ನಾಪೋಕ್ಲು, ಜ. 23: ನಾಪೋಕ್ಲು ಹೋಬಳಿಯ ಕುಂಜಿಲ ಗ್ರಾ.ಪಂ.ಗೆ ಒಳಪಟ್ಟ ಪೈಸಾರಿ ಜಾಗವನ್ನು ಸಾರ್ವಜನಿಕರು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಇಂದು ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಒತ್ತುವರಿಯನ್ನು ತೆರವುಗೊಳಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.
ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ಹಿಂಭಾಗದ 1/5 ಪಿಐ ಸರ್ವೆನಂ.ನಲ್ಲಿರುವ ಸುಮಾರು ನೂರಾರು ಎಕರೆ ಜಾಗವನ್ನು ತಹಶೀಲ್ದಾರ್ ಆದೇಶದ ಮೇರೆಗೆ ಇಂದು ತೆರವುಗೊಳಿಸಿದ ಅಧಿಕಾರಿ ಗಳು ಜಾಗವನ್ನು ಇಲಾಖೆಯ ಸುಪರ್ದಿಗೆ ತೆಗೆದುಕೊಂಡರು. ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸ ಲಾಗಿದ್ದ ತಾತ್ಕಾಲಿಕ ಶೆಡ್ ಹಾಗೂ ತಂತಿ ಬೇಲಿಗಳನ್ನು ತೆರವುಗೊಳಿಸಿ ಸ್ಥಳದಲ್ಲಿ ನಾಮಫಲಕ ಅಳವಡಿಸ ಲಾಯಿತು. ಈ ಸಂದರ್ಭ ತಾ.ಪಂ. ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ, ಪಾಡಿ ಶ್ರೀಇಗ್ಗುತ್ತಪ್ಪ ದೇವಾಲಯದ ಭಕ್ತಜನಸಂಘದ ಉಪಾಧ್ಯಕ್ಷ ಪರದಂಡ ಡಾಲಿ, ಪ್ರಮುಖರಾದ ಪಾಂಡಂಡ ನರೇಶ್, ಕಲಿಯಂಡ ಸುನಂದ, ಪಾರುಪತ್ಯೆಗಾರ ಪರದಂಡ ಪ್ರಿನ್ಸ್‍ತಮ್ಮಯ್ಯ, ನಂಬುಡ ಮಂಡ ಅಯ್ಯಪ್ಪ, ಬಡಕ್ಕಡ ಪೂವಯ್ಯ, ಚೋಮುಣಿ, ಕಂದಾಯ ಪರಿವೀಕ್ಷಕ ಜಿ.ಡಿ.ರಾಮಯ್ಯ, ಗ್ರಾಮಲೆಕ್ಕಿಗ ಜನಾರ್ಧನ ಕೆ.ವಿ., ಅನೂಪ್ ಸಬಾಸ್ಟಿನ್, ಗ್ರಾಮಸಹಾಯಕ ಲಾಲು, ವಲಯ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.