ಮಡಿಕೇರಿ, ಜ. 23: ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ 2017-18ನೇ ಸಾಲಿನಲ್ಲಿ ಸರಕಾರದ ಗ್ರಾಮ ವಿಕಾಸ ಯೋಜನೆಯಡಿ ಹೊಸ್ಕೇರಿ ಗ್ರಾಮವನ್ನು ಆಯ್ಕೆ ಮಾಡಿದ್ದು, ಸರಕಾರದ ನಿಯಮದಂತೆ ನಿಗದಿತ ಅನುದಾನ ರೂ. 1 ಕೋಟಿ ಮೊತ್ತಕ್ಕೆ ಕ್ರಿಯಾಯೋಜನೆ ತಯಾರಿಸಲು ವಿಶೇಷ ಗ್ರಾಮ ಸಭೆ ತಾ. 23 ರಂದು ಹೊಸ್ಕೇರಿಯ ಭಾರತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಸಲಾಯಿತು. ವಿಶೇಷ ಗ್ರಾಮ ಸಭೆಯು ಗ್ರಾಮ ಪಂಚಾಯತಿಯ ಅಧ್ಯಕ್ಷೆÀ ಪಿ.ಎನ್. ಮಮತ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ನಿಯಮಾವಳಿಗಳ ಪ್ರಕಾರ ಕ್ರಿಯಾಯೋಜನೆಯನ್ನು ಸಾರ್ವಜನಿಕರ ಸಮ್ಮುಖದಲ್ಲಿ ಚರ್ಚಿಸಿ ತಯಾರಿಸಲಾಯಿತು. ಸುನಿಲ್ ಸುಬ್ರಮಣಿ ಅವರು ಮಾತನಾಡಿ, ಕೊಡಗು ಜಿಲ್ಲೆಯಲ್ಲಿನ ಒಂದು ಗ್ರಾಮವನ್ನು ಪ್ರಸ್ತುತ ಸಾಲಿಗೆ ಆಯ್ಕೆ ಮಾಡಬೇಕಾಗಿದ್ದು, ಅದರಂತೆ ಹೊಸ್ಕೇರಿ ಗ್ರಾಮವನ್ನು ಆಯ್ಕೆ ಮಾಡಿ ಅಭಿವೃದ್ಧಿ ಪಡಿಸಲು ಕ್ರಮ ವಹಿಸಿರುತ್ತೇನೆ. ಅನುದಾನವನ್ನು ಸಾರ್ವಜನಿಕರ ಸಲಹೆಯಂತೆ ಅಗತ್ಯ ಕಾಮಗಾರಿಗಳಿಗೆ ಸಮರ್ಪಕವಾಗಿ ಬಳಸಿ, ಅಭಿವೃದ್ಧಿಗೆ ಕೈಜೋಡಿಸಲು ಮನವಿ ಮಾಡಿದರು. ಕಾಮಗಾರಿಗಳು ಕಳಪೆಯಾಗದಂತೆ ಸಾರ್ವಜನಿಕರು ಕ್ರಮ ವಹಿಸಬೇಕು. ಅಲ್ಲದೇ ಕಾಮಗಾರಿಗೆ ಎಲ್ಲಾ ರೀತಿಯ ಸಹಕಾರ ನೀಡಲು ಮನವಿ ಮಾಡಿದರು. ಇದೇ ಸಮಯದಲ್ಲಿ ಹೊಸ್ಕೇರಿ ಗ್ರಾಮವನ್ನು ಆಯ್ಕೆ ಮಾಡಿದಕ್ಕೆ ಸುನಿಲ್ ಸುಬ್ರಮಣಿ ಅವರಿಗೆ ವಿಶೇಷವಾಗಿ ಅಬಿನಂದನೆ ಸಲ್ಲಿಸಲಾಯಿತು.
ಸಭೆಯಲ್ಲಿ ಪಿಡಿಓ ಆಶಾ, ಉಪಾಧ್ಯಕ್ಷ ಯೂಸಫ್, ಆರ್.ಎಂ.ಸಿ ಕಾಂಗೀರ ಸತೀಶ್, ನೋಡÀಲ್ ಅಧಿಕಾರಿ ಚಂದ್ರಶೇಖರ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀ ಶ್ರೀಕಂಠಯ್ಯ, ಕಿರಿಯ ಅಭಿಯಂತರ ರಶ್ಮಿ, ಸ್ಥಳೀಯರಾದ ರಘು ಆನಂದ್, ಚೇರಂಡ ನಂದ, ಮಂಡೇಪಂಡ ಕುಟ್ಟಣ್ಣ, ಸಾರ್ವಜನಿಕರು, ಗ್ರಾಮಪಂಚಾ ಯತಿಯ ಸದಸ್ಯರುಗಳು ಹಾಗೂ ಸಿಬ್ಬಂದಿವರ್ಗದವರು ಹಾಜರಿದ್ದರು.