ಕೂಡಿಗೆ, ಫೆ. 4: ಕೂಡಿಗೆ ಗ್ರಾಮ ಪಂಚಾಯಿತಿಯ ಮಾಸಿಕ ಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಬ್ಯಾಡಗೊಟ್ಟ ಗ್ರಾಮದಲ್ಲಿ ಈಗಾಗಲೇ ದಿಡ್ಡಳ್ಳಿಯ ನಿರಾಶ್ರಿತರಿಗೆ ಜಾಗ ನೀಡಿದ್ದು ಅವರಿಗೆ ಪುನರ್ವಸತಿ ಕಾಮಗಾರಿ ನಡೆಯುತ್ತಿದ್ದು, ಈ ಕಾಮಗಾರಿ ನಡೆಯುವ ಸಂದರ್ಭ ರಾಜ್ಯದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಬ್ಯಾಡಗೊಟ್ಟಕ್ಕೆ ಭೇಟಿ ನೀಡಿದ ಸಂದರ್ಭ ಕೂಡಿಗೆ ಗ್ರಾಮ ಪಂಚಾಯಿತಿಗೆ ಸರ್ವೇ ನಂ. 11 ರ ಒಂದೂವರೆ ಎಕರೆ ಜಾಗವನ್ನು ಮಂಜೂರು ಮಾಡಲು ಸೂಚಿಸಿದ ಮೇರೆಗೆ ಜಾಗವು ಮಂಜೂರಾಗಿ ತಾಲೂಕು ಕಾರ್ಯನಿರ್ವಹಣಾಧಿಕಾರಿಯವರ ಹೆಸರಿನಲ್ಲಿದೆ. ಆದರೆ, ದಿಡ್ಡಳ್ಳಿ ನಿರಾಶ್ರಿತರಿಗೆ ಮನೆ ನಿರ್ಮಾಣ ಮಾಡಲು ಜಾಗ ಗುರುತಿಸುವ ಸಂದರ್ಭ ಗ್ರಾಮ ಪಂಚಾಯಿತಿಗೆ ಮಂಜೂರಾಗಿದ್ದ ಅರ್ಧ ಎಕರೆ ಜಾಗದಲ್ಲಿಯೂ ಈಗಾಗಲೇ ಮನೆಗಳು ನಿರ್ಮಾಣವಾಗಿದೆ. ಆದ್ದರಿಂದ ಸ್ಥಳೀಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಸತಿ ರಹಿತರು ಇರುವದರಿಂದ ಸ್ಥಳೀಯರಿಗೆ ಆದÀ್ಯತೆ ನೀಡಲು ಸ್ಥಳವನ್ನು ಕ್ರಮಬದ್ಧವಾಗಿ ಗುರುತಿಸಿಕೊಡಬೇಕೆಂದು ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆಯುವ ಬಗ್ಗೆ ಸಭೆಯಲ್ಲಿ ಸದಸ್ಯರು ಒಕ್ಕೊರಲಿನ ತೀರ್ಮಾನ ಕೈಗೊಂಡರು. ಈ ವಿಷಯಕ್ಕೆ ಸಂಬಂಧಪಟ್ಟಂತೆ ತಾ. 8 ರಂದು ಬ್ಯಾಡಗೊಟ್ಟದಲ್ಲಿ ಪ್ರತಿಭಟನೆಗೆ ತೀರ್ಮಾನ ಕೈಗೊಂಡಿದ್ದು, ಈಗಾಗಲೇ ವಸತಿ ರಹಿತರಿಗೆ ಮಂಜೂರಾಗಿರುವ ಮನೆಗಳ ಕಾಮಗಾರಿಯನ್ನು ಕೈಗೊಳ್ಳುವದರ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಈ ಸಂದರ್ಭ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪ್ರೇಮಲೀಲಾ ಮಾತನಾಡಿ, ಸದಸ್ಯರ ಅಭಿಪ್ರಾಯಗಳನ್ನು ಪಡೆದು ಹಂತ ಹಂತವಾಗಿ ವಾರ್ಡಿನ ಸಮಸ್ಯೆಯನ್ನು ಪರಿಹರಿಸುವದು, ಮುಂಬರುವ ದಿನಗಳಲ್ಲಿ ಕುಡಿಯುವ ನೀರು ಮತ್ತು ಶುಚಿತ್ವಕ್ಕೆ ಹೆಚ್ಚಿನ ಆಧ್ಯತೆ ನೀಡಲಾಗುವದು. ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ವಿವಿಧ ಕಾಮಗಾರಿಯನ್ನು ಕೈಗೊಳ್ಳಲಾಗುವದು. ಗ್ರಾಮ ವಿಕಾಸ ಯೋಜನೆಯಲ್ಲಿ ನಮ್ಮ ಗ್ರಾಮ ಪಂಚಾಯ್ತಿ ಆಯ್ಕೆಗೊಂಡಿರುವದರಿಂದ ತಾ. 15ರಂದು ವಿಶೇಷ ಗ್ರಾಮ ಸಭೆಯನ್ನು ಕರೆದು ಗ್ರಾಮ ವ್ಯಾಪ್ತಿಯ ಕಾಮಗಾರಿಗಳ ಕ್ರಿಯಾಯೋಜನೆಯ ಬಗ್ಗೆ ಚರ್ಚಿಸಿ ಅನುಮೋದನೆ ಪಡೆಯಲು ಸಭೆ ನಡೆಸಲಾಗುವದು ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸ್ವಾಮಿನಾಯಕ್ ಸಭೆಗೆ ಸೌಭಾಗ್ಯ ಯೋಜನೆಯ ಬಗ್ಗೆ ಕ್ರಿಯಾಯೋಜನೆ, ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಉಪಾಧ್ಯಕ್ಷ ಗಿರೀಶ್ ಸೇರಿದಂತೆ ಸದಸ್ಯರುಗಳಾದ ಕೆ.ಟಿ. ಈರಯ್ಯ, ಟಿ.ಕೆ. ವಿಶ್ವನಾಥ್, ಕೆ.ವೈ. ರವಿ, ಹೆಚ್.ಎಸ್. ರವಿ, ರಾಮಚಂದ್ರ, ಮಂಜಯ್ಯ, ಮೋಹಿನಿ, ಕಲ್ಪನ, ಪುಷ್ಪ, ದಸ್ವಿ, ರತ್ನಮ್ಮ, ಜಯಶ್ರಿ ಇದ್ದರು. ಕೆ.ಸಿ. ರವಿ ಸ್ವಾಗತಿಸಿ, ವಂದಿಸಿದರು.