*ಗೋಣಿಕೊಪ್ಪಲು, ಫೆ. 5: ಅರುವತ್ತೊಕ್ಲು ಗ್ರಾ.ಪಂ. ವ್ಯಾಪ್ತಿಯ ಹಳ್ಳಿಗಟ್ಟು ಸೀತಾ ಕಾಲೋನಿ ಗುಡಿಸಲು ನಿವಾಸಿಗಳಿಗೆ ಕಾಯ್ದಿರಿಸಿದ ಹಾತೂರು ಗ್ರಾ.ಪಂ. ವ್ಯಾಪ್ತಿಯ ಕುಂದಾ ಗ್ರಾಮದ ಸರ್ಕಾರಿ ಜಾಗದಲ್ಲಿ 116 ಮನೆಗಳ ನಿರ್ಮಾಣಕ್ಕೆ ಶಾಸಕ ಕೆ.ಜಿ. ಬೋಪಯ್ಯ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ ನೂತನವಾಗಿ ನಿರ್ಮಾಣಗೊಳ್ಳುವ ಈ ಕಾಲೋನಿಯಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ, ರಸ್ತೆ, ವಿದ್ಯುತ್ ಸಂಪರ್ಕ ವ್ಯವಸ್ಥೆಗಳನ್ನು ಕಲ್ಪಿಸಿ ಕೊಡಲಾಗುವದು. ಮನೆ ನಿರ್ಮಾಣದ ನಂತರ ತಮ್ಮ ಜೀವನದ ಹೊಸ ಅಧ್ಯಾಯ ಪ್ರಾರಂಭವಾಗಲಿದೆ. ದುಶ್ಚಟಗಳಾದ ಮದ್ಯ ಸೇವನೆಯನ್ನು ಬಿಟ್ಟು ಉತ್ತಮ ಜೀವನ ನಡೆಸಬೇಕು ಎಂದು ಕಿವಿ ಮಾತು ಹೇಳಿದರು.
116 ಮನೆಗಳಿಗೆ ಹಕ್ಕು ಪತ್ರ ನೀಡಲಾಗಿದ್ದು, ತಲಾ ಒಂದು ಮನೆ 2 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ. ಐ.ಟಿ.ಡಿ.ಪಿ. ಇಲಾಖೆಯ ವತಿಯಿಂದ ಅತೀ ಶೀಘ್ರದಲ್ಲಿ ಮನೆ ನಿರ್ಮಾಣ ಕಾರ್ಯ ನಡೆಯಲಿದೆ ಎಂದರು. ವಸತಿ ರಹಿತರಿಗೆ ವಸತಿ ಕಲ್ಪಿಸಿದ ಸಲುವಾಗಿ ಫಲಾನುಭವಿಗಳು
(ಮೊದಲ ಪುಟದಿಂದ) ಹರ್ಷಚಿತ್ತರಾಗಿ ಶಾಸಕರನ್ನು ತಮ್ಮ ಸಾಂಪ್ರಾದಾಯಿಕ ಚೀನಿ ದುಡಿಯೊಂದಿಗೆ ಸ್ವಾಗತ ಕೋರಿ ಉದ್ಘಾಟನಾ ಸಮಾರಂಭಕ್ಕೆ ಮೆರವಣಿಗೆ ಮೂಲಕ ಬರಮಾಡಿಕೊಂಡರು.
ಈ ಸಂದರ್ಭ ಅರುವತ್ತೊಕ್ಲು ಗ್ರಾ.ಪಂ. ಅಧ್ಯಕ್ಷ ತೀತಮಾಡ ಸುಗುಣ ಸೋಮಯ್ಯ, ಜಿ.ಪಂ. ಸದಸ್ಯೆ ಅಪ್ಪಂಡೇರಂಡ ಭವ್ಯ, ತಾ.ಪಂ. ಉಪಾಧ್ಯಕ್ಷ ನೆಲ್ಲೀರ ಚಲನ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಚಂದ್ರಶೇಖರ್, ಎ.ಡಬ್ಲ್ಯೂ ಪೂಣಚ್ಚ , ಹಾತೂರು ಗ್ರಾ.ಪಂ ಸದಸ್ಯೆ ಜಯಂತಿ, ಫೆಡರೇಷನ್ ನಿರ್ದೇಶಕ ಮಧು ದೇವಯ್ಯ, ಬುಡಕಟ್ಟು ಜನರ ಹೋರಾಟಗಾರರ ಸಮಿತಿ ಸಂಚಾಲಕ ಗಪ್ಪು, ಗುತ್ತಿಗೆದಾರ ರಾಜಪ್ಪ ಮತ್ತು ಸುರೇಶ್, ಫಲಾನುಭವಿಗಳು ಹಾಜರಿದ್ದರು.