ಮಡಿಕೇರಿ, ಫೆ. 4: ಐದು ವರ್ಷಗಳ ಹಿಂದೆ ಮೊದಲ ಬಾರಿಗೆ ಕೊಡಗು ಜಿಲ್ಲೆಯ ಕುಗ್ರಾಮ ಕಾಲೂರು ವ್ಯಾಪ್ತಿಯಲ್ಲಿ ಸಂಜೆಗತ್ತಲೆ ನಡುವೆ ಗ್ರಾಮಸ್ಥರಿಗೆ ಕಾಣಿಸಿಕೊಂಡಿದ್ದ ನಕ್ಸಲರು, ಅಲ್ಲಿನ ನಿವಾಸಿಗಳಿಂದ ದಿನಸಿ ಸಂಗ್ರಹಿಸಿಕೊಂಡು ಕಾರ್ಗತ್ತಲೆ ನಡುವೆ ಕಾಡಿನಲ್ಲಿ ನಾಪತ್ತೆಯಾಗಿದ್ದು. ಮತ್ತೆ ಐದು ವರ್ಷದ ಬಳಿಕ ಕಾನನದ ನಡುವೆ ಅದೇ ಸುಬ್ರಹ್ಮಣ್ಯ ಬೆಟ್ಟ ತಪ್ಪಲು ಶ್ರೇಣಿಯ ಕೊಯನಾಡುವಿನಲ್ಲಿ ಪ್ರತ್ಯಕ್ಷರಾಗಿದ್ದಾರೆ.2012ನೇ ಇಸವಿ, ಅಕ್ಟೋಬರ್ 29 ರಂದು ಸಂಜೆಗತ್ತಲೆ ನಡುವೆಯೇ ಕಾಲೂರು ಗ್ರಾಮದಲ್ಲಿ ಓರ್ವ ಮಹಿಳೆಯ ಸಹಿತ ನಾಲ್ವರು ನಕ್ಸಲರ ತಂಡ ಶಸ್ತ್ರಸಜ್ಜಿತರಾಗಿ ಬಂದಿತ್ತು. ಮುಸ್ಸಂಜೆಯಲ್ಲಿ ಗದ್ದೆ ಕೆಲಸ ಪೂರೈಸಿ ಮನೆಗೆ ಹೊರಟಿದ್ದ ದಂಪತಿ ಹಾಗೂ ನೆರೆಮನೆಯ ವ್ಯಕ್ತಿಯೊಡಗೂಡಿದ ನಕ್ಸಲರು ಅಲ್ಲಿನ ಕನ್ನಿಕಂಡ ಮನೆ ಪ್ರವೇಶಿಸಿದ್ದರು.
ಕನ್ನಿಕಂಡ ಪಳಂಗಪ್ಪ ಹಾಗೂ ಕಾವೇರಿ ದಂಪತಿಯಿಂದ ಅಕ್ಕಿ, ಬೇಳೆ, ಬೆಲ್ಲ, ಮೆಣಸಿನಪುಡಿ ಇತ್ಯಾದಿ ಸಂಗ್ರಹಿಸುವಾಗ, ಅದೇ ಕುಟುಂಬದ ಗಣೇಶ ಕೂಡ ಇದ್ದರಾದರೂ, ಶಸ್ತ್ರಸಜ್ಜಿತ ನಕ್ಸಲರೊಂದಿಗೆ ಮರು ಮಾತನಾಡದೆ ಕೇಳಿದ್ದನ್ನು ಕೊಟ್ಟು ಕಳುಹಿಸಿದ್ದರು. ‘ನಾವು ಜನಪರ ಹೋರಾಟಗಾರರು, ಕಾಡಿನ ಜನ, ನಿಮ್ಮನ್ನು ಉಳಿಸುವದಕ್ಕಾಗಿ ನಮ್ಮ ಹೋರಾಟ, ನಾವು ಬಂದಿರುವ ವಿಷಯ ಯಾರಿಗೂ ಹೇಳಬೇಡಿ’ ಎಂದು ಎಚ್ಚರಿಸಿಯೇ ನಾಲ್ವರು ನಕ್ಸಲರ ತಂಡ ಕಾಲೂರುವಿನ ಕಾಡಿನ ನಡುವೆ ಅಂದು ಕಣ್ಮರೆಯಾಗಿತ್ತು.
ಆ ಬಳಿಕ ಕೆಲವೇ ಸಮಯದಲ್ಲಿ ಕೊಡಗಿನ ಭಾಗಮಂಡಲ ಅರಣ್ಯ ವಲಯದ ಮುಂಡ್ರೋಟುವಿನಲ್ಲಿ ಕಾಣಿಸಿಕೊಂಡಿದ್ದ ನಕ್ಸಲರು ಅಲ್ಲಿನ ಕಾರ್ಮಿಕ ಜೋಯಿ ಎಂಬವರ ಮುಖಾಂತರ ದಿನಸಿ ಪದಾರ್ಥ ಸಂಗ್ರಹಿಸಿ, ಕೇರಳ-ಕೊಡಗು ಗಡಿ ಪ್ರದೇಶದ ಕಾಡಂಚಿನಿಂದ ಮರೆಯಾಗಿ ದ್ದರು. ಈ ಪ್ರಕರಣದಲ್ಲೇ ಪ್ರಸಕ್ತ ಕೊಯಮತ್ತೂರು ಜೈಲಿನಲ್ಲಿರುವ, ಕೇರಳ ಮೂಲದ ನಕ್ಸಲ್ ಮುಖಂಡ ರೂಪೇಶ್ ಭಾಗಮಂಡಲ ಠಾಣೆಯಲ್ಲಿ ಪೊಲೀಸರು ದಾಖಲಿಸಿರುವ ಪ್ರಕರಣ ಸಂಬಂಧ ವಿಚಾರಣೆ ಎದುರಿಸುತ್ತಿದ್ದಾನೆ.
ಹೀಗೆ ಕೊಡಗಿನ ಗಿರಿಕಂದರಗಳ ನಡುವೆ ವ್ಯಾಪಿಸಿಕೊಂಡಿರುವ ಕಾಲೂರು ಬೆಟ್ಟ ಸಾಲಿನ ಅರಣ್ಯದಿಂದ, ಕೆಲವೇ ಸಮಯದಲ್ಲಿ ಭಾಗಮಂಡಲ ವ್ಯಾಪ್ತಿಯ ಮುಂಡ್ರೋಟು ಕಾಡಂಚಿನಲ್ಲಿ ನಕ್ಸಲರು ಪ್ರತ್ಯಕ್ಷರಾಗಿ ದ್ದರು. ಅನಂತರದಲ್ಲಿ ಕೊಡಗಿನಲ್ಲಿ ತಮ್ಮ ಇರುವಿಕೆ ತೋರ್ಪಡಿಸುವ ತಂತ್ರಗಾರಿಕೆಯೊಂದಿಗೆ ವೀರಾಜಪೇಟೆ ತಾಲೂಕಿನ ಕೇರಳ ಗಡಿಯಲ್ಲಿ ಪ್ರತ್ಯಕ್ಷರಾಗಿದ್ದರು.
ಈ ಸಂಬಂಧ 2013ರಲ್ಲಿ ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದ್ದು, ನಕ್ಸಲರ ತಂಡವೊಂದು ಮಾಕುಟ್ಟ ಸಂರಕ್ಷಿತ ಅರಣ್ಯ ಪ್ರದೇಶದ ಉಡುಂಬೆಯಲ್ಲಿ ಗೋಚರಿಸಿತ್ತು. ಆ ಮೇರೆಗೆ ತಾ. 14.2.2013 ರಂದು ಮೊಕದ್ದಮೆ ದಾಖಲಿಸುವದರೊಂದಿಗೆ ವ್ಯಾಪಕ ಶೋಧ ನಡೆಸಿದರೂ ಸುಳಿವು ಲಭಿಸಿರಲಿಲ್ಲ.
(ಮೊದಲ ಪುಟದಿಂದ)
ಒಂದೆಡೆ ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳನ್ನು ಬೆಸೆಯುವ ಅರಣ್ಯದಂಚಿನಲ್ಲಿ ಗೋಚರಿಸಿದ್ದ ನಕ್ಸಲರು, ಆ ಬಳಿಕ ನೆರೆಯ ಕೇರಳ ರಾಜ್ಯದೊಂದಿಗೆ ಕಾವೇರಿ ನಾಡಿನ ಸಂಪರ್ಕ ಸಾಧಿಸುವ ಬೇರೊಂದು ದಿಕ್ಕಿನಲ್ಲಿ ಪ್ರತ್ಯಕ್ಷರಾಗಿ ಗ್ರಾಮೀಣ ಜನತೆಯಲ್ಲಿ ಭಯ ಸೃಷ್ಟಿಸಿದ್ದರು.
ಅನಂತರದ ಕೆಲವೇ ತಿಂಗಳ ಬಳಿಕ ಅದೇ 2013ರಲ್ಲಿ ಕೇವಲ ನಾಲ್ಕಾರು ತಿಂಗಳಿನೊಳಗೆ ದಕ್ಷಿಣ ಕೊಡಗಿನ ಗಡಿಯ ಕಾಡಂಚಿನ ಗ್ರಾಮದಲ್ಲಿ ನಕ್ಸಲರು ಸುಳಿದಾಡಿದ್ದರು. ಅಲ್ಲದೆ ಅದುವರೆಗೆ ಮೂರರಿಂದ ನಾಲ್ಕೈದು ಮಂದಿ ಮಾತ್ರ ಶಸ್ತ್ರಧಾರಿಗಳಾಗಿ ಕಂಡಿದ್ದರೆ, ಅಲ್ಲಿ ಅಧಿಕವಿದ್ದರು.
ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಆ ಕುರಿತು ಪ್ರಕರಣವೂ ದಾಖಲಾಗಿದೆ. ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಪೂಕಳ ಗ್ರಾಮದ ನೀಟ್‍ಕುಂದ್ ಎಂಬಲ್ಲಿನ ನಿವಾಸಿ ಹರೀಶ್ ಎಂಬವರ ಮನೆಗೆ ತೆರಳಿದ್ದ ನಕ್ಸಲರು, ತಮ್ಮ ಎಂದಿನ ಕಾಯಕ ದಂತೆ ಆಹಾರ ಪದಾರ್ಥ ಸಂಗ್ರಹಿಸಿಕೊಂಡು ಕಾಡು ಸೇರಿದ್ದರು. ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ನೀಡಿದ್ದ ಸುಳಿವಿನಂತೆ ಈ ತಂಡದಲ್ಲಿ ಒಟ್ಟು 9 ಮಂದಿ ನಕ್ಸಲರಿದ್ದರು.
ಹೀಗೆ ಉತ್ತರ ಕೊಡಗಿನ ಕುಗ್ರಾಮದ ಕಾಲೂರು ಗ್ರಾಮದ ಮೂಲಕ ತಮ್ಮ ಇರುವಿಕೆಯನ್ನು ತೋರ್ಪಡಿಸುವದರೊಂದಿಗೆ ಬಹಿರಂಗವಾಗಿ ಗ್ರಾಮನಿವಾಸಿಗಳ ನಡುವೆ ಕಾಣಿಸಿಕೊಂಡಿದ್ದ ನಕ್ಸಲರು, ದಕ್ಷಿಣ ಕೊಡಗಿನ ಕೇರಳ ಗಡಿ ಗ್ರಾಮಗಳಲ್ಲಿ ಭೇಟಿ ಮುಖಾಂತರ ‘ನಾವಿಲ್ಲೇ ಇದ್ದೇವೆ’ ಎಂಬದನ್ನು ತಿಳಿ ಹೇಳಿದ್ದರು. ಆಗ ವ್ಯಾಪಕ ‘ಕೋಂಬಿಂಗ್’ ನಡೆಸಿದರೂ ಏನೂ ಮಾಹಿತಿ ಲಭಿಸಲಿಲ್ಲ.
ಆದರೆ ಈ ಬೆಳವಣಿಗೆಯನ್ನು ಆ ಭಾಗದ ನಿವಾಸಿಗಳು ಮರೆಯುವ ಮೊದಲೇ, ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಪರಕಟಗೇರಿಯಲ್ಲಿ ಮತ್ತೆ ಕಾಣಿಸಿಕೊಂಡಿದ್ದರು. ಪರಕಟಗೇರಿ ಗ್ರಾಮದ ಕೆಲಮಂದಿ ತೋಟ ಕಾರ್ಮಿಕರಿಗೆ ರಸ್ತೆಯಲ್ಲಿ ಸಿಕ್ಕಿದ್ದ ಶಸ್ತ್ರಧಾರಿ ನಕ್ಸಲರು, ತಾವು ಜನಪರ ಹೋರಾಟಗಾರರೆಂದೂ, ಕಾರ್ಮಿಕರ ಹಿತಕ್ಕಾಗಿ ಹೋರಾಡು ತ್ತಿರುವದಾಗಿ ಮಾತುಕತೆ ನಡೆಸಿ ಅಲ್ಲಿಂದ ತೆರಳಿದ್ದರು.
ಆ ಬೆನ್ನಲ್ಲೇ ಕೊಡಗು ಜಿಲ್ಲೆಯಲ್ಲಿ ನಕ್ಸಲರ ವಿರುದ್ಧ ಕಾನನದಲ್ಲಿ ವ್ಯಾಪಕ ಶೋಧ ಕಾರ್ಯ ನಡೆಸಲಾಯಿ ತಾದರೂ, ಯಾವ ಸುಳಿವು ಲಭಿಸಲಿಲ್ಲ. ಮಾತ್ರವಲ್ಲದೆ ಕಳೆದ ಸುಮಾರು ಐದು ವರ್ಷಗಳ ತನಕ ಕೊಡಗಿನ ಎಲ್ಲಿಯೂ ನಕ್ಸಲರ ನೆರಳು ಬಹಿರಂಗವಾಗಿ ಕಾಣಿಸಿರಲಿಲ್ಲ.
ಈ ದಿಸೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೂಡ ಕೊಡಗು ಜಿಲ್ಲೆಯನ್ನು ನಕ್ಸಲೀಯ ಚಟುವಟಿಕೆ ಬೇರೂರುವ ಸೂಕ್ಷ್ಮತೆ ಮನಗಂಡು, ಪ್ರತ್ಯೇಕವಾಗಿ ನಕ್ಸಲ್ ನಿಗ್ರಹದಳವನ್ನು ಕೂಡ ರಚಿಸಿತ್ತು. ಇದೀಗ ಕೊಯನಾಡುವಿನಲ್ಲಿ ಮತ್ತೆ ನಕ್ಸಲರು ಕಾಣಿಸಿಕೊಂಡಿರುವ ಬೆನ್ನಲ್ಲೇ ವ್ಯಾಪಕ ಶೋಧ ಮುಂದುವರಿದಿದ್ದು, ಕಾಡಿನ ಹಾದಿಯಲ್ಲಿ ಕಾರ್ಯಾಚರಣೆಗೆ ಅರಣ್ಯ ಇಲಾಖೆಯ ಸಹಕಾರವನ್ನು ಪಡೆಯಲಾಗಿದೆ.