ಸೋಮವಾರಪೇಟೆ, ಫೆ. 4: ಅಕ್ರಮ-ಸಕ್ರಮದಡಿ ನಮೂನೆ 50 ಮತ್ತು 53 ರಲ್ಲಿ ಅರ್ಜಿ ಸಲ್ಲಿಸಿದ ರೈತ ಫಲಾನುಭವಿಗಳಿಗೆ ಶೀಘ್ರ ಭೂ ಮಂಜೂರಾತಿಗೆ ಅಕ್ರಮ ಸಕ್ರಮ-ಸಮಿತಿ ಕ್ರಮ ಕೈಗೊಳ್ಳಬೇಕೆಂದು ಭೂ ಹಕ್ಕುದಾರರ ವೇದಿಕೆಯ ಜಿಲ್ಲಾಧ್ಯಕ್ಷ ಎಸ್.ಕೆ. ಪುಟ್ಟಸ್ವಾಮಿ ಒತ್ತಾಯಿಸಿದ್ದಾರೆ.

ಅನೇಕ ವರ್ಷಗಳಿಂದ ಬಡ ರೈತರು ಜಮೀನು ಸಾಗುವಳಿ ಮಾಡಿಕೊಂಡಿದ್ದರೂ, ಹಕ್ಕುಪತ್ರಗಳಿಲ್ಲದೆ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದರು. ಇಂತಹ ರೈತರಿಗೆ ಹಕ್ಕುಪತ್ರಗಳನ್ನು ನೀಡಲು ಸರ್ಕಾರ ಕ್ರಮ ಕೈಗೊಂಡಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಲು ಬಹತೇಕ ರೈತರಿಗೆ ಸಾಧ್ಯವಾಗುತ್ತಿಲ್ಲ. ಕೆಲ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕರ್ತವ್ಯ ಲೋಪದಿಂದ ರೈತರು ಸಂಕಷ್ಟದಲ್ಲಿದ್ದಾರೆ. ರೈತರಿಗೆ ಸರಿಯಾದ ಮಾಹಿತಿ ನೀಡದೆ ವಂಚಿಸುತ್ತಿದ್ದಾರೆ ಎಂದು ಪುಟ್ಟಸ್ವಾಮಿ ದೂರಿದ್ದಾರೆ. ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದು ಅಕ್ರಮ-ಸಕ್ರಮ ಸಮಿತಿಯವರು ತಮ್ಮ ಅಧಿಕಾರಿವನ್ನು ಚಲಾಯಿಸಿ ವಾರಕ್ಕೆರಡು ಸಭೆಗಳನ್ನು ಕರೆದು ಹಕ್ಕುಪತ್ರಗಳನ್ನು ವಿತರಿಸಬೇಕು ಎಂದು ಒತ್ತಾಯಿಸಿರುವ ಅವರು, 94ಸಿ ನಮೂನೆ 53ರ ಅರ್ಜಿ ವಿಲೇವಾರಿಯಲ್ಲಿ ಇಲಾಖಾ ಮಟ್ಟದಲ್ಲಿ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿರುವ ಬಗ್ಗೆ ದೂರುಗಳಿದ್ದು, ಹಣಕ್ಕಾಗಿ ಪೀಡಿಸುತ್ತಿರುವ ಸಿಬ್ಬಂದಿಗಳ ವಿರುದ್ಧ ಫಲಾನುಭವಿಗಳು ಮೇಲಧಿಕಾರಿಗಳಿಗೆ ದೂರು ನೀಡಬೇಕು ಎಂದು ಮನವಿ ಮಾಡಿದ್ದಾರೆ.