ಮಡಿಕೇರಿ, ಫೆ. 4: ಸೂರ್ಲಬ್ಬಿ ನಾಡಿನ ಐತಿಹಾಸಿಕ ಶ್ರೀ ಸುಬ್ರಹ್ಮಣ್ಯ ಹಾಗೂ ಶ್ರೀ ಮಂಜುನಾಥ ದೇವರ ಹಬ್ಬವು ತಾ. 9ರಂದು ವಾರ್ಷಿಕ ಪಟ್ಟಣಿ ಆಚರಣೆಯೊಂದಿಗೆ ಆರಂಭಗೊಳ್ಳಲಿದೆ. ಈ ನಿಟ್ಟಿನಲ್ಲಿ ತಾ. 2ರಂದು ಹಬ್ಬದ ಕಟ್ಟು ಕಟ್ಟಳೆ ಜಾರಿಯೊಂದಿಗೆ, ನಾಡಿನಲ್ಲಿ ಮುಖ್ಯವಾಗಿ ಹಸಿಮರ ಕಡಿಯದಿರುವದು, ಗುಂಡು ಹಾರಿಸದಿರುವದು, ಜೀವ ಸಂಕುಲವನ್ನು ಹಿಂಸಿಸದಿರುವದು ಹಾಗೂ ಕೊಲ್ಲದಿರುವದು ಸೇರಿದಂತೆ ನಿಯಮಗಳನ್ನು ವಿಧಿಸಲಾಗಿದೆ.

ತಾ. 9ರಂದು ಪಟ್ಟಣಿಯೊಂದಿಗೆ ದೇವಾಲಯಕ್ಕೆ ಭಂಡಾರ ತರಲಾಗುತ್ತದೆ. ಅಲ್ಲಿಂದ ನಿತ್ಯ ಬೆಳಗಿನ ಜಾವ ದೇವ ಸನ್ನಿಧಿಯಲ್ಲಿ ದುಡಿಪಾಟ್‍ನೊಂದಿಗೆ ಬೊಳಕಾಟ್, ದೇವರಿಗೆ ಪೂಜೆ ನೆರವೇರಲಿದೆ. ತಾ. 15ರಂದು ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ದೊಡ್ಡ ಹಬ್ಬ, ಎತ್ತು ಪೋರಾಟ, ಬೊಳಕಾಟ್, ಹರಕೆ- ಕಾಣಿಕೆ ಸಲ್ಲಿಕೆಯಾಗಲಿದೆ.

ತಾ. 16ರ ಬೆಳಗಿನ ಜಾವ ದೇವರಿಗೆ ವಾರ್ಷಿಕ ಮಹಾಪೂಜೆ, ಭಕ್ತರಿಂದ ಹರಕೆ, ಮಡೆಸ್ನಾನ (ಉರುಳು ಸೇವೆ) ವಿಶೇಷ ಪೂಜಾಧಿಗಳೊಂದಿಗೆ ತೆಂಗೆಪೋರ್ ಮುಂತಾದ ಕೈಂಕರ್ಯಗಳು ನಡೆಯಲಿದ್ದು, ಆನಂತರ ಭಂಡಾರ ಹೊರಡಲಿದೆ.

ತಾ. 17ರಂದು ಮುಟ್ಲು ಶ್ರೀ ಮಂಜುನಾಥ ದೇವರ ಬನದಲ್ಲಿ ವಾರ್ಷಿಕ ಮಹಾಪೂಜೆಯೊಂದಿಗೆ ದೇವತಾ ಕಾರ್ಯಗಳು ನೆರವೇರಲಿದ್ದು, ಸಂಜೆ ನೆರ್ಪುಮಾನಿ ಮಂದ್‍ನಲ್ಲಿ ಬೊಳಕಾಟ್ ಬಳಿಕ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಮೂಲಕ ದೇವರ ವಾರ್ಷಿಕ ಹಬ್ಬಕ್ಕೆ ತೆರೆಬೀಳಲಿದೆ ಎಂದು ನಾಡಿನ ತಕ್ಕಮುಖ್ಯಸ್ಥರು ತಿಳಿಸಿದ್ದಾರೆ.