮಹಮ್ಮದ್ ಉಸ್ತಾದ್, ಯಾಕೂಬ್ ಯೂಸುಫ್ ಬೆಂಗಳೂರು, ಹಕೀಂ ಹಾಸನ, ನಾಪೋಕ್ಲು ಉಸ್ಮಾನ್ ಹಾಜಿ, ಕೊಟ್ಟಮುಡಿ ಹಂಸ, ಶಾಫಿ ಕೊಟ್ಟಮುಡಿ, ಎಸ್‍ವೈಎಸ್ ಜಿಲ್ಲಾಧ್ಯಕ್ಷ ಹಫೀಳ್ ಸಅದಿ, ವೀರಾಜಪೇಟೆ ಅನ್ವರುಲ್ ಹುದಾ ಸಾರಥಿ ಅಶ್ರಫ್ ಅಹ್ಸನಿ, ಅಬೂಬಕ್ಕರ್ ಹಾಜಿ, ಶಾದುಲಿ ಫೈಝಿ, ಅಬ್ದುರ್ರಹ್ಮಾನ್ ರಿಝ್ವಿ ಉಡುಪಿ, ಉಸ್ಮಾನ್ ಚಿಕ್ಕಮಗಳೂರು, ಸೈಯಿದ್ ಅಟಕೋಯ ತಂಙಳ್ ಕಾಸರಗೋಡು, ಸೈಯಿದ್ ಹಾಮಿಂ ಮೂಡಿಗೆರೆ ಸೇರಿದಂತೆ ಎಸ್‍ಎಸ್‍ಎಫ್, ಎಸ್‍ವೈಎಸ್, ಎಸ್‍ಜೆಯು, ಎಸ್‍ಜೆಎಂ, ಎಸ್‍ಎಂಎ ನಾಯಕರು ಉಪಸ್ಥಿತರಿದ್ದರು.

2018ನೇ ಸಾಲಿನ ರಾಜ್ಯಮಟ್ಟದ ಪ್ರತಿಭೋತ್ಸವದಲ್ಲಿ 96 ವಿಷಯಗಳಲ್ಲಿ 2500 ವಿದ್ಯಾರ್ಥಿಗಳು 10 ವೇದಿಕೆಗಳಲ್ಲಿ ಸ್ಪರ್ಧಿಸಿದ್ದರು. ದಕ್ಷಿಣ ಕನ್ನಡ, ಕೊಡಗು, ಉಡುಪಿ ಜಿಲ್ಲೆಗಳು ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳನ್ನು ತಮ್ಮದಾಗಿಸಿಕೊಂಡರು. ಯಾಕೂಬ್ ಸಅದಿ ಕಾರ್ಯಕ್ರಮ ನಿರೂಪಿಸಿದರೇ, ಹಫೀಳ್ ಸುಫಿಯಾನ್ ಸಖಾಫಿ ಸ್ವಾಗತಿಸಿ, ಶರೀಫ್ ಬೆಂಗಳೂರು ವಂದಿಸಿದರು.

- ದುಗ್ಗಳ ಸದಾನಂದ