ವೀರಾಜಪೇಟೆ, ಜ. 23: ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ 5 ಮಂದಿಗೆ ಗಾಯಗಳಾಗಿರುವ ಘಟನೆ ವೀರಾಜಪೇಟೆ ಮತ್ತು ಗೋಣಿಕೊಪ್ಪ ಮುಖ್ಯ ರಸ್ತೆಯಲ್ಲಿ ಸಂಭವಿಸಿದೆ.

ವೀರಾಜಪೇಟೆ ಬಿಟ್ಟಂಗಾಲ ಗ್ರಾಮ ಪಂಚಾಯಿತಿಯ ಸರಹದ್ದಿನಲ್ಲಿ ಬರುವ ಕೊಳ್ತೋಡು- ಬೈಗೋಡು ಮುಖ್ಯ ರಸ್ತೆಯಲ್ಲಿ ಇಂದು ಸಂಜೆ ಗೋಣಿಕೊಪ್ಪದಿಂದ ವೀರಾಜಪೇಟೆಗೆ ಆಗಮಿಸಿಸುತ್ತಿದ್ದ ಮಾರುತಿ ಅಲ್ಟೋ ಕಾರು (ಕೆಎಲ್ 10 ಎಯು 3164) ವೀರಾಜಪೇಟೆಯಿಂದ ಗೋಣಿಕೊಪ್ಪಕ್ಕೆ ಸಾಗುತ್ತಿದ್ದ ಮಾರುತಿ ಅಲ್ಟೋ ಕಾರು (ಕೆಎ 02 ಎಂಬಿ 5930) ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಪರಿಣಾಮ ಕಾರಿನಲ್ಲಿ ಪ್ರಯಾಣಿಸು ತ್ತಿದ್ದ ಗೋಣಿಕೊಪ್ಪ ಮಾಂಡೋವಿ ಮೋಟರ್ಸ್‍ನ ಉದ್ಯೋಗಿ ಹರೀಶ್ (34) ಅವರಿಗೆ ತಲೆ ಮತ್ತು ಕೈಗಳಿಗೆ ಬಲವಾಗಿಪೆಟ್ಟು ಬಿದ್ದಿದೆ.

ಕಾರು ಚಾಲನೆ ಮಾಡುತ್ತಿದ್ದ ಗೋಣಿಕೊಪ್ಪದ ನಿವಾಸಿ ತನ್ವೀರ್ (37) ಎಂಬವರಿಗೆ ತಲೆಭಾಗಕ್ಕೆ ಪೆಟ್ಟು ಬಿದ್ದಿದೆ. ಇನ್ನೊಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕೇರಳ ರಾಜ್ಯ ಮಲಪುರಂ ಜಿಲ್ಲೆಯ ನಿವಾಸಿಗಳಾದ ಶೀಯಾಬ್ (32), ಅಶೀಫ್ (22) ಮತ್ತು ಮುಸ್ತಫ (20) ಅವರುಗಳಿಗೆ ತಲೆ ಮತ್ತು ಬೆನ್ನು ಭಾಗಗಳಿಗೆ ಪೆಟ್ಟಾಗಿದೆ. ಗಾಯಾಳುಗಳನÀ್ನು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಪ್ರಥಮ ಚಿಕೀತ್ಸೆ ನೀಡಿದ್ದು ಪ್ರಾಣಾಪಯದಿಂದ ಪಾರಾಗಿದ್ದಾರೆ. ಗಾಯಾಳು ಹರೀಶ್ ಅವರನ್ನು ಹೆಚ್ಚಿನ ಚಿಕೀತ್ಸೆಗಾಗಿ ಸುಳ್ಯ ನಗರದ ಕೆ.ವಿ.ಜಿ. ಮೆಡಿಕಲ್ ಕಾಲೇಜಿನಲ್ಲಿ ದಾಖಲು ಮಾಡಲಾಗಿದೆ.

ಗಾಯಾಳು ಶಿಯಾಬ್ ನೀಡಿದ ದೂರಿನ ಮೇರೆಗೆ ಕಾರು ಚಾಲಕ ತನ್ವೀರ್ ಎಂಬವರ ಮೇಲೆ ವೀರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ. ಅಪಘಾತವಾದ ರಭಸಕ್ಕೆ ವಾಹನಗಳು ನಜ್ಜುಗುಜ್ಜಾಗಿದೆ. ವಾಹನಗಳನ್ನು ತಮ್ಮ ವಶಕ್ಕೆ ಪಡೆದುಕೊಂಡು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.