ಮಡಿಕೇರಿ, ಫೆ. 4: ಸರ್ಕಾರ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳನ್ನು ಬಳಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳುವತ್ತ ಗಮನ ಹರಿಸಬೇಕಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಸುಂದರ್‍ರಾಜ್ ಸಲಹೆ ಮಾಡಿದ್ದಾರೆ. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಅರ್ಥಶಾಸ್ತ್ರ ವಿಭಾಗ ಸಹಕಾರದಲ್ಲಿ ಸರ್ಕಾರದ ಹಲವು ಜನಪರ ಯೋಜನೆಗಳ ಕುರಿತು ಬುಧವಾರ ನಡೆದ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸರ್ಕಾರ ಹಲವು ಯೋಜನೆಗಳನ್ನು ನೀಡುವದು, ಬಡವರು ಆರ್ಥಿಕವಾಗಿ ಸದೃಢರಾಗಿ ಇತರರಂತೆ ಬದುಕು ಕಟ್ಟಿಕೊಳ್ಳಬೇಕೆಂಬದು ಆಶಯವಾಗಿದೆ. ಅದನ್ನು ಸಮರ್ಪಕವಾಗಿ ಬಳಸಿ ಕೊಳ್ಳಬೇಕು ಎಂದರು. ವಿದ್ಯಾರ್ಥಿ ಜೀವನದಲ್ಲಿ ಯುವ ಜನರು ಸಕಾರಾತ್ಮಕವಾಗಿ ಯೋಚನೆ ಮಾಡಬೇಕು. ಓದಿನ ಕಡೆ ಹೆಚ್ಚಿನ ಆಸಕ್ತಿ ವಹಿಸಬೇಕು, ಮನಸ್ಸಿನ ಮೇಲೆ ಹಿಡಿತವಿರಬೇಕು ಎಂದು ಹೇಳಿದರು. ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ. ಕೆ.ಸಿ. ದಯಾನಂದ ಮಾತನಾಡಿ, ಸರ್ಕಾರ ಅನ್ನಭಾಗ್ಯ, ಕ್ಷೀರಭಾಗ್ಯ, ಮನಸ್ವಿನಿ, ವಿದ್ಯಾಸಿರಿ, ಕೃಷಿಭಾಗ್ಯ ಸಾಲಮನ್ನಾ, ರಾಜೀವ್ ಆರೋಗ್ಯ ಭಾಗ್ಯ, ಇಂದಿರಾ ಕ್ಯಾಂಟೀನ್ ಹೀಗೆ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ ಎಂದರು. “ಸಾಮಾಜಿಕ ಭದ್ರತೆ ಯೋಜನೆ ಅನುಷ್ಠಾನದಲ್ಲಿ ಇಡೀ ದೇಶದಲ್ಲಿಯೇ ರಾಜ್ಯ ಪ್ರಥಮ ಸ್ಥಾನದಲ್ಲಿದೆ ಎಂಬದನ್ನು ಮರೆಯುವಂತಿಲ್ಲ ಎಂದು ಹೇಳಿದರು. ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕ ಸಿದ್ಧರಾಜು ಮಾತನಾಡಿ, ಸರ್ಕಾರ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಘೋಷ ವಾಕ್ಯ ದಂತೆ ಸಮಾಜದ ಎಲ್ಲಾ ಬಡವರಿಗೂ ಹಲವು ಸೌಲಭ್ಯಗಳನ್ನು ಕಲ್ಪಿಸುತ್ತಿದೆ ಎಂದು ಹೇಳಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಚಿತ್ರ್ರಾ ಮಾತನಾಡಿದರು. ದ್ವಿತೀಯ ಬಿ.ಎ. ವಿದ್ಯಾರ್ಥಿ ಕವನ್ ಮಾತನಾಡಿ, ಕ್ಷೀರಭಾಗ್ಯ ಜಾರಿಗೆ ತಂದಿರುವದರಿಂದ ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಸಹಕಾರಿಯಾಗಿದೆ. ವಿದ್ಯಾಸಿರಿ ಯೋಜನೆ ಹಾಸ್ಟೆಲ್ ಇಲ್ಲದವರಿಗೆ ಅನುಕೂಲವಾಗಿದೆ. ಶೂ ಭಾಗ್ಯ ಯೋಜನೆಯಿಂದ ಎಲ್ಲ ಬಡ ವಿದ್ಯಾರ್ಥಿಗಳು ಶಾಲಾ ಹಂತದಲ್ಲಿ ಶೂ ಧರಿಸಲು ಅನುಕೂಲವಾಗಿದೆ ಎಂದು ಹೇಳಿದರು. ಲಿಖಿತ, ಸುಭಾಷ್, ತುಳಸಿ, ಕೌಸರ್, ಸರ್ಕಾರದ ಹಲವು ಕಾರ್ಯಕ್ರಮಗಳ ಕುರಿತು ಮಾತನಾಡಿದರು. ಸರ್ಕಾರದ ಕಾರ್ಯಕ್ರಮ ಬಗ್ಗೆ ಉತ್ತಮ ಮಾಹಿತಿ ನೀಡಿದ ಕವನ್ ಅವರಿಗೆ ನಗದು ಬಹುಮಾನ ನೀಡಲಾಯಿತು. ವಾರ್ತಾಧಿಕಾರಿ ಚಿನ್ನಸ್ವಾಮಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾವಿದ ಇ. ರಾಜು ಮತ್ತು ತಂಡದವರು ಸರ್ಕಾರದ ಹಲವು ಯೋಜನೆಗಳ ಕಾರ್ಯಕ್ರಮ ಕುರಿತು ಗೀತಾ ಗಾಯನ ಮೂಲಕ ಗಮನ ಸೆಳೆದರು.