ಮಡಿಕೇರಿ, ಫೆ. 5: ಇಲ್ಲಿನ ಮಲ್ಲಿಕಾರ್ಜುನ ನಗರದ ಶ್ರೀ ಕೋದಂಡರಾಮ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ಇಂದು ಚಾಲನೆ ನೀಡಲಾಯಿತು. ದೇವಾಲಯ ಜೀರ್ಣೋದ್ಧಾರ ಸಮಿತಿ, ಶ್ರೀ ರಾಮ ಸೇವಾ ಸಮಿತಿ, ವಿಶ್ವಸ್ತ ಮಂಡಳಿ ಹಾಗೂ ಜ್ಯೋತಿ ಯುವಕ ಸಂಘದ ಪದಾಧಿಕಾರಿಗಳು ಸೇರಿದಂತೆ ಅಲ್ಲಿನ ನಿವಾಸಿಗಳು ಪಾಲ್ಗೊಂಡಿದ್ದರು.ಐತಿಹಾಸಿಕ ಶ್ರೀ ರಾಮ ದೇವಾಲಯವನ್ನು ಅಂದಾಜು ರೂ. 2 ಕೋಟಿ ವೆಚ್ಚದಲ್ಲಿ ಪ್ರಾರಂಭಿಕ ಜೀರ್ಣೋದ್ಧಾರಕ್ಕೆ ಸಂಕಲ್ಪದೊಂದಿಗೆ ಈಗಾಗಲೇ ಶ್ರೀರಾಮ ಪರಿವಾರ ಮತ್ತು ಬಲಮುರಿ ಗಣಪತಿಯನ್ನು ಬಾಲಾಲಯಕ್ಕೆ ಸ್ಥಳಾಂತರಿಸಲಾಗಿದೆ. ಇಂದು ವಿಶೇಷ ಪ್ರಾರ್ಥನೆ, ಪೂಜೆಯ ಬಳಿಕ ಹಳೆಯ ಕಟ್ಟಡ ತೆರವಿಗೆ ಚಾಲನೆ ನೀಡಲಾಯಿತು.ಶ್ರೀ ಕೋದಂಡರಾಮ ದೇವಾಲಯ ಸಮಿತಿ ಅಧ್ಯಕ್ಷರಾದ ‘ಶಕ್ತಿ’ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯ ಕೆ.ಎಂ. ಗಣೇಶ್, ಹಿರಿಯರಾದ ಬಾಲುಚಂದ್ರ ಉಳ್ಳಾಗಡ್ಡಿ, ಸುಕುಮಾರ್, ಲೀಲಾ ಶೇಷಮ್ಮ, ನಂಜುಂಡ, ಕುಶಾಲ್, ತಿಮ್ಮಯ್ಯ, ಭರತ್, ಜಗದೀಶ್, ಮಂಜುನಾಥ ಮೊದಲಾದವರು ಅರ್ಚಕ ನರಸಿಂಹಮೂರ್ತಿ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಐತಿಹಾಸಿಕವಾಗಿ ನಡೆದು ಬಂದಿರುವ
(ಮೊದಲ ಪುಟದಿಂದ) ದೇವಾಲಯವನ್ನು ಎಲ್ಲರೂ ಒಗ್ಗೂಡಿ ಅಭಿವೃದ್ಧಿ ಗೊಳಿಸುವ ದಿಸೆಯಲ್ಲಿ ಸಮಾಲೋಚನೆ ಬಳಿಕ ಹಳೆಯ ಕಟ್ಟಡ ತೆರವಿಗೆ ಚಾಲನೆ ನೀಡಲಾಯಿತು. ಸಮಾಜದ ಎಲ್ಲಾ ವರ್ಗದವರು ಒಗ್ಗೂಡಿ, ಸದ್ಭಕ್ತರು, ದಾನಿಗಳ ನೆರವಿನಿಂದ ಶ್ರೀರಾಮ ಪರಿವಾರ ಸಹಿತ, ಮಹಾಗಣಪತಿ, ಲಕ್ಷ್ಮೀ, ನವಗ್ರಹ ಸನ್ನಧಿಯ ಅಭಿವೃದ್ಧಿಗೆ ಸಂಕಲ್ಪ ಕೈಗೊಳ್ಳಲಾಯಿತು. ಜಾತಿ ಭಾವನೆ ಮರೆತು ಭಕ್ತಿಯ ಪ್ರತೀಕವಾಗಿ ಮಂದಿರ ಜೀರ್ಣೋದ್ಧಾರಕ್ಕೆ ಎಲ್ಲರೂ ಕೈ ಜೋಡಿಸಬೇಕೆಂದು ಕೆ.ಎಂ. ಗಣೇಶ್, ಜಿ. ರಾಜೇಂದ್ರ, ಬಾಬುಚಂದ್ರ ಉಳ್ಳಾಗಡ್ಡಿ ಮೊದಲಾದವರು ಈ ಸಂದರ್ಭ ನಿವೇದಿಸಿಕೊಂಡರು.
ಅಭಿವೃದ್ಧಿ ಸಂದರ್ಭ ಸಣ್ಣ ಪುಟ್ಟ ಗೊಂದಲಗಳು ಎದುರಾದರೂ ಎಲ್ಲವನ್ನು ಪರಸ್ಪರ ಸಮಾಲೋಚಿಸಿ ಸೌಹಾರ್ದತೆಯಿಂದ ಬಗೆಹರಿಸಿಕೊಂಡು ಭಗವಂತನ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಸಾಮೂಹಿಕ ತೀರ್ಮಾನ ಕೈಗೊಳ್ಳಲಾಯಿತು.