ಆಲೂರುಸಿದ್ದಾಪುರ/ಒಡೆಯನಪುರ, ಫೆ. 5: ‘ಪ್ರತಿಯೊಬ್ಬರೂ ಧಾರ್ಮಿಕ, ಆದ್ಯಾತ್ಮಿಕ ಚಿಂತನೆಯ ತಳಹದಿಯಲ್ಲಿ ಬದುಕು ನಡೆಸಿದರೆ ಜೀವನದಲ್ಲಿ ಸಾರ್ಥಕತೆ ಯನ್ನು ಕಾಣಬಹುದು’ ಎಂದು ಕಿರಿಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ ಅಭಿಪ್ರಾಯಪಟ್ಟರು.
ಕೊಡ್ಲಿಪೇಟೆ ಸಮೀಪದ ಶಿವರಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ಹಾಗೂ ದಾನಿಗಳ ಸಹಕಾರದಿಂದ 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಶ್ರೀ ಬಸವೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಮಹೋತ್ಸವ ಮತ್ತು ಧಾರ್ಮಿಕ ಸಮಾರಂಭದಲ್ಲಿ ಮಾತನಾಡುತ್ತಿದ್ದರು.-ವಿಜ್ಞಾನ ತಂತ್ರಜ್ಞಾನ ಎಷ್ಟೇ ಅಭಿವೃದ್ಧಿ ಹೊಂದಿದ್ದರೂ ಸಹ ಪ್ರತಿಯೊಂದು ಗ್ರಾಮ, ಪಟ್ಟಣ, ನಗರಗಳಲ್ಲಿ ಧಾರ್ಮಿಕ ಕೇಂದ್ರಗಳ ಅವಶ್ಯಕತೆ ಇರುತ್ತದೆ, ಗುಡಿ ಗೋಪುರಗಳಂತಹ ಧಾರ್ಮಿಕ ಕೇಂದ್ರಗಳಿಂದ ಪ್ರತಿಯೊಬ್ಬರ ವೈಯುಕ್ತಿಕ ಬದುಕಿನಲ್ಲಿ ಹಾಗೂ ಸಮಾಜದಲ್ಲಿ ಶಾಂತಿ ನೆಮ್ಮದಿಯನ್ನು ಕಾಣಬಹುದಾಗಿದೆ ಎಂದರು. ದೇವರ ಬಗ್ಗೆ ಶ್ರದ್ಧೆ ಭಕ್ತಿಯನ್ನು ಅಳವಡಿಸಿಕೊಂಡರೆ ತನ್ನ ಬದುಕನ್ನು ಹಸನಗೊಳಿಸಲು ಸಾಧ್ಯವಾಗುತ್ತದೆ ಎಂದರು.
ಕೊಡ್ಲಿಪೇಟೆ ಕಲ್ಲುಮಠದ ಮಹಾಂತಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರು ಪ್ರಕೃತಿ, ನೆಲ-ಜಲ ಮುಂತಾದ ಪರಿಸರ ಆಶ್ರಯದಲ್ಲಿ ಜೀವನ ನಡೆಸುತ್ತಾರೆ ಈ ಮೂಲಕ ಗ್ರಾಮಗಳಲ್ಲಿ ದೇವಸ್ಥಾನ, ಧಾರ್ಮಿಕ ಕೇಂದ್ರಗಳನ್ನು ನಿರ್ಮಿಸಿದರೆ ಮಾತ್ರ ನಾವು ಜೀವಿಸಲು ಕಾರಣವಾದ ಪ್ರಕೃತಿಗೆ ಋಣ ತೀರಿಸಲು ಸಾಧ್ಯವಾಗುತ್ತದೆ ಎಂದರು. ಮನುಷ್ಯ ಮತ್ತು ಪ್ರಾಣಿ-ಪಕ್ಷಿಗಳು ಜೀವಿಸಲು ಗಾಳಿ, ಬೆಳಕು, ಮರ, ಗಿಡ, ನದಿ. ಕೊಳ್ಳ ಮುಂತಾದ ಪ್ರಕೃತಿಮಾತೆಯ ಅವಶ್ಯ ಇರುತ್ತದೆ, ಆದರೆ ಇಂದಿನ ಆಧುನಿಕ ಯುಗದ ಮನುಷ್ಯ ಮಾತ್ರ ಮರಗಿಡಗಳನ್ನು ಕಡಿದು ಪ್ರಕೃತಿ ಪರಿಸರವನ್ನು ನಾಶ ಮಾಡುತ್ತಿದ್ದಾನೆ, ಈ ದಿಸೆಯಲ್ಲಿ ನಾವೆಲ್ಲರೂ ದೇಗುಲ, ಧಾರ್ಮಿಕ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಗ್ರಾಮದಲ್ಲಿ ಮರಗಿಡಗಳನ್ನು ಬೆಳೆಸಿ ಪ್ರಕೃತಿ ಹಾಗೂ ಪರಿಸರಕ್ಕೆ ಕೊಡುಗೆಯನ್ನು ನೀಡಬೇಕೆಂದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್.ಕೆ.ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ದೇವಸ್ಥಾನ ನಿರ್ಮಾಣದ ಕುರಿತು ಡಿ.ಎಲ್. ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ತಾ.ಪಂ.ಅಧ್ಯಕ್ಷೆ ಪುಷ್ಪ ರಾಜೇಶ್, ದೇವಸ್ಥಾನ ಸಮಿತಿಯ ಪದಾಧಿಕಾರಿಗಳು, ದಾನಿಗಳು, ಬ್ಯಾಡಗೊಟ್ಟ ಗ್ರಾ.ಪಂ.ಸದಸ್ಯರುಗಳು ಹಾಜರಿದ್ದರು.
ಶ್ರೀ ಬಸವೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ಸೋಮವಾರ ಮುಂಜಾನೆ 4.45 ರಿಂದ ದೇವಸ್ಥಾನದಲ್ಲಿ ವಿಶೇಷ ಪೂಜೆ, ಹೋಮ, ಹವನ, ದೇವರ ಮೂರ್ತಿಯ ಪ್ರತಿಷ್ಠಾಪನೆ ಮುಂತಾದ ಧಾರ್ಮಿಕ ವಿಧಿವಿಧಾನಗಳನ್ನು ಅರ್ಚಕರುಗಳು ನೆರವೇರಿಸಿದರು. ಪ್ರತಿಷ್ಠಾಪನಾ ಮಹೋತ್ಸವದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು. ದೇವಸ್ಥಾನ ಸಮಿತಿಯಿಂದ ಅನ್ನದಾನವನ್ನು ಏರ್ಪಡಿಸಲಾಗಿತು.