ಮಡಿಕೇರಿ, ಜ. 23: ಯೋಗದಿಂದ ಆರೋಗ್ಯದ ಜೊತೆಗೆ ಆತ್ಮಾಭಿಮಾನ ಬೆಳೆಸಿಕೊಳ್ಳಲು ಸಾಧ್ಯ ಎಂದು ಮೈಸೂರಿನ ಪರಮಹಂಸ ಯೋಗ ತೆರಪಿ ಸಂಸ್ಥೆಯ ಸ್ಥಾಪಕ ನಿರ್ದೇಶಕ ಡಾ. ಎ.ಆರ್. ಸೀತಾರಾಮ್ ಅಭಿಪ್ರಾಯಪಟ್ಟಿದ್ದಾರೆ. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಮಾನವಪ್ರಜ್ಞೆ ಮತ್ತು ಯೋಗವಿಜ್ಞಾನ ವಿಭಾಗದಿಂದ ಧರ್ಮನಿಧಿ ಯೋಗಪೀಠ ಎಂಬ ಪ್ರಚಾರೋಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಯೋಗಕ್ಕೆ ಹೆಚ್ಚು ಮಾನ್ಯತೆ ಇದ್ದು, ದೇಶಾದ್ಯಂತ ಪ್ರಸಿದ್ಧಿಯನ್ನು ಪಡೆದಿದೆ. ಯೋಗದಿಂದ ಬುದ್ಧಿ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಜೊತೆಗೆ ಭಗವದ್ಗೀತೆ, ಬೈಬಲ್, ಕುರಾನ್‍ಗಳನ್ನು ಓದುವ ಮೂಲಕ ಒತ್ತಡಗಳನ್ನು ದೂರಮಾಡಲು, ಏಕಾಗ್ರತೆ ಬೆಳೆಸಿಕೊಳ್ಳಲು ಸಾಧ್ಯ ಎಂದರು.

ಈ ಸಂದರ್ಭ ಡಾ. ಸೀತಾರಾಮ್ ವಿದ್ಯಾರ್ಥಿಗಳೊಂದಿಗೆ ಯೋಗ ಪ್ರದರ್ಶನ ನೀಡಿದರು. ಪರಮಹಂಸ ಯೋಗ ತೆರಪಿ ಸಂಸ್ಥೆಯ ಪ್ರಮುಖರಾದ ಮಹೇಶ್, ಪ್ರಾಂಶುಪಾಲೆ ಡಾ. ಪಾರ್ವತಿ ಅಪ್ಪಯ್ಯ ಹಾಗೂ ಇತರರು ಹಾಜರಿದ್ದರು.