ಮೂರ್ನಾಡು, ಜ. 22: ಕ್ಲೀನ್ ಕೊಡಗು ಸಂಘಟನೆ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳ ಆಶ್ರಯದೊಂದಿಗೆ ಮೂರ್ನಾಡು ಪಟ್ಟಣದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು.
ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಕ್ಲೀನ್ ಕೊಡಗು ಸಂಚಾಲಕ ಬಡುವಂಡ ಅರುಣ್ ಅಪ್ಪಚ್ಚು ಮಾತನಾಡಿ, ಸಂಘಟನೆಯು ಕೊಡಗು ಜಿಲ್ಲೆಯಲ್ಲಿ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಿಂದ ವಿವಿಧೆಡೆಗಳಲ್ಲಿ ಕಾರ್ಯ ಕ್ರಮಗಳನ್ನು ಹಮ್ಮಿಕೊಂಡು ಸ್ವಚ್ಛತೆ ಕುರಿತು ಅರಿವು ಮೂಡಿಸುತ್ತಿದೆ. ನಮ್ಮ ಸುತ್ತಮುತ್ತ ಪರಿಸರಕ್ಕೆ ಹಾನಿಗೊಳಿಸದೆ ಅದನ್ನು ಕಾಪಾಡಿಕೊಂಡು ಜೀವನ ಸಾಗಿಸುವದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಪ್ರಾಥಮಿಕ ಶಾಲಾ ಇಕೋ ಕ್ಲಬ್ ಶಿಕ್ಷಕಿ ನಿರ್ಮಲ ಮಾತನಾಡಿ, ನಮ್ಮ ಪರಿಸರ ಇಂದು ಪ್ಲಾಸ್ಟಿಕ್, ಬಾಟಲಿಯಂತಹ ಮಣ್ಣಿನಲ್ಲಿ ಕರಗದ ವಸ್ತುಗಳಿಂದ ಕೂಡಿಕೊಂಡಿದೆ. ಪರಿಸರ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ಪ್ರತಿಯೊಬ್ಬರು ಪರಿಸರ ಸಂರಕ್ಷಣೆಯತ್ತ ಗಮನ ಹರಿಸಬೇಕು ಎಂದರು.
ಕ್ಲೀನ್ ಕೊಡಗು, ಮೂರ್ನಾಡು ಚೇಂಬರ್ ಆಫ್ ಕಾಮರ್ಸ್, ಟೈಲರ್ಸ್ ಅಸೋಸಿಯೇಶನ್, ನವ ಚೇತನ ಆಟೋ ಮಾಲೀಕರ ಹಾಗೂ ಚಾಲಕರ ಸಂಘ, ಲಯನ್ಸ್ ಕ್ಲಬ್, ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘ, ಮಾರುತಿ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು, ಮೂರ್ನಾಡು ವಿದ್ಯಾಸಂಸ್ಥೆಯ ಪ್ರೌಢಶಾಲೆ ಎನ್‍ಸಿಸಿ ವಿದ್ಯಾರ್ಥಿಗಳು, ಪದವಿಪೂರ್ವ ಕಾಲೇಜು, ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ಯುವಕರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ನಾಪೋಕ್ಲು ರಸ್ತೆ, ಬಲಮುರಿ ರಸ್ತೆ ಹಾಗೂ ಪಟ್ಟಣದ ಬೀದಿಯಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಬಳಿಕ ಪಟ್ಟಣದ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ರಚಿಸಿ ಅಂಗಡಿ ಮಾಲೀಕರಿಗೆ, ಸಾರ್ವಜನಿ ಕರಿಗೆ, ವಾಹನ ಚಾಲಕರಿಗೆ ಅರಿವು ಮೂಡಿಸಲಾಯಿತು. ಈ ಸಂದರ್ಭ ಸರಕಾರಿ ಪ್ರಾಥಮಿಕ ಶಾಲೆಗೆ ಕಸದ ತೊಟ್ಟಿಯನ್ನು ಕ್ಲೀನ್ ಕೊಡಗು ಸಂಘಟನೆ ವತಿಯಿಂದ ನೀಡಲಾಯಿತು.