ಕೂಡಿಗೆ, ಫೆ. 5 : ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದ ಸರ್ವೇ ನಂ.10, 11, 12 ರಲ್ಲಿ 25 ಎಕರೆ ಪ್ರದೇಶವನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ನಿವೇಶನ ರಹಿತರಿಗೆ ನಿವೇಶನ ನೀಡಲು ಮಂಜೂರು ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಜಿಲ್ಲಾಧಿಕಾರಿಗಳು 1.5 ಎಕರೆ ನಿವೇಶನಕ್ಕಾಗಿ ಮತ್ತು ಅರ್ಧ ಎಕರೆ ಕಸ ವಿಲೇವಾರಿಗೆ, ಅರ್ಧ ಎಕರೆ ಸ್ಮಶಾನದ ಉದ್ದೇಶಕ್ಕೆ ಜಾಗವನ್ನು ಮಂಜೂರು ಮಾಡಿದ್ದು, ತಾಲೂಕು ಕಾರ್ಯನಿರ್ವಹಣಾಧಿಕಾರಿಗಳ ಹೆಸರಿನಲ್ಲಿ ಆರ್.ಟಿ.ಸಿ. ನೋಂದಾವಣೆಗೊಂಡಿದೆ ಎಂದು ಕೂಡಿಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪ್ರೇಮಲೀಲಾ ತಿಳಿಸಿದರು.

ಕೂಡಿಗೆ ಗ್ರಾಮ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 31-7-2017ರಲ್ಲಿ ಸೋಮವಾರಪೇಟೆ ತಹಶೀಲ್ದಾರರಿಗೆ ಈ ಎಲ್ಲಾ ಜಾಗಗಳಿಗೆ ಸರ್ವೇ ಮಾಡಿ ಹದ್ದುಬಸ್ತು ಗುರುತಿಸಿಕೊಡುವಂತೆ ಕೂಡಿಗೆ ಗ್ರಾಮ ಪಂಚಾಯ್ತಿ ಸಭೆ ನಡೆಸಿ ಸರ್ವಾನುಮತದ ನಿರ್ಣಯ ವನ್ನು ಕೈಗೊಳ್ಳಲಾಯಿತು. ಅದರಂತೆ ಜಾಗವನ್ನು ಸರ್ವೇ ನಡೆಸಿ ಗುರುತಿಸಿ, ನಕಾಶೆಯನ್ನು ತಯಾರಿಸಲಾಗಿತ್ತು. ಮಂಜೂರಾದ ಜಾಗದಲ್ಲಿಯೇ ದಿಡ್ಡಳ್ಳಿ ನಿರಾಶ್ರಿತರಿಗೆ ಜಿಲ್ಲಾಧಿಕಾರಿಯವರ ಆದೇಶದಂತೆ ಮನೆಗಳ ನಿರ್ಮಾಣ ಕಾರ್ಯ ನಡೆದಿದೆ. ಆದರೆ 15 ಮನೆಗಳನ್ನು ಅತಿಕ್ರಮಣ ಮಾಡಿ ಮನೆ ನಿರ್ಮಿಸಿರುವ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿದ ನಮಗೆ ತಿಳಿದುಬಂದಿದೆ. ಅತಿಕ್ರಮಣ ಮಾಡಿಕೊಂಡಿರುವ ಜಾಗವನ್ನು ಬಿಡಿಸಿಕೊಡುವಂತೆಯೂ, ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಳೆದ 25 ವರ್ಷಗಳಿಂದ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವ ನಿವೇಶನ ರಹಿತರಿಗೆ ನಿವೇಶನಗಳನ್ನು ನೀಡುವದರ ಬದಲಾಗಿ ಸರ್ಕಾರ ದಿಡ್ಡಳ್ಳಿ ನಿರಾಶ್ರಿತರಿಗೆ ಅವಕಾಶ ಕಲ್ಪಿಸಿದೆ ಎಂದರು.

ನಿಗಧಿಪಡಿಸಿ ಸರ್ವೇ ಮಾಡಿಕೊಟ್ಟ ಜಾಗದಲ್ಲಿಯೇ ಅತಿಕ್ರಮವಾಗಿ ಕಟ್ಟಡಗಳನ್ನು ನಿರ್ಮಾಣ ಮಾಡಿರುವದಲ್ಲದೆ ಗ್ರಾಮ ಪಂಚಾಯ್ತಿಯ ಯಾವದೇ ಮನವಿಗೆ ಸರ್ಕಾರ ಸ್ಪಂದಿಸಿಲ್ಲ. ಗ್ರಾಮ ಪಂಚಾಯ್ತಿ ವ್ಯಾಪ್ತಿಯ 191 ನಿವೇಶನ ರಹಿತರು ಸರಿಯಾದ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದ್ದು, ಅವರಿಗೆ ಆದÀ್ಯತೆಯ ಮೇಲೆ ನಿವೇಶನಗಳನ್ನು ಮಂಜೂರು ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ತಾ. 8ರಂದು ಬ್ಯಾಡಗೊಟ್ಟ ದಿಡ್ಡಳ್ಳಿ ನಿರಾಶ್ರಿತರ ತಾಣದಲ್ಲಿ ನಿವೇಶನ ರಹಿತ ಸಾರ್ವಜನಿಕರೊಂದಿಗೆ ಗ್ರಾಮ ಪಂಚಾಯ್ತಿಯ ಜನಪ್ರತಿನಿಧಿಗಳು ಧರಣಿ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ನಮ್ಮ ಬೇಡಿಕೆ ಈಡೇರಿಸುವವರೆಗೆ ಅನಿರ್ದಿಷ್ಟಾವಧಿಯವರೆಗೆ ಧರಣಿ ನಡೆಸಲಾಗುವದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಗ್ರಾಮ ಪಂಚಾಯ್ತಿಯ ಸದಸ್ಯರಾದ ಕೆ.ವೈ. ರವಿ, ಈರಯ್ಯ, ಮೋಹಿನಿ, ರಾಮಚಂದ್ರ, ರತ್ನಮ್ಮ, ಜಯಶ್ರೀ, ಕಲ್ಪನ, ವಿಶ್ವನಾಥ್, ಮಂಜು, ದಸ್ವಿ, ಪುಷ್ಪ, ಚಂದ್ರಿಕಾ ಇದ್ದರು.