ಮಡಿಕೇರಿ, ಫೆ. 4: ಕೊಡಗು ಜಿಲ್ಲಾ ಕುಲಾಲ(ಕುಂಬಾರ)ರ ಸಂಘದ ಜಿಲ್ಲಾಮಟ್ಟದ ಪ್ರಥಮ ಸಂತೋಷಕೂಟ ಇತ್ತೀಚೆಗೆ ಮಡಿಕೇರಿಯಲ್ಲಿ ನಡೆಯಿತು.

ಕುಲ ಬಾಂಧವರು ಬೆಳಿಗ್ಗೆ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸುವದರೊಂದಿಗೆ ಆರಂಭಗೊಂಡ ನಂತರ ದೇವಾಲಯದಿಂದ ಎಂ.ಎಂ. ವೃತ್ತ, ತಿಮ್ಮಯ್ಯ ವೃತ್ತಕ್ಕಾಗಿ ಪೆನ್ಷನ್ ಲೇನ್‍ನಲ್ಲಿರುವ ಬೆಳ್ಯಪ್ಪ ಮೆಮೋರಿಯಲ್ ಹಾಲ್‍ವರೆಗೆ ಮೆರವಣಿಗೆ ಸಾಗಿತು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷ ಎಂ.ಡಿ. ನಾಣಯ್ಯ, ಸೋಮವಾರಪೇಟೆಯ ಜನಾಂಗದ ಪ್ರಮುಖರಾದ ಕೃಷ್ಣಶೆಟ್ಟಿ, ಕುಶಾಲನಗರದ ರಾಮಚಂದ್ರ ಕೊಪ್ಪ, ಜಿಲ್ಲಾ ಸಂಘದ ಕಾರ್ಯಕಾರಿ ಮಂಡಳಿಯವರು, ನಿರ್ದೇಶಕರು, ಜಿಲ್ಲೆಯ ವಿವಿಧೆಡೆ ಹಾಗೂ ನೆರೆಯ ಪಿರಿಯಾಪಟ್ಟಣ ತಾಲೂಕು ಅಧ್ಯಕ್ಷರು ಸೇರಿದಂತೆ ಹಲವರು ಭಾಗವಹಿಸಿದ್ದರು.

ಸಭಾ ಕಾರ್ಯಕ್ರಮದ ನಂತರ ಜನಾಂಗದ ಮಕ್ಕಳಿಂದ ವಿವಿಧ ಕಲಾ ಪ್ರತಿಭೆಗಳಿಂದ ನೃತ್ಯ ವೈವಿಧ್ಯಗಳು, ಹಾಡುಗಳು, ಸಾಂಸ್ಕøತಿಕ ಚಟುವಟಿಕೆಗಳ ಪ್ರದರ್ಶನ ನಡೆಯಿತು. ಬಳಿಕ ಬಹುಮಾನ ನೀಡಲಾಯಿತು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಮನು ಬೇತ್ರಿ, ದೇವಯ್ಯ, ಮಾಯಿಲಪ್ಪ ಉತ್ತಯ್ಯ, ಕೆ.ಹೆಚ್. ಶೀಲಾವತಿ, ಕೃಷ್ಣಶೆಟ್ಟಿ, ರಾಮಚಂದ್ರ, ಸುರೇಶ್, ಮಂಜು, ಕುಮಾರ್ ಸೇರಿದಂತೆ ಇತರರು ಇದ್ದರು. ಕಾರ್ಯಕ್ರಮವನ್ನು ಮಂಜುನಾಥ್ ನಿರೂಪಿಸಿ, ಚಂದ್ರ ಮೂರ್ನಾಡು ಸ್ವಾಗತಿಸಿ, ವಿ.ಜಿ. ಲೋಕೇಶ್ ವಂದಿಸಿದರು.