ಸಿದ್ದಾಪುರ, ಫೆ.5: ರಾಜ್ಯದಲ್ಲಿ ಭೂಮಿ ಹಾಗೂ ವಸತಿ ರಹಿತ ಜನರಿಗೆ ಭೂಮಿ ಮತ್ತು ವಸತಿ ಕಲ್ಪಿಸಲು ತೆಗೆದುಕೊಂಡಿರುವ ಕ್ರಮಗಳ ಕುರಿತು ಪರಿಶೀಲಿಸಲು ಮೇಲು ಸ್ತುವಾರಿಗಾಗಿ ಉನ್ನತಮಟ್ಟದ ಸಮಿತಿಯನ್ನು ರಚಿಸಲು ಸರಕಾರ ಆದೇಶ ಹೊರಡಿಸಿದೆ.

ಇತ್ತೀಚಿಗೆ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ರಾಜ್ಯದ ಭೂಮಿ ಮತ್ತು ವಸತಿ ಸಮಸ್ಯೆಯನ್ನು ಕೂಲಂಕಷವಾಗಿ ಚರ್ಚಿಸಿ, ಸಮಗ್ರ ಪರಿಹಾರೋಪಾಯ ಗಳನ್ನು ರೂಪಿಸಲು ಸರ್ಕಾರದ ಮಟ್ಟದಲ್ಲಿ ಉನ್ನತಮಟ್ಟದ ಸಮಿತಿಯನ್ನು ರಚಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿತು.

ಈ ವಿಚಾರವಾಗಿ ಸಮಿತಿ ಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ನಡೆಸಿತು. ಸಭೆಯಲ್ಲಿ ಚರ್ಚಿಸಿ ಸರ್ಕಾರ ರಾಜ್ಯದಲ್ಲಿ ಭೂರಹಿತ ಮತ್ತು ವಸತಿರಹಿತ ಜನರಿಗೆ ಭೂಮಿ ಮತ್ತು ವಸತಿ ಕಲ್ಪಿಸಲು ತೆಗೆದುಕೊಂಡಿರುವ ಕ್ರಮಗಳ ಕುರಿತು ಪರಿಶೀಲಿಸಲು ಮೇಲುಸ್ತುವಾರಿಗಾಗಿ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರು ಇವರ ಅಧ್ಯಕ್ಷತೆಯಲ್ಲಿ ಸರಕಾರದ ಮಟ್ಟದಲ್ಲಿ ಒಂದು ಉನ್ನತಮಟ್ಟದ ಸಮಿತಿಯನ್ನು ರಚಿಸಿರುವ ಕುರಿತು ತೀರ್ಮಾನಿಸಿರು ವದಾಗಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಹಾಗೂ ಕಂದಾಯ ಸಚಿವರು ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳಿಗೆ ಪ್ರಸ್ತಾವನೆ ಪತ್ರ ಹೊರಡಿಸಿದೆ. ಸಮಿತಿಯು ಎರಡು ತಿಂಗಳಿಗೊಮ್ಮೆ ಸಭೆ ಸೇರಿ ಪ್ರಸ್ತಾವನೆಯಲ್ಲಿ ವಿವರಿಸಿರುವ ವಿಷಯಗಳ ಕುರಿತು ತೆಗೆದುಕೊಂಡಿರುವ ಕ್ರಮಗಳ ಕುರಿತು ಗಮನ ಹರಿಸುವಂತೆ ತಿಳಿಸಲಾಗಿದೆ.