ಸೋಮವಾರಪೇಟೆ, ಫೆ. 4: ಇಲ್ಲಿನ ಕಕ್ಕೆಹೊಳೆ ಬಳಿಯಿರುವ ಶ್ರೀ ಮುತ್ತಪ್ಪ ಸ್ವಾಮಿ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮಾ. 12, 13 ರಂದು ವಾರ್ಷಿಕ ಜಾತ್ರೋತ್ಸವ ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಎನ್.ಡಿ. ವಿನೋದ್ ತಿಳಿಸಿದ್ದಾರೆ.
ಮಾ. 12 ರಂದು ಬೆಳಗ್ಗಿನ ಜಾವ ಗಣಪತಿ ಹೋಮ, ಜಾತ್ರೋತ್ಸವದ ಧ್ವಜಾರೋಹಣ ನೆರವೇರಲಿದೆ. ಬೆಳಿಗ್ಗೆ 10 ಗಂಟೆಯಿಂದ 11.30 ರವರೆಗೆ ಜೀರ್ಣೋದ್ಧಾರಗೊಂಡ ನಾಗ ಸನ್ನಿಧಿಯಲ್ಲಿ ಕೇರಳದ ಕೊಳಪರಂ ಮನೆತನದ ಕೃಷ್ಣಕುಮಾರ ತಂತ್ರಿಗಳ ಪೌರೋಹಿತ್ಯದಲ್ಲಿ ನಾಗದೈವಗಳ ಪ್ರತಿಷ್ಠಾಪನಾ ಕಾರ್ಯ ನಡೆಯಲಿದೆ.
ನೂತನವಾಗಿ ತಯಾರಿಸಿರುವ ಮುತ್ತಪ್ಪ ಸ್ವಾಮಿಯ ಕಿರೀಟ ಅರ್ಪಣೆ ನಡೆಯಲಿದೆ. ನಂತರದಲ್ಲಿ ಭುವನೇಶ್ವರಿ ಗುಡಿಯ ಮುಂಭಾಗದಲ್ಲಿ ನಿರ್ಮಾಣವಾಗಿರುವ ಮುಖಮಂಟಪದ ಉದ್ಘಾಟನೆಯಾಗಲಿದೆ. ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಸಂತರ್ಪಣಾ ಕಾರ್ಯ ನಡೆಯಲಿದೆ.
ಇದರೊಂದಿಗೆ ಮುತ್ತಪ್ಪ ದೈವದ ಪಯಂಗುತ್ತಿ ಪೂಜೆ, ಮೊದಲ್ ಕಳಸ ಸ್ಥಾಪನೆ ನಡೆದು, ಸಂಜೆ ಕಳಸದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಚಂಡೆ ವಾದ್ಯದೊಂದಿಗೆ ಸಾಗಿ ಬರಲಿದೆ. ಸಂಜೆ ದೇವಾಲಯದಲ್ಲಿ ಮುತ್ತಪ್ಪ, ತಿರುವಪ್ಪ, ವಿಷ್ಣುಮೂರ್ತಿ, ಭಗವತಿ, ಕಂಡಕರ್ಣ, ಕರಿಂಗುಟ್ಟಿ ಶಾಸ್ತಾವು, ಪೊಟ್ಟನ್, ಗುಳಿಗನ್ ದೈವಗಳ ವೆಳ್ಳಾಟಂಗಳು ನಡೆಯಲಿದೆ. ರಾತ್ರಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ, ಮಧ್ಯರಾತ್ರಿ ದೇವರ ಕಳಿಕ್ಕಾಪಾಟ್ ನಡೆಯಲಿದೆ.
ಮಾ. 13ರ ಬೆಳಗ್ಗಿನ ಜಾವ 1 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಮುತ್ತಪ್ಪ, ತಿರುವಪ್ಪ, ವಿಷ್ಣುಮೂರ್ತಿ, ಭಗವತಿ, ಕಂಡಕರ್ಣ, ಕರಿಂಗುಟ್ಟಿ ಶಾಸ್ತಾವು, ಪೊಟ್ಟನ್, ಗುಳಿಗನ್ ದೈವಗಳ ಕೋಲಗಳು ನಡೆಯಲಿದೆ ಎಂದು ವಿನೋದ್ ತಿಳಿಸಿದ್ದಾರೆ.