ಮಡಿಕೇರಿ, ಫೆ. 4: ಕೊಡಗಿನ ಪ್ರವಾಸಿ ತಾಣಗಳನ್ನು ಇಲ್ಲಿಗೆ ಬರುವ ಮಂದಿ ನಿರುಪಯುಕ್ತ ವಸ್ತುಗಳನ್ನು ಎಸೆದು ಮಲೀನಗೊಳಿಸದಂತೆ, ನಮ್ಮ ಕೊಡಗು ಉಳಿಸಿ ಆಂದೋಲನ ದೊಂದಿಗೆ ಇಂದು ಜಾಗೃತಿ ಓಟ ಹಮ್ಮಿಕೊಳ್ಳಲಾಗಿತ್ತು. ವೀರಾಜಪೇಟೆ ತಾಲೂಕಿನ ಕಡಂಗ ಮರೂರುವಿನಿಂದ ತಡಿಯಂಡಮೋಳ್ ಶಿಖರ ತನಕ ಜಾಗೃತ ಕಾರ್ಯಕ್ರಮ ನಡೆದಿದ್ದು, ಮೆರಥಾನ್ ಓಟಗಾರ ಪಾಡೆಯಂಡ ನಾಣಯ್ಯ ನೇತೃತ್ವದಲ್ಲಿ ಯುವ ಜನತೆ ಪಾಲ್ಗೊಂಡಿದ್ದರು. ವೀರಾಜಪೇಟೆ ಕೊಡವ ಸಮಾಜದ ಹಿರಿಯ ಮುಖಂಡ ನಾಯಡ ವಾಸು ನಂಜಪ್ಪ ಹಾಗೂ ಹಿರಿಯ ಓಟಗಾರ ಪೆಮ್ಮಂಡ ಅಪ್ಪಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಜಾಗೃತಿ ಓಟದಲ್ಲಿ ಎಂಟು ಮಂದಿಯೊಂದಿಗೆ, 7 ಮಂದಿ ಸೈಕಲ್ ಸಾಹಸಿಗಳು, 14 ಮಂದಿ ಹವ್ಯಾಸಿ ಚಾರಣದವರು ಪಾಲ್ಗೊಂಡು ತಡಿಯಂಡಮೋಳ್ ಶಿಖರದಲ್ಲಿ ಪ್ರವಾಸಿಗಳು ಎಸೆದಿದ್ದ ಪ್ಲಾಸ್ಟಿಕ್ ಇತ್ಯಾದಿ ಹೆಕ್ಕುವ ಮೂಲಕ ಚೀಲಗಳಲ್ಲಿ ತುಂಬಿ ಪರಿಸರ ಮಡಿಲನ್ನು ಶುಭ್ರಗೊಳಿಸಿದರು. ಸುಮಾರು 17 ಕಿ.ಮೀ. ಒಮ್ಮುಖವಾಗಿ ಕ್ರಮಿಸುವ ಮೂಲಕ, ಒಟ್ಟು 35 ಕಿ.ಮೀ. ಅಂತರದಲ್ಲಿ ಯುವ ಜನಾಂಗ ಜಾಗೃತಿ ಮೂಡಿಸಿದ್ದಾಗಿ ಸಂಘಟಕ ನಾಣಯ್ಯ ‘ಶಕ್ತಿ’ಯೊಂದಿಗೆ ತಿಳಿಸಿದರು.