ವೀರಾಜಪೇಟೆ, ಜ. 22: ವೀರಾಜಪೇಟೆಯ ಹಳೆ ತಾಲೂಕು ಕಚೇರಿ ಇದ್ದ ಸ್ಥಳದಲ್ಲಿಯೇ ಸುಮಾರು ಎರಡುಕೋಟಿ ಅರವತ್ತೆರಡು ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಮಿನಿವಿಧಾನಸೌಧ ತಾ:26ರಂದು ಗಣ ರಾಜ್ಯೋತ್ಸವ ದಿನ ಉದ್ಘಾಟನೆಗೊಳ್ಳಲಿದೆ. ತಾ:27ರಂದು ಲೋಕೋಪಯೋಗಿ ಇಲಾಖೆ ಕಟ್ಟಡವನ್ನು ತಾಲೂಕು ಕಚೇರಿಯ ತಹಶೀಲ್ದಾರ್ ಅವರ ಸ್ವಾಧೀನಕ್ಕೆ ಅಧಿಕೃತವಾಗಿ ವಹಿಸಲಿದ್ದಾರೆ.ವೀರಾಜಪೇಟೆಯ ಮಿನಿ ವಿಧಾನಸೌಧವನ್ನು ಖುದ್ದು ವೀಕ್ಷಿಸಿದ ತಾಲೂಕು ತಹಶೀಲ್ದಾರ್ ಆರ್. ಗೋವಿಂದರಾಜ್, ಲೋಕೋಪ ಯೋಗಿ ಇಲಾಖೆಯ ಕಾರ್ಯಪಾಲಕ ಸಹಾಯಕ ಕಾರ್ಯಪಾಲಕ ಅಭಿಯಂತರ ಎಂ.ಇ.ಸುರೇಶ್, ವೀರಾಜಪೇಟೆ ಕಚೇರಿಯ ಅಭಿಯಂತರ (ಕಟ್ಟಡ) ಯು.ಆರ್. ಯತೀಶ್, ಇತರ ತಾಂತ್ರಿಕ ತಜ್ಞರು ಕಟ್ಟಡದ ಕಾಮಗಾರಿ ಶೇ. 95ರಷ್ಟು ಪೂರ್ಣಗೊಂಡ ಹಿನ್ನಲೆಯಲ್ಲಿ ಉದ್ಘಾಟನೆಯ ದಿನಾಂಕ ನಿಗದಿ ಪಡಿಸಿದರು.

ಇದೇ ಸಂದರ್ಭದಲ್ಲಿ ಮಿನಿ ವಿಧಾನಸೌಧದ ಕೊಠಡಿಗಳನ್ನು ವೀಕ್ಷಿಸಿದ ಗೋವಿಂದರಾಜ್ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಮಲಬಾರ್ ರಸ್ತೆಯಲ್ಲಿರುವ ಈಗಿನ ತಾಲೂಕು ಕಚೇರಿಯನ್ನು ಸ್ಥಳಾಂತರಿಸಲು ಕನಿಷ್ಠ 30ದಿನಗಳ ಕಾಲವಕಾಶವಾದರೂ ಬೇಕಾಗಿದೆ. ಆದರೆ ತಾಲೂಕಿನಾದ್ಯಂತ ಹಿಡುವಳಿ ದಾರರು, ರೈತರು ಪಟ್ಟಣದಲ್ಲಿ ಭಾರೀ ಅಂತರದಲ್ಲಿರುವ ಕಚೇರಿಗೆ ಅಲೆದಾಡು ವದನ್ನು ತಪ್ಪಿಸಲು ಹದಿನೈದು ದಿನಗಳ ಅವಧಿಯಲ್ಲಿಯೇ ಶತಾಯಗತಾಯ ವಾಗಿ ತಾಲೂಕು

(ಮೊದಲ ಪುಟದಿಂದ) ಕಚೇರಿಯನ್ನು ಸ್ಥಳಾಂತರಿಸಿ ಕಾರ್ಯಾರಂಭ ಮಾಡಬೇಕೆನ್ನುವ ತೀರ್ಮಾನಕ್ಕೆ ಬಂದಿದ್ದಾರೆ. ಹೊಸ ಕಟ್ಟಡದಲ್ಲಿ ಕಚೇರಿ ಆರಂಭ ಮಾಡಲು ಪೀಠೋಪಕರಣಗಳ ಕೊರತೆ ಎದುರಾದರೂ ಸಧ್ಯಕ್ಕೆ ತಾಲೂಕಿನ ಜನತೆಯ ಹಿತ ದೃಷ್ಟಿಯಿಂದ ನಿಗದಿತ ಅವಧಿಯಲ್ಲಿಯೇ ಕಾರ್ಯಾರಂಭಕ್ಕೆ ಫೆ.10 ದಿನಾಂಕ ನಿಗದಿ ಮಾಡಿರುವದಾಗಿ ಗೋವಿಂದರಾಜ್ ತಿಳಿಸಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಇಲಾಖೆಯ ಸಹಾಯಕ ಅಭಿಯಂತರ ಎಂ.ಇ.ಸುರೇಶ್ ಅವರು ನೆಲ ಅಂತಸ್ತಿನ ಕಟ್ಟದಲ್ಲಿ ವಿಶಾಲವಾದ 10 ಕೊಠಡಿಗಳಿವೆ. ಇದರಲ್ಲಿ ತಹಶೀಲ್ದಾರ್ ಕಚೇರಿ, ಭೂಮಿ ಕೇಂದ್ರ, ಕಂಪ್ಯೂಟರ್ ಕೇಂದ್ರ, ಭೂಮಾಪನ ಕಚೇರಿ, ಚುನಾವಣಾ ಕಚೇರಿಗೆ ಮಾತ್ರ ಅವಕಾಶ ನೀಡಲಾಗಿದೆ. ಮಿನಿ ವಿಧಾನ ಸೌಧದ ಮುಂದಿನ ಭಾಗದಲ್ಲಿ ತಾಲೂಕು ಕಚೇರಿಗೆ ಬರುವವರಿಗೆ ಮಾತ್ರ ವಾಹನಗಳ ನಿಲುಗಡೆಗೆ ನಿಲ್ದಾಣ ಅವಕಾಶ ಕಲ್ಪಿಸಲಾಗಿದೆ.

ಮಿನಿ ವಿಧಾನಸೌಧದ ಇತಿಹಾಸ

ಕಳೆದ 1997ರಲ್ಲಿ ಕ್ಷೇತ್ರದ ಶಾಸಕರು, ಅಧಿಕಾರಿಗಳು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಸೇರಿ ಸಮಿತಿಯೊಂದನ್ನು ರಚಿಸಿ ಸುಮಾರು 9ವರ್ಷಗಳ ಕಾಲ ಮಿನಿ ವಿಧಾನಸೌಧಕ್ಕೆ ಜಾಗವನ್ನು ಶೋಧಿಸುವದರಲ್ಲಿಯೇ ಕಾಲಹರಣ ಮಾಡಲಾಯಿತು. 2016ರಲ್ಲಿ ಸಮಿತಿ ಕೂಲಂಕುಷವಾಗಿ ವಿಚಾರ ವಿನಿಮಯ ಮಾಡಿ ಹಳೆ ತಾಲೂಕು ಕಚೇರಿಯನ್ನು ಕೆಡವಿ ಅಲ್ಲಿ ಆಜು ಬಾಜು ಇರುವ ಜಾಗವನ್ನು ಸೇರಿಸಿ ಸುಮಾರು ಒಂದು ಎಕರೆ ಹತ್ತು ಸೆಂಟು ಜಾಗದಲ್ಲಿ ಮಿನಿ ವಿಧಾನಸೌಧ ನಿರ್ಮಿಸಲು ಅಂತಿಮ ತೀರ್ಮಾನ ಮಾಡಿ 2008ರಲ್ಲಿ ಸರಕಾರದ ಮಂಜೂರಾತಿ ಪಡೆದು ಇ ಮೇಲ್ ಟೆಂಡರ್ ಪ್ರಕ್ರಿಯೆಗೂ ಚಾಲನೆ ನೀಡಲಾಯಿತು. ಪ್ರಾರಂಭದಲ್ಲಿ ನಾಗರಾಜ್ ಎಂಬುವರು ಕಟ್ಟಡದ ಗುತ್ತಿಗೆ ಪಡೆದು ಕಾಮಗಾರಿ ಪ್ರಾರಂಭಿಸಿದರು. ಕಾಮಗಾರಿ ಆರಂಭದಲ್ಲಿಯೇ ಕಟ್ಟಡ ನಿರ್ಮಾಣಕ್ಕೆ ನೆಲಸಮ ಮಾಡುವಾಗ ಪಕ್ಕದ ಸಬ್‍ಜೈಲ್‍ನ ಕಟ್ಟಡಕ್ಕೆ ಜೆ.ಸಿ.ಬಿ.ಯಿಂದ ಜಖಂಗೊಂಡು ಜೈಲ್ ಕಟ್ಟಡಕ್ಕೆ ಭದ್ರತೆ ಇಲ್ಲದಂತಾಗಿ ಜೈಲ್‍ನ್ನು ಮಡಿಕೇರಿಗೆ ಸ್ಥಳಾಂತರಿಸಲಾಯಿತು. ಈಗಲೂ ಸಬ್ ಜೈಲು ಖೈದಿಗಳಿಲ್ಲದೆ ಬಿಕೋ ಎನ್ನುತ್ತಿದೆ. ಇದರಿಂದ ಕಾಮಗಾರಿ ಆರಂಭದಲ್ಲಿಯೇ ಅಪಶಕುನ ಕಂಡ ಗುತ್ತಿಗೆದಾರರು ಗುತ್ತಿಗೆಯನ್ನು ಹಿಂಪಡೆದು ತವರಿಗೆ ತೆರಳಿದರು. ಲೋಕೋಪಯೋಗಿ ಇಲಾಖೆ 2012ರಲ್ಲಿ ಮತ್ತೆ ಇಮೇಲ್ ಟೆಂಡರ್ ಹಾಕಿದಾಗ ಚನ್ನರಾಯಪಟ್ಟಣದ ಈಶ್ವರ್ ಕುಮಾರ್ ಎಂಬವರು 2013ರಲ್ಲಿ ಗುತ್ತಿಗೆ ಪಡೆದು ಕಾಮಗಾರಿ ಆರಂಭಿಸಿ ಈಗ 2018ರ ಜನವರಿ 25ಕ್ಕೆ ಕಾಮಗಾರಿ ಪೂರ್ಣಗೊಳಿಸಲಿದ್ದಾರೆ.

ಈ ಗುತ್ತಿಗೆದಾರರು ಮರಳಿನ ಅಭಾವ ಹಾಗೂ ಒಂದೇ ಸಮಯದಲ್ಲಿ ಇನ್ನು ಅನೇಕ ಮಿನಿ ವಿಧಾನಸೌಧಗಳು ಟೆಂಡರ್‍ನಲ್ಲಿ ಇವರ ಪಾಲಾಗಿದ್ದರಿಂದ ಕಾಮಗಾರಿ ನಿರ್ವಹಿಸುವದು ಕಷ್ಟ ಸಾಧ್ಯವಾಯಿತು. ಆದರೂ ಜಾತಕ ಪಕ್ಷಿಯಂತೆ ಕಾದ ಜನತೆಗೆ ಮಿನಿ ವಿಧಾನಸೌಧ ವಿಳಂಬವಾದರೂ ವರವಾಗಿ ಪರಿಣಮಿಸಿದೆ. ಇದೇ ಮಿನಿ ವಿಧಾನಸೌಧದ ಕಟ್ಟಡಕ್ಕೆ ಜನ ಪ್ರತಿನಿಧಿಗಳು ನಾಲ್ಕು ಬಾರಿ ಭೂಮಿ ಪೂಜೆ ನೆರವೇರಿಸಿದರು. ನಾಲ್ಕನೆ ಭೂಮಿ ಪೂಜೆ ಮಿನಿ ವಿಧಾನಸೌಧ ನಿರ್ಮಿಸುವಲ್ಲಿ ಯಶಸ್ಸನ್ನು ಕಂಡಿದೆ.