ಮಡಿಕೇರಿ, ಜ.22 :ಮುಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಮತಗಳಿಕೆಗಾಗಿ ಕಾಂಗ್ರೆಸ್ ಸರ್ಕಾರ ಆಚರಿಸುತ್ತಿರುವ ಟಿಪ್ಪು ಜಯಂತಿಯನ್ನು ನಮ್ಮ ಸರ್ಕಾರ ರದ್ದುಗೊಳಿಸಲಿದೆಯೆಂದು ಹೇಳಿರುವ ಎಂಎಲ್‍ಸಿ ಸುನಿಲ್ ಸುಬ್ರಮಣಿ, ಟಿಪ್ಪುವಿನ ಚರಿತ್ರೆಯ ಅರಿವಿಲ್ಲದಿದ್ದಲ್ಲಿ ಮುಖ್ಯಮಂತ್ರಿಗಳು ಅದನ್ನು ತಮ್ಮ ಪಕ್ಷದವರಿಂದಲೇ ಕೇಳಿ ತಿಳಿದುಕೊಳ್ಳಲಿ ಎಂದು ಕಿವಿಮಾತು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮಡಿಕೆÉೀರಿಗೆ ಆಗಮಿಸಿ ಸಾಧನಾ ಸಮಾವೇಶದಲ್ಲಿ ಪಾಲ್ಗೊಂಡ ಸಂದರ್ಭ ಟಿಪ್ಪುವಿನ ಬಗ್ಗೆ ಪ್ರಸ್ತಾಪ ಮಾಡಿರುವದು ಖಂಡನೀಯವೆಂದರು. ಬಿಜೆಪಿ ಸರ್ಕಾರ ಬಂದ ತಕ್ಷಣ ಟಿಪ್ಪು ಜಯಂತಿ ಯನ್ನು ರದ್ದುಗೊಳಿಸಲಾಗುವದೆಂದು ತಿಳಿಸಿದರು.
ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಕೊಡಗಿನ ಜನತೆಯ ಭಾವನೆಗೆ ವಿರುದ್ಧವಾಗಿ ಟಿಪ್ಪು ಜಯಂತಿಯನ್ನು ಆಚರಿಸಿದೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದ ಮತ್ತು ಲಿಂಗಾಯಿತ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಹುಣಸೂರಿನಲ್ಲಿ ಹನುಮ ಜಯಂತಿಗೆ ಅಡ್ಡಿಪಡಿಸಿದ ಸರ್ಕಾರ ವಿಪರೀತ ಬುದ್ಧಿಯನ್ನು ಪ್ರದರ್ಶಿಸುತ್ತಿದ್ದು, ವಿನಾಶಕಾಲ ಸಮೀಪಿಸುತ್ತಿದೆ ಎಂದು ಸುನಿಲ್ ಸುಬ್ರಮಣಿ ಕುಟುಕು ನುಡಿಯಾಡಿದರು.
ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಗೆ ನಾಡಿನ ದೊರೆಯಾದ ಮುಖ್ಯಮಂತ್ರಿ ಆಗಮಿಸಿ ಪೂಜೆ ಸಲ್ಲಿಸುವದು ನಾಡಿನ ಹಿತದೃಷ್ಟಿಯಿಂದ ಸೂಕ್ತ. ಈ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ತಲಕಾವೇರಿಗೆ ಆಗಮಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದೆ. ಆದರೆ ಬರುವದಾಗಿ ಭರವಸೆ ನೀಡಿದವರು ಜಿಲ್ಲೆಗೆ ಆಗಮಿಸಿದ ಸಂದರ್ಭ ಅದನ್ನು ಮರೆತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಕೊಡಗು ಜಿಲ್ಲೆಯ ಅಭಿವೃದ್ಧಿಗೆ 1800 ಕೋಟಿಗೂ ಅಧಿಕ ಅನುದಾನ ಬಂದಿದೆ. ಪ್ರತಿ ಕ್ಷೇತ್ರದ ಶಾಸಕರು ಕೋರಿದ ಅನುದಾನವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಂಜೂರು ಮಾಡುತ್ತಿದ್ದರು. ರಾಜ್ಯದಲ್ಲಿ ಸಾರಾಯಿ ಹಾಗೂ ಲಾಟರಿಯನ್ನು ನಿಷೇಧ ಮಾಡಿದ ಹೆಗ್ಗಳಿಕೆಯೂ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ ಎಂದು ಸುನಿಲ್ ಸುಬ್ರಮಣಿ ಹೇಳಿದರು.
ಬಿಜೆಪಿ ಸರ್ಕಾರವಿದ್ದಾಗ ಕೊಡಗಿನ ಎಲ್ಲಾ ರಸ್ತೆಗಳು ಅಭಿವೃದ್ಧಿಯಾಗಿತ್ತು. ಪ್ರಸ್ತುತ ಕಾಂಗ್ರೆಸ್ ಸರ್ಕಾರವಿರುವದರಿಂದ ಕೇವಲ ಶಾಸಕರ ಅನುದಾನದಿಂದಲೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳ ಬೇಕಾಗಿದೆ. ಜಿಲ್ಲೆಯಲ್ಲಿ ಕೆಲವು ದುರಹಂಕಾರದ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿರುವದರಿಂದ ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗಿದೆಯೆಂದು ಆರೋಪಿಸಿದ ಅವರು, ಜಿಲ್ಲಾ ಪಂಚಾಯ್ತಿ ಸಿಇಒ ಅವರು ಸಿಬ್ಬಂದಿಯೊಬ್ಬರ ಮೇಲೆ ನಡೆಸಿರುವ ಹಲ್ಲೆಯನ್ನು ಖಂಡಿಸುವದಾಗಿ ತಿಳಿಸಿದರು.
ತಲಕಾವೇರಿ ಭಾಗಮಂಡಲ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಪ್ರಶ್ನಿಸಿದಾಗ ಮುಜರಾಯಿ ದೇವಾಲಯಗಳಿಗೆ ಅಧ್ಯಕ್ಷರ ನೇಮಕವಾಗಿಲ್ಲವೆಂದು ಅಸಹಾಯಕತೆ ವ್ಯಕ್ತಪಡಿಸಿದರು.
ಜನವರಿ 24 ರಂದು ನಡೆಯುವ ಪರಿವರ್ತನಾ ರ್ಯಾಲಿಯಲ್ಲಿ ಸುಮಾರು 12 ಸಾವಿರ ಮಂದಿ ಪಾಲ್ಗೊಳ್ಳಲಿದ್ದಾರೆ ಎಂದ ಸುನಿಲ್ ಸುಬ್ರಮಣಿ ಅವರು, ಕಾಂಗ್ರೆಸ್‍ನ ಸಾಧನಾ ಸಮಾವೇಶಕ್ಕೆ ನೆರೆಯ ಸುಳ್ಯ, ಪಿರಿಯಾಪಟ್ಟಣ, ಕೆ.ಆರ್.ನಗರ, ಹಾಸನ ವಿಭಾಗಗಳಿಂದ ಜನರನ್ನು ಕರೆತರಲಾಗಿತ್ತು ಎಂದು ವ್ಯಂಗ್ಯವಾಡಿದರು. ಬಿಜೆಪಿ ಸಮಾವೇಶಕ್ಕೆ ಜಿಲ್ಲೆಯ 104 ಗ್ರಾ.ಪಂ, ನಗರಸಭೆ, ಪಟ್ಟಣ ಪಂಚಾಯ್ತಿ ವ್ಯಾಪ್ತಿಯಿಂದ ಜನರು ಆಗಮಿಸಲಿದ್ದಾರೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದಾರ್ಶಿ ಕೋಡಿರ ಪ್ರಸನ್ನ, ಉಪಾಧ್ಯಕ್ಷ ಅರುಣ್ ಕುಮಾರ್ ಹಾಗೂ ಮಡಿಕೇರಿ ನಗರಾಧ್ಯಕ್ಷ ಮಹೇಶ್ ಜೈನಿ ಉಪಸ್ಥಿತರಿದ್ದರು.