ಗೋಣಿಕೊಪ್ಪ, ಫೆ. 5: ದೇವರಪುರ ಹಾಡಿ.., ಈ ಹೆಸರಿನಲ್ಲೇ ದೇವರಿದ್ದಾನೆ. ಆದರೆ ಇಲ್ಲಿನ ನಿವಾಸಿಗಳ ಪರಿಸ್ಥಿತಿ ಗಮನಿಸಿದರೆ, ‘ದೇವರೆ ಇವರನ್ನು ಕಾಪಾಡಬೇಕು’ ಎಂದನಿಸದಿರದು.

ಹೌದು ಇಲ್ಲಿ ವಾಸಿಸುತ್ತಿರುವ ಹಾಡಿ ಮಂದಿ ಎಲ್ಲಾ ಬಗೆಯ ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಇಲ್ಲಿ ವಾಸಿಸುತ್ತಿರುವ 150 ಕುಟುಂಬ ಶೌಚಾಲಯಕ್ಕಾಗಿ ಕಾಡನ್ನೆ ಅವಲಂಭಿಸಿ ಬದುಕುತ್ತಿದ್ದಾರೆ. ಕುಡಿಯುವ ನೀರಿಗಾಗಿ ಏಕೈಕ ತೆರೆದ ಬಾವಿಯನ್ನೇ ನಂಬಿದ್ದಾರೆ. ತೆರೆದ ಬಾವಿಯ ನೀರನ್ನು ಕುಡಿಯಲಾರದ ಪರಿಸ್ಥಿತಿ ಇದ್ದರೂ ಬೇರೆ ದಾರಿಯಿಲ್ಲದೆ ಅದೇ ನೀರನ್ನು ಕುಡಿದು ದಾಹ ನೀಗಿಸಿಕೊಳ್ಳಬೇಕಾದ ಅನಿವಾರ್ಯತೆ ಇವರದ್ದಾಗಿದೆ.

ಸಂಕೇತ್ ಭೇಟಿ: ದೇವರಪುರ ಹಾಡಿಗೆ ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಭೇಟಿ ನೀಡಿದ್ದರು. ಈ ಸಂದರ್ಭ ಮಾತನಾಡಿದ ಅವರು, ದೇವರಪುರ ಹಾಡಿಯ ಸಮಸ್ಯೆಗೆ ನಿರಂತರ ಹೋರಾಟವನ್ನು ಈಗಾಗಲೇ ಮಾಡಿದ್ದರೂ ಹೋರಾಟದ ಫಲ ದೊರೆತ್ತಿಲ್ಲ. ಅಧಿಕಾರಿಗಳ ಇಚ್ಚಾ ಶಕ್ತಿ ಕೊರತೆಯಿಂದ ಬಡವರಿಗೆ ನ್ಯಾಯ ಸಿಕ್ಕಿಲ್ಲ. ಇಲ್ಲಿನ ಸಮಸ್ಯೆಗಳಿಗೆ ತಾರ್ಕಿಕ ಅಂತ್ಯ ಹಾಡಲು ನ್ಯಾಯಾಲಯದ ಮೆಟ್ಟಿಲೇರಬೇಕಾಗಿದೆ.ಜೊತೆಯಲ್ಲಿ ಹೋರಾಟವು ಕೂಡ ನಡೆಯಬೇಕಾಗಿದೆ. ಮುಂದಿನ ದಿನಗಳಲ್ಲಿ ಅಗತ್ಯ ದಾಖಲಾತಿ ಗಳೊಂದಿಗೆ ಉತ್ತಮ ವಕೀಲರನ್ನು ಗುರುತು ಮಾಡಿ ನ್ಯಾಯಾಂಗ ಹೋರಾಟ ನಡೆಸುವದಾಗಿ ಹೇಳಿದರು.

ಬಡವರ ಸಂಕಷ್ಟಗಳನ್ನು ಆಲಿಸುವವರೆ ಇಲ್ಲದಂತಾಗಿದೆ. ಹೋರಾಟದಿಂದ ನ್ಯಾಯಾ ಸಿಗುವ ಭರವಸೆ ಇದೆ. ಮುಂದೆ ನಿರಂತರ ಹೋರಾಟವನ್ನು ಕೈಗೆತ್ತಿಕೊಳ್ಳ ಲಾಗುವದು. ನ್ಯಾಯಾಲಯದ ಮೆಟ್ಟಿಲೇರಿ ಮೂಲಭೂತ ಸೌಕರ್ಯ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಿದ್ದೇವೆ ಎಂದು ದಲಿತ ಸಂಘರ್ಷ ಸಮಿತಿ ಸಂಚಾಲಕ ಪರಶುರಾಮ್ ತಿಳಿಸಿದರು. ಗ್ರಾ.ಪಂ. ಸದಸ್ಯೆ ರಾಣಿ ಮಾತನಾಡಿ, ಗ್ರಾಮ ಪಂಚಾಯ್ತಿಯಿಂದ ನಾನು ಚುನಾಯಿತಳಾದರೂ ಹಾಡಿ ಜನತೆಯ ಸಮಸ್ಯೆಗೆ ಸ್ಪಂದನೆಯಾಗುತ್ತಿಲ್ಲ ಎಂಬ ನೋವು ನನ್ನನ್ನು ಕಾಡುತ್ತಿದೆ. ಹಾಡಿಯಲ್ಲಿ ವಿದ್ಯುತ್ ಸೌಕರ್ಯ ವಿಲ್ಲದೇ ಮಕ್ಕಳು ವಿದ್ಯಾಭ್ಯಾಸ ಮುಂದುವರೆಸಲು ಸಾಧ್ಯವಾಗದೇ ಶಾಲೆಯನ್ನು ಅರ್ಧದಲ್ಲೇ ನಿಲ್ಲಿಸಿದ್ದಾರೆ. ಕೂಲಿಗಾಗಿ ತೆರಳುತ್ತಿದ್ದಾರೆ ಎಂದು ವಿಷಾದಿಸಿದರು.