ಸೋಮವಾರಪೇಟೆ, ಜ.22: ಸಮೀಪದ ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿ ಹಾಗೂ 14ನೇ ಹಣಕಾಸು ಯೋಜನೆಯಡಿ ಭಾರೀ ಅವ್ಯವಹಾರ ನಡೆದಿದ್ದು, ಇದರ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂದು ಮಾದಾಪುರ ಗ್ರಾಪಂ ಮಾಜಿ ಅಧ್ಯಕ್ಷರುಗಳು ಒತ್ತಾಯಿಸಿದ್ದಾರೆ.
ಪಟ್ಟಣದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಗ್ರಾ.ಪಂ. ಮಾಜಿ ಅಧ್ಯಕ್ಷ ಭಾಸ್ಕರ ಸಾಯಿ, ಪಂಚಾಯಿತಿ ವ್ಯಾಪ್ತಿಯ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಲಕ್ಷಾಂತರ ರೂ. ಅವ್ಯವಹಾರವಾಗಿರುವ ಬಗ್ಗೆ ಲೆಕ್ಕಪರಿಶೋಧನಾ ವರದಿಯಲ್ಲಿ ಬೆಳಕಿಗೆ ಬಂದಿದ್ದು, ಅವ್ಯವಹಾರಕ್ಕೆ ಕಾರಣರಾದ ಅಧಿಕಾರಿಗಳಿಂದ ಹಣ ವಸೂಲಾತಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತರು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಶಿಫಾರಸ್ಸು ಮಾಡಿದ್ದಾರೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಮಾದಾಪುರ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಲತಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಶ್ಯಾಮ್ ಮತ್ತು ಗಣಪತಿ, ನರೇಗಾದ ತಾಂತ್ರಿಕ ಸಂಯೋಜಕ ರಂಜಿತ್, ತಾಂತ್ರಿಕ ಸಹಾಯಕ ಶ್ರೀಕಾಂತ್ ಅವರುಗಳನ್ನು ಹೊಣೆಗಾರಿಕೆಯ ವ್ಯಕ್ತಿಗಳನ್ನಾಗಿ ಗುರುತಿಸಲಾಗಿದೆ ಎಂದರು.
ಲೆಕ್ಕಪರಿಶೋಧನಾ ವರದಿಯ ಸಂಪೂರ್ಣ ವಿವರಗಳನ್ನು ಮಾಹಿತಿ ಹಕ್ಕು ಅಧಿನಿಯಮದಡಿ ಪಡೆದುಕೊಂಡಿದ್ದು, ಅನುದಾನ ದುರ್ಬಳಕೆ, ಕಾಮಗಾರಿ ನಡೆಯದೆ ಇರುವದು, ಒಂದೇ ಕೆಲಸಕ್ಕೆ ಎರಡು ಬಾರಿ ಬಿಲ್ ಮಾಡಿರುವದು, ಅಳತೆ ಪುಸ್ತಕ ಹಾಗು ಚೆಕ್ ಮೆಜರ್ಮೆಂಟ್ ಪೂರ್ಣಗೊಳ್ಳುವ ಮೊದಲೆ ತರಾತುರಿಯಲ್ಲಿ ಹಣ ಪಾವತಿ ಮಾಡಿ, ಯೋಜನೆಯ ನಿಯಮಗಳನ್ನು ಉಲ್ಲಂಘಿಸಿರುತ್ತಾರೆ ಎಂದು ಆರೋಪಿಸಿದರು.
14ನೇ ಹಣಕಾಸು ಯೋಜನೆಯಡಿ ಮಾದಾಪುರ ಗ್ರಾಮ ಪಂಚಾಯಿತಿಯ ಸೋಮವಾರಪೇಟೆ ಮುಖ್ಯ ರಸ್ತೆಯಿಂದ ಎ.ಜೆ. ಎಸ್ಟೇಟ್ ಬಸ್ ತಂಗುದಾಣದ ಬಳಿಯಿಂದ ಕುಂಬೂರು ಪೈಸಾರಿಗೆ ಹೋಗುವ ರಸ್ತೆ ಅಭಿವೃದ್ಧಿಗೆ 2,50,000 ರೂ. ಬಿಡುಗಡೆಯಾಗಿದ್ದು ಇಲ್ಲಿ ಯಾವದೇ ಕಾಮಗಾರಿ ನಡೆಸದೆ 2,29,447 ರೂ.ಗಳನ್ನು ಬಿಲ್ ಮಾಡಿಕೊಂಡಿದ್ದಾರೆ. ಇದೇ ಕಾಮಗಾರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಯು.ಬಿ. ಬಸ್ನಿಲ್ದಾಣದಿಂದ ಕುಂಬೂರು ಪೈಸಾರಿಯಲ್ಲಿ ಪರಿಶಿಷ್ಟ ಪಂಗಡದವರು ವಾಸವಿಲ್ಲದಿದ್ದರೂ, ಕಾಲೋನಿ ರಸ್ತೆ ಅಭಿವೃದ್ಧಿಗೆಂದು 2,99,000 ರೂ. ಹಣ ಪಾವತಿಯಾಗಿದೆ ಎಂದು ಮಾಹಿತಿಯಿತ್ತರು.
ಕುಂಬೂರು ಪೈಸಾರಿಯಲ್ಲಿ ವಾಸವಿರುವ ವಿಕಲಚೇತನ ಪರಶುರಾಮ ಅವರ ಮನೆಗೆ ತೆರಳುವ ರಸ್ತೆ ಕಾಮಗಾರಿಯ 99,650 ರೂ. ಬಿಲ್ ಪಾವತಿಯಾಗಿದೆ. ಈ ಕಾಮಗಾರಿಯಲ್ಲೂ ಹಣ ದುರುಪಯೋಗವಾಗಿದೆ ಎಂದು ಆರೋಪಿಸಿದರು.
ಹಿಂದೂ-ಮುಸ್ಲಿಂ ಸಮುದಾಯದ ಸ್ಮಶಾನ ಅಭಿವೃದ್ಧಿಗೆಂದು 2.66 ಲಕ್ಷ ಹಾಗೂ 2.99 ಲಕ್ಷ ಹಣ ಬಳಸಿಕೊಳ್ಳಲಾಗಿದೆ. ಸಮುದಾಯದವರೇ ನಿರ್ಮಿಸಿರುವ ಕಾಮಗಾರಿಯನ್ನು ಪಂಚಾಯಿತಿಯ ಕಾಮಗಾರಿ ಎಂದು ಬಿಂಬಿಸಿ ಬಿಲ್ ಮಾಡಲಾಗಿದೆ ಎಂದು ದೂರಿದರು.
ಮಾದಾಪುರ ಪಂಚಾಯಿತಿ ವ್ಯಾಪ್ತಿಯ 6 ವಾರ್ಡ್ಗಳಲ್ಲಿ ನಡೆದಿರುವ ಎಲ್ಲಾ ಕಾಮಗಾರಿಗಳ ಸಂಪೂರ್ಣ ತನಿಖೆಯಾಗಬೇಕು. ಸಂಬಂಧಿಸಿದ ಅಧಿಕಾರಿಗಳ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು ಎಂದು ಗೋಷ್ಠಿಯಲ್ಲಿದ್ದ ಮಾಜಿ ಅಧ್ಯಕ್ಷ ಎಂ.ಕೆ.ತಿಮ್ಮಯ್ಯ(ತುಮ್ಮಣ್ಣ) ಒತ್ತಾಯಿಸಿದರು. ಗೋಷ್ಠಿಯಲ್ಲಿ ಕುಂಬೂರು ಗ್ರಾಮಸ್ಥ ಬಿ.ಎ.ಮುತ್ತಣ್ಣ ಉಪಸ್ಥಿತರಿದ್ದರು.