ಗೋಣಿಕೊಪ್ಪಲು, ಫೆ. 5: ನೂತನ ಶೌಚಾಲಯವನ್ನು ನಿರ್ಮಿಸಿ ಎರಡು ತಿಂಗಳ ಬಳಿಕ ಉದ್ಘಾಟನೆ ಗೊಂಡರೂ ಅರ್ಧ ಗಂಟೆಯಲ್ಲೇ ಮತ್ತೆ ಶೌಚಾಲಯಕ್ಕೆ ಬೀಗ ಜಡಿಯುವದರೊಂದಿಗೆ ಸಾರ್ವಜನಿಕ ಉಪಯೋಗಕ್ಕೆ ಬಾರದಂತಾದ ಸ್ಥಿತಿ ಗೋಣಿಕೊಪ್ಪಲು ಪಟ್ಟಣದಲ್ಲಿ ನಡೆದಿದೆ.
ಗೋಣಿಕೊಪ್ಪಲು ಪಟ್ಟಣದಲ್ಲಿ ಶಿಥಿಲಾವಸ್ಥೆಯ ಹಳೆಯದಾದ ಶೌಚಾಲಯ ಕಟ್ಟಡವನ್ನು ಕೆಡವಿ ಹಾಕಲಾಗಿತ್ತು. ಜಿ.ಪ. ಸದಸ್ಯರಾಗಿದ್ದ ಕೋಡೆಂದೇರ ಬಾಂಡ್ ಗಣಪತಿ ಹಾಗೂ ಜಿ.ಪಂ. ಅಧ್ಯಕ್ಷರಾಗಿದ್ದ ಶರೀನ್ ಸುಬ್ಬಯ್ಯ ಅವರು ರೂ. 20 ಲಕ್ಷ ಅನುದಾನ ಬಿಡುಗಡೆ ಗೊಳಿಸಿ ದ್ದರು. ಪಟ್ಟಣದಲ್ಲಿ ಶೌಚಾಲಯ ಕಟ್ಟಡಕ್ಕೆ ವಿರೋಧ ವ್ಯಕ್ತಗೊಂಡ ಹಿನ್ನೆಲೆಯಲ್ಲಿ ಈ ಅನುದಾನದಲ್ಲಿ ಮಾರ್ಕೆಟ್ ಬಳಿಯ ಕಟ್ಟಡವನ್ನು ಕೆಡವಿ ನೂತನ ಶೌಚಾಲಯ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಈ ಸಂದರ್ಭ ಪಂಚಾಯಿತಿ ಸದಸ್ಯರ ಹೊಂದಾಣಿಕೆ ಕೊರತೆಯಿಂದ ಅರ್ಧದಲ್ಲೆ ಮೊಟಕಾಗಿತ್ತು.
ಪ್ರಸ್ತುತ ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ ಅವರ ಮುತುವರ್ಜಿ ಯಿಂದ ರೂ. 15 ಲಕ್ಷ ಅನುದಾನವನ್ನು ಬಿಡುಗಡೆಗೊಳಿಸಿ ಕಾಮಗಾರಿ ಮುಂದುವರೆಸುವಂತೆ ಗುತ್ತಿಗೆ ದಾರರನ್ನು ಮನವೊಲಿಸಲಾಗಿತ್ತು. ಇದೀಗ ಕಟ್ಟಡ ಕಾಮಗಾರಿ ಮುಗಿದು ಎರಡು ತಿಂಗಳು ಕಳೆದಿದ್ದು, ಈ ಬಗ್ಗೆ ‘ಶಕ್ತಿ’ ಶೌಚಾಲಯದ ಬಾಗಿಲು ತೆರೆದಿಲ್ಲ ಎಂಬದಾಗಿ ವರದಿ ಪ್ರಕಟಿಸಿತ್ತು.
ಇಂದು ಉದ್ಘಾಟನೆ : ವರದಿ ಪ್ರಕಟಗೊಂಡು 4 ದಿನಗಳ ಬಳಿಕ ಎಚ್ಚೆತ್ತುಗೊಂಡ ಜನಪ್ರತಿನಿಧಿಗಳು ಇಂದು ಶಾಸಕ ಕೆ.ಜಿ. ಬೋಪಯ್ಯ ನೇತೃತ್ವದಲ್ಲಿ ಉದ್ಘಾಟನೆಗೊಳಿಸ ಲಾಯಿತು. ಈ ಸಂದರ್ಭ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ನೆಲ್ಲೀರ ಚಲನ್ ಕುಮಾರ್, ಗ್ರಾ.ಪಂ. ಅಧ್ಯಕ್ಷೆ ಸೆಲ್ವಿ, ಸದಸ್ಯರುಗಳಾದ ಬಿ.ಎನ್. ಪ್ರಕಾಶ್, ನೂರೇರ ರತಿ ಅಚ್ಚಪ್ಪ, ಸುರೇಶ್ ರೈ, ಮಂಜುಳ, ರಾಮಕೃಷ್ಣ, ಜೆ.ಕೆ. ಸೋಮಣ್ಣ, ಮುರುಗ, ಶಾಹಿನ, ಜಿಲ್ಲಾ ವರ್ತಕರ ಪ್ರಕೋಷ್ಟಕ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ತಾ.ಪಂ ಮಾಜಿ ಅಧ್ಯಕ್ಷೆ ರಾಣಿ ನಾರಾಯಣ, ಗ್ರಾ.ಪಂ. ಮಾಜಿ ಅಧ್ಯಕ್ಷ ರಾಜೇಶ್. ಕೆ., ಸದಸ್ಯರಾದ ಸುರೇಶ್ ಹಾಜರಿದ್ದರು.
ಮತ್ತೆ ಬೀಗ : ಶೌಚಾಲಯ ಸ್ವಚ್ಛತೆಗೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ಏಪ್ರಿಲ್‍ವರೆಗೆ ಆಗಿಲ್ಲವೆಂಬ ನೆಪವೊಡ್ಡಿ ಗ್ರಾಮ ಪಂಚಾಯಿತಿ ಪಿಡಿಓ ಉದ್ಘಾಟನೆಗೊಂಡ ಶೌಚಾಲಯಕ್ಕೆ ಬೀಗ ಜಡಿದಿದ್ದಾರೆ.