ಸುಂಟಿಕೊಪ್ಪ, ಫೆ. 5: ಇಲ್ಲಿನ ಗ್ರಾಮ ಪಂಚಾಯಿತಿಯು ಗ್ರೇಡ್1 ಗ್ರಾಮ ಪಂಚಾಯಿತಿಯಾಗಿದ್ದು, ಇಲ್ಲಿನ ಕೆಲವು ಸದಸ್ಯರ ಗೈರು ಹಾಜರಿಯಿಂದ ಸಾರ್ವಜನಿಕ ಕೆಲಸಗಳಿಗೆ ತೊಂದರೆಯಾಗುತ್ತಿದ್ದು, ಅಂತಹ ಸದಸ್ಯರನ್ನು ವಜಾಗೊಳಿಸಿ ಕ್ರಮ ಕೈಗೊಳ್ಳಬೇಕು ಎಂದು ಇಲ್ಲಿನ ಗ್ರಾಮಸ್ಥರು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
ಇಲ್ಲಿನ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 20 ಸದಸ್ಯರಿದ್ದು, ಇದರಲ್ಲಿ ಕಾಂಗ್ರೆಸ್ ಪ್ರತಿನಿಧಿಗಳೇ ಅಧಿಕಾರದ ಚುಕ್ಕಾಣಿಯಲ್ಲಿದ್ದಾರೆ. ಆದರೆ ಅಧಿಕಾರದಲ್ಲಿರುವ ಕಾಂಗ್ರೆಸ್‍ನ ಸದಸ್ಯರೇ ಸಾಮಾನ್ಯ ಸಭೆಗಳಿಗೆ ಗೈರು ಹಾಜರಾಗಿ ಪಂಚಾಯಿತಿ ಅಭಿವೃದ್ಧಿ ಕಾರ್ಯಗಳಿಗೆÉ ಅಡ್ಡಿಯಾಗುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಸರ್ಕಾರದ ಆದೇಶದಂತೆ ನಿರಂತರವಾಗಿ ಮೂರು ಸಭೆಗಳಿಗೆ ಹಾಜರಾಗದವರನ್ನು ಸದಸ್ಯ ಸ್ಥಾನದಿಂದ ವಜಾಗೊಳಿಸಲು ಅವಕಾಶವಿದೆ. ಆದರಿಂದ ಆಡಳಿತ ಪಕ್ಷದ ಕೆಲವು ಸದಸ್ಯರು ಮೂರನೇ ಸಭೆಗೆ ಹಾಜರಾಗಿ ಸಭೆಯು ನಡೆಯುವದಕ್ಕೂ ಮುನ್ನವೇ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿ ತೆರಳುತ್ತಿರುವ ಸಂಗತಿಯನ್ನು ಖಂಡಿಸಲಾಗಿದೆ.
ಅಲ್ಲದೆ, ಸುಂಟಿಕೊಪ್ಪದ ಸಾರ್ವಜನಿಕರ ಹಿತಾಸಕ್ತಿಗಳನ್ನು ಕಾಪಾಡದ ಮತ್ತು ಪಂಚಾಯಿತಿ ಅಧೀನದ ಅಭಿವೃದ್ಧಿ ಕಾರ್ಯಗಳನ್ನು ಸುಸೂತ್ರವಾಗಿ ನಡೆಸಲು ಹಿಂದೇಟು ಹಾಕಿ ಗೈರು ಹಾಜರಾಗುತ್ತಿರುವ ಸದಸ್ಯರನ್ನು ಸೂಪರ್ ಸೀಡ್ ಜಾರಿಗೊಳಿಸಿ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.