ಮೂರ್ನಾಡು, ಫೆ. 4: ಹೊದ್ದೂರು-ವಾಟೆಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದಶಮಾನೋತ್ಸವ ಸಮಾರಂಭ ವಿಜೃಂಭಣೆಯಿಂದ ಜರುಗಿತು.
ಶಾಲಾ ಸಭಾಂಗಣದಲ್ಲಿ ಆಯೋಜಿಸಲಾದ ಸಮಾರಂಭವನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಮುರುಳಿ ಕರುಂಬಮ್ಮಯ್ಯ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಈ ಶಾಲೆ ಉತ್ತಮ ಪರಿಸರದಲ್ಲಿ ನಿರ್ಮಾಣವಾಗಿದ್ದು, ವಿದ್ಯಾರ್ಥಿಗಳು ಅಡೆತಡೆಗಳಿಲ್ಲದೆ ಶಿಕ್ಷಣ ಪಡೆಯಲು ಸೂಕ್ತವಾದ ಸ್ಥಳವಾಗಿದೆ. ವಿದ್ಯಾರ್ಥಿಗಳಿಗೆ ಇಂದು ಗುಣಮಟ್ಟದ ಶಿಕ್ಷಣ ಅವಶ್ಯಕವಾಗಿದೆ. ಶಿಕ್ಷಕರ ನಿರಂತರ ಶ್ರಮದಿಂದ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳುತ್ತಾರೆ. ಶಿಕ್ಷಕರೊಂದಿಗೆ ಪೋಷಕರು ಒಗ್ಗೂಡಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಗಮನ ಹರಿಸಬೇಕು ಎಂದು ಕರೆನೀಡಿದರು.
ಮಡಿಕೇರಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಶಾಲೆ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿ ಶಾಲೆಯ ಅಗತ್ಯತೆಗಳಿಗೆ ನಿರಂತರವಾಗಿ ಸ್ಪಂದಿಸುವದಾಗಿ ಭರವಸೆ ನೀಡಿದರು.
ಶಾಲಾ ಎಸ್ಡಿಎಂಸಿ ಅಧ್ಯಕ್ಷ ಹೆಚ್.ಎಸ್. ಸತೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚ್ಚನ ದಿನೇಶ್, ಸದಸ್ಯ ವಾಂಚೀರ ಅಜೇಯ್, ಮೂರ್ನಾಡು ಕೇಂದ್ರ ಸಮೂಹ ಸಂಪನ್ಮೂಲ ವ್ಯಕ್ತಿ ಎ.ಡಿ. ಮೀನಾಕ್ಷಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕಿ ದಮಯಂತಿ, ಶಾಲಾ ಎಸ್ಡಿಎಂಸಿ ಗೌರವ ಸದಸ್ಯ ವಿ.ಎಂ. ಸುಬ್ರಮಣಿ ಹಾಗೂ ಸದಸ್ಯರು ಹಾಜರಿದ್ದರು.
ಈ ಸಂದರ್ಭ ಶಾಲಾ ಎಸ್ಡಿಎಂಸಿ ಮಾಜಿ ಅಧ್ಯಕ್ಷ ಫೀರ್ ಸಾಹೇಬ್ ಅವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು. ದಶಮಾನೋತ್ಸವ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳು ಸಾಮೂಹಿಕ ಕವಾಯತ್ತು ಪ್ರದರ್ಶಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು.
ಶಾಲಾ ಶಿಕ್ಷಕಿ ಬಿ.ಜಿ. ಸೌಮ್ಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ. ಡಬ್ಲೂ.ಎಂ. ವೇದಪ್ರಸಾದ್ ವಂದಿಸಿದರು.