ಮಡಿಕೇರಿ, ಫೆ. 5: ಎಂದಿನಂತೆ ಬೆಟ್ಟದಲ್ಲಿ ಮೇಯಲು ಬಿಟ್ಟಿದ್ದ ದನಗಳ ಪೈಕಿ ಸಂಜೆಗತ್ತಲೆ ನಡುವೆ ಪುಟ್ಟಕರು ಸೀತೆಯ ತಾಯಿ ಹಸು ‘ಗೌರಿ’ ಕೊಟ್ಟಿಗೆಗೆ ಇನ್ನೂ ಬರಲಿಲ್ಲ ಎಂದುಕೊಂಡು ಗ್ರಾಮದ ರೈತ ಹುಡುಕುತ್ತಾ ಹೊರಟರು. ಬೆಟ್ಟ ಶ್ರೇಣಿಗಳ ನಡುವೆ ಕಾಡುಮೇಡು ಅಲೆದು ಸುಸ್ತಾಗಿ ರಾತ್ರಿ ಮನೆಗೆ ಹಿಂತಿರುಗುತ್ತಾ, ಮತ್ತೊಮ್ಮೆ ಕೊಟ್ಟಿಗೆಯಲ್ಲಿ ನೋಡಿದರು. ಆಗಲೂ ಹಸು ಗೌರಿ ಬಂದಿರಲಿಲ್ಲ. ಇತ್ತ ಪುಟ್ಟ ಕರು ಬಾರದೆ ಕೂಗುವದನ್ನು ಸಹಿಸಲಾಗದೆ ಆತಂಕ ಹೆಚ್ಚತೊಡಗಿತ್ತು.
ಮನೆಯೊಳಗೆ ಹೊಕ್ಕಾಗ ತೀರಾ ಸುಸ್ತಾಗಿದ್ದರೂ ಸುಧಾರಿಸಿಕೊಂಡು ಊಟ ಮಾಡಿದರಾದರೂ ಆ ರೈತನ ಗಂಟಲಿನಿಂದ ಅನ್ನ ಹೊಟ್ಟೆಯೊಳಗೆ ಇಳಿಯಲೇ ಇಲ್ಲ. ಯಾವತ್ತೂ ಕಾಡಿನಲ್ಲಿ ಉಳಿಯದ ಹಸು ಇಂದೇಕೆ ಈ ಹೊತ್ತಾದರೂ ಕೊಟ್ಟಿಗೆಗೆ ಬಂದಿಲ್ಲ? ಎಲ್ಲಿಯಾದರೂ ಅಪಾಯಕ್ಕೆ ಸಿಲುಕಿಕೊಂಡಿತೆ? ಯಾವದಕ್ಕೂ ಮತ್ತೊಮ್ಮೆ ಹುಡುಕುವೆ ಎಂದು ಗಟ್ಟಿ ಮನಸ್ಸು ಮಾಡಿದರು.
ಧೈರ್ಯಕ್ಕೆ ಕೋವಿಯನ್ನು ಹಾಗೂ ಕೈಗೊಂದು ಕತ್ತಿಯನ್ನು ಹಿಡಿದು ಆ ರೈತ ಟಾರ್ಚು ಸಹಿತ ಬೆಟ್ಟದತ್ತ ಹೊರಟಿದ್ದರು. ಸಾಕಷ್ಟು ದೂರ ಕ್ರಮಿಸುವಷ್ಟರಲ್ಲಿ ಬೆಟ್ಟ ಶ್ರೇಣಿಯ ಚಳಿಗಾಳಿಯ ನಡುವೆ ಏನೋ ಒಂದು ರೀತಿಯ ವಾಸನೆ ಮೂಗಿಗೆ ಬಡಿದಂತಾಯಿತು. ರೈತ ತಾನು ಹೆಜ್ಜೆ ಹಾಕುತ್ತಿದ್ದ ದಿಕ್ಕಿನಲ್ಲಿ ಸರಿಯಾಗಿ ಟಾರ್ಚ್ ಬೆಳಕು ಮುಂದಕ್ಕೆ ತೋರುತ್ತಾ ಎದುರುಗಡೆ ನೋಟವನ್ನು ಹರಿಸಿದರು.
ಮನೆಯಿಂದ ಗೌರಿಯನ್ನು ಹುಡುಕುತ್ತಾ ಆ ಹೊತ್ತಿಗೆ ಮೂರ್ನಾಲ್ಕು ಕಿ.ಮೀ. ದಾಟಿ ಬಂದಿರುವ ಅನುಭವದೊಂದಿಗೆ ಮನಸ್ಸಿನೊಳಗೆ ಒಂದು ರೀತಿಯ ಭಯ ಆವರಿಸಿದರೂ, ಹಸು ಕಾಣದೆ ದುಗುಡವೂ ಹೆಚ್ಚಿತ್ತು. ಅದೇ ಗುಂಗಿನಲ್ಲಿ ಮನದ ತೊಳಲಾಟದೊಂದಿಗೆ ಮತ್ತೆ ಧೈರ್ಯ ತಂದುಕೊಂಡ ರೈತ ಮುಂದೆ ಹೆಜ್ಜೆ ಇಡುತ್ತಿದ್ದಂತೆಯೇ ಕೇವಲ ನಾಲ್ಕೈದು ಅಡಿಯಷ್ಟೇ ಅಂತರದಲ್ಲಿ ಹುಲಿಯೊಂದು ಮಲಗಿದಂತೆ ಭಾಸವಾಯಿತು. ಆದರೂ ತನ್ನ ಕಣ್ಣುಗಳನ್ನೇ ನಂಬದಾದ ಅವರು ಸರಿಯಾಗಿ ಅತ್ತ ದೃಷ್ಟಿ ಹರಿಸಿದರು. ಕೈ-ಕಾಲು ನಡುಗಲಾರಂಭಿಸಿತು. ಜೀವ ಬಾಯಿಗೆ ಬಂದಂತಾಗಿ ಮಾತೂ ಹೊರಡದೆ ತುಟಿ ಕಂಪಿಸತೊಡಗಿತು. ಆ ಮಧ್ಯರಾತ್ರಿಯ ಬೆಟ್ಟ ಶ್ರೇಣಿಯ ಚಳಿಯಲ್ಲೂ ನಡುಗುತ್ತಿದ್ದ ಶರೀರ ಬೆವರಳಿಯತೊಡಗಿತು!
ರೈತ ನಿಂತ ನೆಲದಲ್ಲಿ ನೋಡ ನೋಡುತ್ತಿದ್ದಂತೆಯೇ ಕ್ಷಣಮಾತ್ರದಲ್ಲಿ ಆ ಹುಲಿ ಒಮ್ಮೆಲೆ ಮಲಗಿದ್ದ ಜಾಗದಿಂದ ಎದ್ದು ರೈತನಿಗೆ ವಿರುದ್ಧ ದಿಕ್ಕಿನಲ್ಲಿ ಕಾಡಿನತ್ತ ನೆಗೆಯಿತು. ಹೋದ ಜೀವ ಬಂದಂತಾದ ರೈತ ಗೌರಿಯನ್ನು ಹುಡುಕುವ ಧೈರ್ಯ ಮಾಡದೆ ಕ್ಷಣಮಾತ್ರದಲ್ಲಿ ಹಿಂತಿರುಗಿ ಶರವೇಗದಲ್ಲಿ ಬಂದಾಗ ಮನೆಯೊಳಗೆ ತಲಪಿದ್ದಷ್ಟೇ ಗೊತ್ತಾಯಿತು. ಪುಟ್ಟಕರು ಆಗಲೂ ತಾಯಿಗಾಗಿ ವೇದನೆ ಪಡುತ್ತಿದ್ದದ್ದು ಕೇಳಲಾಗಿ ತನ್ನ ಬಾಲ್ಯದ ಹಾಡು ‘ಧರಣಿ ಮಂಡಲ ಮಧ್ಯದೊಳಗೆ’ ಮನದೊಳಗೆ ಸುಳಿದಾಡಿತು.
ಭಾರವಾದ ಮನಸ್ಸಿನೊಂದಿಗೆ ಮಧ್ಯರಾತ್ರಿ ಗಂಟೆ 1 ಕಳೆದಿತ್ತು. ಕಂಬಳಿ ಹೊದ್ದು ಮಲಗಿದರೂ ನಿದ್ದೆ ಬರಲಿಲ್ಲ. ಹಾಗೂ ಹೀಗೂ ಹೊರಳುತ್ತಾ ಕಾಲ ಕಳೆಯುವಷ್ಟರಲ್ಲಿ ಬೆಳಕಾಯಿತು. ಬೆಳಗ್ಗಿನ ಸೂರ್ಯ ಉದಯಿಸುವ ಮುನ್ನ ನಡುರಾತ್ರಿಯಲ್ಲಿ ಹುಲಿ ನೋಡಿದ್ದ ಸ್ಥಳ ತಲಪಿದ್ದರು. ಅಲ್ಲಿ ಹುಲಿಯ ಹಿಕ್ಕೆ (ಮಲ) ಕೂಡ ಕಾಣಿಸಿತು. ಅನತಿ ದೂರದಲ್ಲಿ ಆ ಹುಲಿ ಗೌರಿಯನ್ನು ಕೊಂದು ತಿಂದಿದ್ದ ಕಳೇಬರವು ಗೋಚರಿಸಿತು. ಮಧ್ಯರಾತ್ರಿ ತನ್ನ ಗೌರಿಯನ್ನು ಹುಲಿ ಕೊಂದು ತಿಂದು ಮಲಗಿದ್ದನ್ನು ಖಾತರಿಪಡಿಸಿಕೊಂಡ ರೈತ ಗೌರಿಯ ಅಗಲಿಕೆಯ ಕಣ್ಣೀರಿನೊಂದಿಗೆ ಪುಟ್ಟ ಕರು ಸೀತೆಯನ್ನು ಸಲಹುವ ಆಲೋಚನೆಗಳ ಗುಂಗಿನಲ್ಲಿ ಬಲವಂತದ ಹೆಜ್ಜೆಗಳೊಂದಿಗೆ ರೈತ ಮನೆಯತ್ತ ಹಿಂತಿರುಗಿದರು. ಪುಣ್ಯ ಕೋಟಿಯಂತೆ ಗೌರಿಯನ್ನು ಕೊಂದು ತಿಂದ ಹುಲಿಗೆ ಇದೇನಾ ಕಲಿಯುಗದಲ್ಲಿ ಪಾಪಪುಣ್ಯದ ಅರಿವಿದ್ದಂತೆ ಇರಲಿಲ್ಲ ಎಂದೆನಿಸಿತು ಆ ಮನಸ್ಸು.