ಸುಂಟಿಕೊಪ್ಪ, ಫೆ. 5: ಆಡಳಿತ ಶಾಹಿ ವ್ಯವಸ್ಥೆಯ ಕರ್ತವ್ಯ ಲೋಪದಿಂದ ಕಂದಾಯ ಇಲಾಖೆಗೆ ಸೇರಬೇಕಾದ ಆದಾಯದಲ್ಲಿ ಖೋತಾ ಉಂಟಾದ ಬಗ್ಗೆ ವರದಿಯಾಗಿದೆ.
7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಊರುಗುಪ್ಪೆ ಪೈಸಾರಿಯಲ್ಲಿ ಟಾಟಾ ಕಂಪನಿಗೆ ಸೇರಿದ ಸರ್ವೇನಂ 124 ರಲ್ಲಿ 6.78 ಎಕ್ರೆ ಹಾಗೂ ಸರ್ವೆನಂ 126 ರಲ್ಲಿ 5.42 ಎಕ್ರೆ ಕಾಫಿ ತೋಟವನ್ನು ಕಳೆದ 3 ವರ್ಷಗಳ ಹಿಂದೆ ಸುಂಟಿಕೊಪ್ಪ ನಾಡು ಕಛೇರಿಯ ಕಂದಾಯ ಪರಿವೀಕ್ಷಕರು, ಗ್ರಾಮಲೆಕ್ಕಿಗರು ತಾಲೂಕು ತಹಶೀಲ್ದಾರರ ಆದೇಶದಂತೆ ಸರ್ವೆ ನಡೆಸಿದಾಗ ಪೈಸಾರಿ ಜಾಗವೆಂದು ಪತ್ತೆ ಹಚ್ಚಲಾಗಿತ್ತು ಆದರಂತೆ 12.28 ಎಕ್ರೆ ಕಾಫಿ ತೋಟಕ್ಕೆ ಕಂದಾಯ ಇಲಾಖೆಯಿಂದ ಬೇಲಿ ನಿರ್ಮಿಸಿ ಕಂದಾಯ ಇಲಾಖೆಯ ಆಸ್ತಿಯೆಂದು ಫಲಕವನ್ನು ನಿರ್ಮಿಸಿ ಸುರ್ಪದಿಗೆ ಪಡೆದುಕೊಂಡಿತ್ತು.
ಕಂದಾಯ ಇಲಾಖೆ ವಶಪಡಿಸಿ ಕೊಂಡ ಜಾಗದಲ್ಲಿರುವ ಕಾಫಿ ಹಾಗೂ ಕರಿಮೆಣಸುನ್ನು 2016 ನೇ ಸಾಲಿನಲ್ಲಿ 3.50 ಲಕ್ಷ ರೂ.ಗೆ ಹರಾಜು ಮಾಡಲಾಗಿತ್ತು. ಕಳೆದ ವರ್ಷ ಗ್ರಾ.ಪಂ. ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಕಂದಾಯ ಇಲಾಖೆಗೆ ಆಗಮಿಸಿ ಹರಾಜು ಪ್ರಕ್ರಿಯೆ ಬಗ್ಗೆ ಅಸಾಮಾದಾನ ವ್ಯಕ್ತಪಡಿಸಿದ ಹಿನ್ನಲೆ, ಸಾರ್ವಜನಿಕ ವಾಗಿ ಬಹಿರಂಗ ಹರಾಜುಗೊಳಿಸಲು ಕ್ರಮ ಕೈಗೊಳ್ಳಲಾಗಿತ್ತು 2017ನೇ ಸಾಲಿನಲ್ಲಿ ಫಸಲನ್ನು 5.50 ಲಕ್ಷ ರೂ.ಗೆ ಹರಾಜು ಪ್ರಕ್ರಿಯೆ ನಡೆಸಿದ್ದು 2 ವರ್ಷವೂ ಟಾಟಾ ತೋಟದವರೇ ಕಾಫಿ, ಕರಿಮೆಣಸನ್ನು ಪಡೆದು ಕೊಂಡಿದ್ದರು. ಆದರೆ ಈ ಸಾಲಿನಲ್ಲಿ ಕಂದಾಯ ಇಲಾಖೆಯವರ ಕರ್ತವ್ಯಲೋಪದಿಂದ ಇಲ್ಲಿನ ಅರೇಬಿಕಾ ಹಾಗೂ ರೋಬಾಸ್ಟಾ ಕಾಫಿಯ ಹರಾಜು ಪ್ರಕ್ರಿಯೆ ನಡೆಸದೆ ಕಂದಾಯ ಇಲಾಖೆ ಸುರ್ಪದಿಗೆ ಪಡೆದುಕೊಂಡ ಕಾಫಿ ಉದುರಿ ನೆಲಕ್ಕೆ ಬಿದ್ದು ಮಣ್ಣು ಪಾಲಾಗಿದೆ. ಸರಕಾರಕ್ಕೆ ಬರಬೇಕಾದ ಆದಾಯಕ್ಕೆ ಕತ್ತರಿ ಬಿದ್ದಿದೆ. ಊರುಗುಪ್ಪೆ ಪೈಸಾರಿಯ ಜಾಗದಲ್ಲಿರುವ ಕಾಫಿಯನ್ನು 20 ದಿನದೊಳಗೆ ಹರಾಜು ಪ್ರಕ್ರಿಯೆ ನಡೆಸಿ ಕಂದಾಯ ಇಲಾಖೆಯವರು ಕ್ರಮ ಕೈಗೊಳ್ಳದ್ದಿದಲ್ಲಿ ಗ್ರಾಮಸ್ಥರನ್ನು ಸೇರಿಸಿ ನಾಡು ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದೆಂದು 7ನೇ ಹೊಸಕೋಟೆ ಗ್ರಾ.ಪಂ. ಸದಸ್ಯರು ಗಳಾದ ಅಬ್ದುಲ್ಲಾ ಹಾಗೂ ರಮೇಶ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಈ ಪೈಸಾರಿ ಕೃಷಿಭೂಮಿಯನ್ನು ನಿವೇಶನ ರಹಿತರಿಗೆ ಹಂಚಬೇಕೆಂದು ಒತ್ತಾಯಿಸಿದ್ದಾರೆ.