ಕುಶಾಲನಗರ, ಫೆ. 5: ಆಹಾರ ವಸ್ತುಗಳಲ್ಲಿ ಕಲಬೆರಕೆ ಮಾಡುವ ಮೂಲಕ ಕೆಲವೆಡೆ ವ್ಯಾಪಾರಿಗಳು ಗ್ರಾಹಕರಿಗೆ ವಂಚನೆಯಲ್ಲಿ ತೊಡಗಿರುವದಾಗಿ ತಿಳಿಸಿರುವ ಮೈಸೂರು ವಿಭಾಗದ ಗ್ರಾಹಕ ಪರಿಷತ್ತಿನ ಅಧ್ಯಕ್ಷ ಹಾಗೂ ವಿಜ್ಞಾನಿ ಸಿ.ವಿ. ನಾಗರಾಜ್, ಗ್ರಾಹಕರು ಈ ನಿಟ್ಟಿನಲ್ಲಿ ಎಚ್ಚರವಹಿಸಬೇಕಾಗಿದೆ ಎಂದು ಸಲಹೆ ನೀಡಿದರು.
ಕುಶಾಲನಗರದ ಅನುಗ್ರಹ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಗ್ರಾಹಕರ ವೇದಿಕೆ ಆಯೋಜಿಸಿದ್ದ ಉಪನ್ಯಾಸ ಹಾಗೂ ಆಹಾರ ವಸ್ತುಗಳ ಕಲಬೆರಕೆಯಾಗುತ್ತಿರುವ ಪ್ರಾತ್ಯಕ್ಷಿಕೆಗಳನ್ನು ಪ್ರಯೋಗಗಳ ಮೂಲಕ ಪರಿಚಯಿಸಿದ ಅವರು, ಸ್ವಾರ್ಥದೊಂದಿಗೆ ಕೆಲವು ವ್ಯಾಪಾರಿಗಳು ಮನುಷ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುವ ಕಲಬೆರಕೆ ವಸ್ತುಗಳನ್ನು ನೀಡುವ ಸಾಧ್ಯತೆಯಿದೆ ಎಂದ ನಾಗರಾಜ್, ಖರೀದಿ ಸಂದರ್ಭ ಪರಿಶೀಲನೆ ಮಾಡುವಂತೆ ಸಲಹೆ ನೀಡಿದರು. ದಿನನಿತ್ಯ ಬಳಸುವ ತುಪ್ಪ, ಎಣ್ಣೆ, ಖರ್ಜೂರ, ಹಾಲು, ಮೆಣಸಿನ ಪುಡಿ, ಅಡುಗೆ ಎಣ್ಣೆ, ಅರಿಶಿಣದಂತಹ ವಸ್ತುಗಳಲ್ಲಿ ರಾಸಾಯನಿಕಗಳ ಕಲಬೆರಕೆ ಯಾಗುತ್ತಿರುವ ಬಗ್ಗೆ ಪ್ರಾತ್ಯಕ್ಷಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸಿದರು.
ವಿದ್ಯಾರ್ಥಿಗಳೊಂದಿಗೆ ಕಲಬೆರಕೆ ಆಹಾರ ವಸ್ತುಗಳ ವಿಚಾರವಾಗಿ ಸಂವಾದ ನಡೆಸಿ, ಪ್ರಶ್ನೆಗಳಿಗೆ ಉತ್ತರಿಸಿದರು.