ಕುಶಾಲನಗರ, ಜ. 23: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ತಾ. 29 ರಿಂದ ಎರಡು ದಿನಗಳ ಕಾಲ ಸಿರಿಧಾನ್ಯಗಳ ಆಹಾರ ಮೇಳ ಮತ್ತು ಪ್ರದರ್ಶನ ಮಾರಾಟ ಕಾರ್ಯಕ್ರಮ ಕುಶಾಲನಗರದಲ್ಲಿ ಆಯೋಜಿಸಲಾಗಿದೆ. ಈ ಬಗ್ಗೆ ಯೋಜನೆಯ ಸೋಮವಾರಪೇಟೆ ಘಟಕದ ಯೋಜನಾಧಿಕಾರಿ ವೈ. ಪ್ರಕಾಶ್ ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಈ ಮೇಳ ಜಿಲ್ಲೆಯಲ್ಲಿ ಪ್ರಥಮ ಬಾರಿ ನಡೆಯುತ್ತಿದ್ದು ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಕೊರತೆಯಿಂದ ಕಣ್ಮರೆಯಾಗಿರುವ ಧಾನ್ಯಗಳಾದ ನವಣೆ, ಸಾವೆ, ಸಜ್ಜೆ ಜೋಳ, ಬರಗು, ರಾಗಿಯ ಬಳಕೆಯನ್ನು ಮತ್ತು ಜನರಿಗೆ ಪರಿಚಯಿಸಿ ಆರೋಗ್ಯಕರವಾದ ಆಹಾರ ಪದ್ಧತಿಯನ್ನು ಅಳವಡಿಸುವ ನಿಟ್ಟಿನಲ್ಲಿ ಈ ಮೇಳ ಆಯೋಜಿಸಲಾಗಿದೆ. ಈ ಮೂಲಕ ರೋಗಮುಕ್ತ ಸಮಾಜ ನಿರ್ಮಾಣಕ್ಕೆ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ತಾ. 29 ರಂದು ಕುಶಾಲನಗರ ಎಪಿಸಿಎಂಎಸ್ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವದು. ಎರಡು ದಿನಗಳ ಕಾಲ ನಡೆಯಲಿರುವ ಮೇಳದಲ್ಲಿ ಸಿರಿಧಾನ್ಯಗಳ ಪ್ರದರ್ಶನ ಮತ್ತು ಮಾರಾಟ, ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಸಿರಿ ಉತ್ಪನ್ನಗಳ ಮಾರಾಟ ಹಾಗೂ ಸಿರಿಧಾನ್ಯಗಳಿಂದ ತಯಾರಾದ ತಿಂಡಿ ತಿನಿಸುಗಳು ಲಭ್ಯವಾಗಲಿವೆ. ಈ ಸಿರಿಧಾನ್ಯಗಳ ಮೂಲಕ ದೇಹದ ಆರೋಗ್ಯ ಕಾಪಾಡುವ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುವದು ಎಂದು ವೈ. ಪ್ರಕಾಶ್ ತಿಳಿಸಿದರು. ಎರಡು ದಿನಗಳ ಕಾಲ ನಡೆಯಲಿರುವ ಮೇಳದಲ್ಲಿ ಅಂದಾಜು 5 ಸಾವಿರಕ್ಕೂ ಅಧಿಕ ಜನ ಭಾಗವಹಿಸುವ ನಿರೀಕ್ಷೆಯಿದೆ ಎಂದು ಸಿರಿ ಗ್ರಾಮೋದ್ಯೋಗ ಮಾರುಕಟ್ಟೆ ಅಧಿಕಾರಿ ಹರೀಶ್ ಕುಮಾರ್ ಮಾಹಿತಿ ನೀಡಿದರು. ಎರಡು ದಿನಗಳ ಕಾಲ ಬೆಳಿಗ್ಗೆ 8.30 ರಿಂದ ಸಂಜೆ 8 ಗಂಟೆ ತನಕ ಮೇಳ ನಡೆಯಲಿದೆ. ಇದರ ಸದುಪಯೋಗವನ್ನು ಪಡೆಯುವಂತೆ ಕೋರಿದರು. ಗೋಷ್ಠಿಯಲ್ಲಿ ಯೋಜನೆಯ ಕುಶಾಲನಗರ ವಲಯದ ಮೇಲ್ವಿಚಾರಕ ಕೆ. ಹರೀಶ್, ಸೇವಾ ಪ್ರತಿನಿಧಿಗಳಾದ ಜೆ.ಆರ್. ಚಂದ್ರಾವತಿ, ಜಯಲಕ್ಷ್ಮಿ, ಯಶೋದ ಇದ್ದರು.