ಮಡಿಕೇರಿ, ಫೆ. 5: ಅಲ್ಪಸಂಖ್ಯಾತರಿಗಾಗಿ ಸರ್ಕಾರ ಜಾರಿಗೊಳಿಸಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಪ್ರತಿ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಮಾಹಿತಿ ಕೇಂದ್ರ ಆರಂಭಿಸಲಾಗಿದ್ದು, ಈ ಕೇಂದ್ರಗಳ ಮೂಲಕ ಗ್ರಾಮ ಮಟ್ಟ ದಲ್ಲಿ ಹೆಚ್ಚಿನ ಜಾಗೃತಿ ಅಭಿಯಾನ ಆಯೋಜಿಸುವಂತೆ ಬಿಸಿಎಂ ಇಲಾಖೆ ಅಧಿಕಾರಿಗೆ ರಾಜ್ಯ ಅಲ್ಪ ಸಂಖ್ಯಾತರ ಆಯೋಗದ ಅಧ್ಯಕ್ಷ ನಸೀರ್ ಅಹ್ಮದ್ ನಿರ್ದೇಶನ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಧಾನ ಮಂತ್ರಿ ಅವರ ಹೊಸ 15 ಅಂಶಗಳ ಕಾರ್ಯಕ್ರಮ ಹಾಗೂ ವಿವಿಧ ಫಲಾನುಭವಿಗಳ ಆಧಾರಿತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾಹಿತಿ ಕೇಂದ್ರದ ಮೂಲಕ ಪ್ರತಿ ಶುಕ್ರವಾರ ಮಸೀದಿಗಳಲ್ಲಿ ಹಾಗೂ ಭಾನುವಾರ ಚರ್ಚ್ಗಳಲ್ಲಿ ಅಲ್ಪಸಂಖ್ಯಾತರಿಗೆ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಕರಪತ್ರದ ಮೂಲಕ ಮಾಹಿತಿ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರ ಅಲ್ಪಸಂಖ್ಯಾತರಿಗಾಗಿ 15 ಅಂಶಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಅಲ್ಪಸಂಖ್ಯಾತರಿಗೆ ಸರಿಯಾದ ರೀತಿಯಲ್ಲಿ ತಲುಪಿಸು ವಂತಾಗಬೇಕು. ಅಲ್ಪಸಂಖ್ಯಾತರು ಶಿಕ್ಷಣ ಸೇರಿದಂತೆ ಹಲವು ರಂಗಗಳಲ್ಲಿ ಹಿಂದುಳಿದಿದ್ದು, ಮುಖ್ಯವಾಹಿನಿಗೆ ತರಲು ಪ್ರಯತ್ನಿಸಬೇಕಿದೆ ಎಂದು ತಿಳಿಸಿದರು.
ಶಾದಿಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಕಾಲ ಮಿತಿ ಯೊಳಗೆ ಅರ್ಜಿ ಸಲ್ಲಿಸುವದು ಮತ್ತಿತರ ಬಗ್ಗೆ ಅರಿವು ಮೂಡಿಸು ವಂತೆ ಸೂಚನೆ ನೀಡಿದರು. ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಅಲ್ಪಸಂಖ್ಯಾತರಿಗಾಗಿ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಅವುಗಳ ಶೇಕಡಾವಾರು ಪ್ರಗತಿ ಸಾಧಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿ ಗಳಿಗೆ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರು ನಿರ್ದೇಶನ ನೀಡಿದರು.
ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ವತಿಯಿಂದ ಅರಿವು ಯೋಜನೆ, ಗಂಗಾ ಕಲ್ಯಾಣ ಯೋಜನೆ ಇವುಗಳ ಪ್ರಗತಿ ಕುಂಠಿತಗೊಂಡಿದ್ದು, ಫೆಬ್ರವರಿ ತಿಂಗಳ ಅಂತ್ಯದೊಳಗೆ ಪ್ರಗತಿ ಸಾದಿಸುವಂತೆ ಸೂಚನೆ ನೀಡಿದರು.
ಜಿ.ಪಂ. ಸದಸ್ಯ ಅಬ್ದುಲ್ ಲತೀಫ್ ಮಾತನಾಡಿ, ಶಾದಿಮಹಲ್ ಭವನ ನಿರ್ಮಾಣ ಸಂಬಂಧಿಸಿದಂತೆ ಏಜೆನ್ಸಿಗೆ ನೀಡುವದರ ಬದಲಾಗಿ ಹಿಂದೆ ಇದ್ದ ಪದ್ಧತಿಯಂತೆ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಸಮಿತಿಯ ವಿಶೇಷ ಆಹ್ವಾನಿತ ರಾದ ಅಖಿಲ್ ಅವರು ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಜನಸಂಖ್ಯೆ, ಕೃಷಿಯಲ್ಲಿ ತೊಡಗಿಸಿಕೊಂಡವರು ಮತ್ತಿತರ ಸಂಬಂಧ ಹಲವು ಮಾಹಿತಿ ಒದಗಿಸುವಂತೆ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಮಾತನಾಡಿ, ಜಿಲ್ಲೆಯಲ್ಲಿ 94ಸಿ, 94 ಸಿಸಿ ರಡಿ ಬಾಕಿ ಇರುವ ಅರ್ಜಿ ಗಳನ್ನು ವಿಲೇವಾರಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವದು ಎಂದು ಮಾಹಿತಿ ನೀಡಿದರು.
ಜಿ.ಪಂ. ಸಿಇಓ ಪ್ರಶಾಂತ್ ಕುಮಾರ್ ಮಿಶ್ರ ಅಲ್ಪಸಂಖ್ಯಾತರಿಗಾಗಿ ಇರುವ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಗ್ರಾಮಸಭೆಗಳ ಮೂಲಕ ಜಾಗೃತಿ ಮೂಡಿಸಲಾಗುವದು ಎಂದು ಅವರು ತಿಳಿಸಿದರು.
ಆಯೋಗದ ಸದಸ್ಯರಾದ ಅಬ್ದುಲ್ ಹಮೀದ್, ರಫಿ ಭಂಡಾರಿ, ಮಾರ್ಷಲ್ ಮಂತೇರೋ, ಆರ್. ಅಬ್ದುಲ್ ಹಮೀದ್, ಮೊಹಮದ್ ಪಟೇಲ್, ಜಲ್ಜೀದ್ ಸಿಂಗ್, ಮಜ್ ಅಹ್ಮದ್ ಷರೀಫ್, ಮಹೇಂದ್ರ ಜೈನ್, ಡಾ. ಮತಿಲ್ಡಾ ಡಿಸೋಜಾ, ಅಖಿಲ್ ಅಹಮ್ಮದ್, ಜಿ.ಪಂ. ಸÀದಸ್ಯರಾದ ಅಹ್ಮದ್ ಪಟೇಲ್, ಅಬ್ದುಲ್ ಲತೀಫ್, ನಗರಸಭೆ ಸದಸ್ಯ ಪೀಟರ್ ಅಲ್ಪಸಂಖ್ಯಾತರಿಗಾಗಿ ಅಭಿವೃದ್ಧಿ ಸಂಬಂಧ ಹಲವು ಮಾಹಿತಿ ಪಡೆದರು.
ಬಿಸಿಎಂ ಇಲಾಖೆ ಅಧಿಕಾರಿ ಕೆ.ವಿ. ಸುರೇಶ್, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಾಗೇಂದ್ರ, ಉಪ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ರಾಜ್, ಆಹಾರ ಇಲಾಖೆ ಉಪ ನಿರ್ದೇಶಕ ಪುಟ್ಟಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಭಾಗ್ಯ, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಸಿ. ಜಗನಾಥ್, ನಗರಾಭಿವೃದ್ಧಿ ಕೋಶದ ಇಂಜಿನಿಯರ್ ಸ್ವಾಮಿ ಇತರರು ಹಲವು ಮಾಹಿತಿ ನೀಡಿದರು.
ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.