ವೀರಾಜಪೇಟೆ, ಫೆ. 4: ಕಾವೇರಿ ಪದವಿ ಕಾಲೇಜು ವೀರಾಜಪೇಟೆ ಹಾಗೂ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಅಂತರ ಕಾಲೇಜು ಗ್ರಾಮೀಣ ಮಹಿಳಾ ಕ್ರೀಡಾಕೂಟವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು. ಅಧ್ಯಕ್ಷ ಸ್ಥಾನವನ್ನು ಕಾವೇರಿ ವಿದ್ಯಾಸಂಸ್ಥೆಯ ನಿರ್ದೇಶಕಿ ಡಾ. ಜೆ. ಪೊನ್ನಮ್ಮ ಮಾಚಯ್ಯ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಕಾವೇರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಎ.ಎಸ್. ಈರಪ್ಪ, ನಿವೃತ್ತ ಆಂಗ್ಲ ಭಾಷಾ ಉಪನ್ಯಾಸಕಿ ಪ್ರೊ. ಕೆ.ಎಸ್. ಜ್ಯೋತಿ, ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ಕಾಫಿ ಮಂಡಳಿಯ ಉಪಾಧ್ಯಕ್ಷೆ ರೀನಾ ಪ್ರಕಾಶ್, ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೇಟ್ ರೇಷ್ಮಾ ದೇವಯ್ಯ, ಮಂಗಳೂರು ವಿಶ್ವವಿದ್ಯಾನಿಲಯದ ಕ್ರೀಡಾಕೂಟದ ವೀಕ್ಷಕ ಹರಿದಾಸ್ ಕೂಲುರು ಹಾಗೂ ಕಾಲೇಜಿನ ಪ್ರಾಂಶುಪಾಲ ಪ್ರೊ. ಸಿ.ಎಂ. ನಾಚಪ್ಪ ಉಪಸ್ಥಿತರಿದ್ದರು.

ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಪ್ರೊ. ಈರಪ್ಪ, ವಿದ್ಯಾಸಂಸ್ಥೆ ಬೆಳೆದು ಬಂದ ಹಾದಿಯನ್ನು ವಿವರಿಸಿದರು. ಮಹಿಳಾ ಕಾಲೇಜು ಆಗಿದ್ದ ವಿದ್ಯಾಸಂಸ್ಥೆಯು, ಮೈದಾನಗಳ ಕೊರತೆಯನ್ನು ಮೀರಿ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಉತ್ತಮವಾದ ಸಾಧನೆ ಮಾಡಿದ್ದನ್ನು ನೆನಸಿಕೊಂಡರು. ಡಾ. ಪೊನ್ನಮ್ಮ ಅಧ್ಯಕ್ಷಿಯ ಭಾಷಣದಲ್ಲಿ ಕ್ರೀಡೆಯು ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಅತ್ಯಂತ ಪ್ರಮುಖ ಅಂಶ ಎಂದು ಹೇಳಿದರು. ಕ್ರೀಡಾಕೂಟದ ಅಂಗವಾಗಿ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿನಿಗಳಿಗೆ ಹಾಕಿ, ವಾಲಿಬಾಲ್, ಕಬಡ್ಡಿ ಹಾಗೂ ಥ್ರೋಬಾಲ್ ಪಂದ್ಯಾವಳಿಗಳನ್ನು ಆಯೋಜಿಸಲಾಗಿತ್ತು. ಹಾಕಿಯಲ್ಲಿ ಮೂರ್ನಾಡು ಪ್ರಥಮ ದರ್ಜೆ ಕಾಲೇಜು, ವಾಲಿಬಾಲ್ ಹಾಗೂ ಕಬಡ್ಡಿಯಲ್ಲಿ ಸೋಮವಾರಪೇಟೆಯ ಸೆಂಟ್ ಜೋಸೆಫ್ ಕಾಲೇಜು ಹಾಗೂ ಥ್ರೋಬಾಲ್‍ನಲ್ಲಿ ಗೋಣಿಕೊಪ್ಪಲು ಕಾವೇರಿ ಪದವಿ ಕಾಲೇಜು ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.