ಮಡಿಕೇರಿ, ಫೆ. 4: ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಪಕ್ಷವನ್ನು ಬೂತ್ ಮಟ್ಟದಿಂದ ಸಶಕ್ತÀವಾಗಿ ರೂಪಿಸುವ ಉದ್ದೇಶಗಳ ಹಿನ್ನೆಲೆಯಲ್ಲಿ ತಾ. 7 ರಂದು ವೀರಾಜಪೇಟೆ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಬೂತ್ ಅಧ್ಯಕ್ಷರು, ಏಜೆಂಟರು ಮತ್ತು ವಲಯ ಅಧ್ಯಕ್ಷರಿಗೆ ನಮ್ಮ ಬೂತ್- ನಮ್ಮ ಹೊಣೆ ಎನ್ನುವ ವಿಶೇಷ ಕಾರ್ಯಾಗಾರ ವೀರಾಜಪೇಟೆಯಲ್ಲಿ ನಡೆಯಲಿದೆ ಎಂದು ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್. ರಮಾನಾಥ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಾಗಾರದ ಕುರಿತು ಮಾಹಿತಿ ನೀಡಿದರು. ಅಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವೀರಾಜಪೇಟೆಯ ಕಾವೇರಿ ಕಲ್ಯಾಣ ಮಂಟಪದಲ್ಲಿ ಕಾರ್ಯಾಗಾರ ನಡೆಯಲಿದ್ದು, ಇದರಲ್ಲಿ ಎಐಸಿಸಿ ಕಾರ್ಯದರ್ಶಿ ಪಿ.ಸಿ. ವಿಷ್ಣುನಾಥ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುಸೈನ್, ಎಂಎಲ್‍ಸಿ ವೀಣಾ ಅಚ್ಚಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ, ಕೆಪಿಸಿಸಿ ಹಿರಿಯ ಪದಾಧಿಕಾರಿಗಳಾದ ಮಿಟ್ಟು ಚಂಗಪ್ಪ, ಸಿ.ಎಸ್. ಅರುಣ್ ಮಾಚಯ್ಯ, ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು, ವಿವಿಧ ಘಟಕಗಳ ಅಧ್ಯಕ್ಷರುಗಳು, ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಕಳೆದ ಐದು ವರ್ಷಗಳ ಅವಧಿಯಲ್ಲಿ ಜಿಲ್ಲೆಯ ಶಾಸಕರುಗಳು ಅಭಿವೃದ್ಧಿಯ ವಿಚಾರಗಳನ್ನು ಬಿಟ್ಟು ಅವಾಸ್ತವಿಕವಾದ ವಿಚಾರಗಳನ್ನು ಮಾತನಾಡುತ್ತಿದ್ದಾರೆ ಎಂದು ರಮಾನಾಥ್ ಆರೋಪಿಸಿದರು.

ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷವನ್ನು ಕ್ಯಾಡರ್ ಆಧಾರಿತ ಪಕ್ಷವನ್ನಾಗಿ ರೂಪಿಸುವ ಪ್ರಯತ್ನವಾಗಿ ಇಂತಹ ಕಾರ್ಯಾಗಾರವನ್ನು ಆಯೋಜಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು. ಈ ಸಾಲಿನ ಕೇಂದ್ರ ಬಜೆಟ್ ಜನರ ನಿರೀಕ್ಷೆಗಳನ್ನು ಹುಸಿ ಮಾಡಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ 50 ಸಾವಿರದ ಒಳಗಿನ ಸಾಲವನ್ನು ಮನ್ನಾ ಮಾಡುವ ಮೂಲಕ ಕೃಷಿಕರ ಸಂಕಷ್ಟ ಪರಿಹಾರಕ್ಕೆ ಮುಂದಾಗಿದ್ದಾರೆ, ಆದರೆ ಕೇಂದ್ರ ಸರಕಾರ ಇಂತಹ ಪ್ರಯತ್ನಗಳನ್ನು ಮಾಡಿಲ್ಲವೆಂದು ಟೀಕಿಸಿದರು.

ಮುಖ್ಯಮಂತ್ರಿಗಳು ಹಾಗೂ ವಿವಿಧ ಬೆಳೆಗಾರ ಸಂಘಟನೆಗಳು ಕೇಂದ್ರ ವಾಣಿಜ್ಯ ಸಚಿವರಿಗೆ ಕರಿಮೆಣಸು ಆಮದಿನ ಗೊಂದಲದ ವಿಷಯವನ್ನು ತಿಳಿಸಿದ ಪರಿಣಾಮ ಕರಿಮೆಣಸು ಆಮದಿನ ಮೇಲೆ ನಿರ್ಬಂಧ ಉಂಟಾಗಿ ಧಾರಣೆಯಲ್ಲಿ ಹೆಚ್ಚಳವಾಯಿತು. ಆದರೆ, ಇದೇ ಹಂತದಲ್ಲಿ ಗುಜರಾತ್ ಸೇರಿದಂತೆ ವಿವಿಧ ಪ್ರದೇಶಗಳ ವರ್ತಕ ಸಮೂಹ ಪ್ರಧಾನಿಗಳನ್ನು ಭೇಟಿಯಾಗಿ ಚರ್ಚಿಸುವ ಮೂಲಕ ಕೆಲವೇ ದಿನಗಳಲ್ಲಿ ಮತ್ತೆ ಕರಿಮೆಣಸಿನ ಧಾರಣೆ ಕುಸಿತಕ್ಕೆ ಒಳಗಾಯಿತು. ಇದರಿಂದ ಕೇಂದ್ರ ಸರ್ಕಾರ ರೈತರ ಪರವಾಗಿಲ್ಲ, ಬದಲಾಗಿ ವ್ಯಾಪಾರಸ್ಥರ ಪರವಾಗಿದೆ ಎನ್ನುವದು ಸಾಬೀತಾಗಿದೆ ಎಂದು ಧರ್ಮಜ ಉತ್ತಪ್ಪ ಆರೋಪಿಸಿದರು.

ವೀರಾಜಪೇಟೆ ಬ್ಲಾಕ್ ಅಧ್ಯಕ್ಷ ಆರ್.ಕೆ.ಸಲಾಂ ಮಾತನಾಡಿ, ವೀರಾಜಪೇಟೆಯ 223 ಬೂತ್, 89 ವಲಯ, ನಾಪೋಕ್ಲುವಿನ 79 ಬೂತ್, 18 ವಲಯ, ಪೊನ್ನಂಪೇಟೆಯ 93 ಬೂತ್, 21 ವಲಯದ ಅಧ್ಯಕ್ಷರು, ಬೂತ್ ಏಜೆಂಟರು ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.