ಸಂಕೇತ್ ಪೂವಯ್ಯ

ಸೋಮವಾರಪೇಟೆ, ಫೆ. 4: ಶಾಸಕರು ಮತ್ತು ಸಂಸದರಿಂದ ಕೊಡಗು ಜಿಲ್ಲೆ ಅನಾಥವಾಗಿದೆ ಎಂದು ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಆರೋಪಿಸಿದರು.

ಸಮೀಪದ ಗೌಡಳ್ಳಿ ಶ್ರೀ ನವ ದುರ್ಗಾಪರಮೇಶ್ವರಿ ದೇವಾಲಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತ ನಾಡಿದರು.

ಜಿಲ್ಲೆಗೆ ಸಲ್ಲ ಬೇಕಾದ ಅನುದಾನವನ್ನು ಕೇಂದ್ರ ಹಾಗೂ ರಾಜ್ಯದಿಂದ ತರಲು ಶಾಸಕರುಗಳು ಸೋತಿದ್ದಾರೆ. ಮಾಜಿ ಸಚಿವ ಬಿ.ಎ. ಜೀವಿಜಯ ಶಾಸಕರಾಗಿ, ಮಂತ್ರಿ ಯಾಗಿದ್ದ ಸಂದರ್ಭ ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಮೂಲ ಭೂತ ಸೌಕರ್ಯಗಳನ್ನು ಕಲ್ಪಿಸಿದ್ದಾರೆ. ಹಳ್ಳಿ-ಹಳ್ಳಿಗೂ ಡಾಂಬರು ರಸ್ತೆ ಗಳನ್ನು ಮಾಡಿಸಿದ್ದಾರೆ ಎಂದರು.

ಮಾಜಿ ಸಚಿವ ಬಿ.ಎ. ಜೀವಿಜಯ ಮಾತನಾಡಿ, ಒಕ್ಕೂಟ ವ್ಯವಸ್ಥೆಯ ನೆಪದಲ್ಲಿ ರಾಷ್ಟ್ರೀಯ ಪಕ್ಷಗಳಿಂದ ರಾಜ್ಯಗಳಿಗೆ ಅನ್ಯಾಯ ವಾಗುತ್ತಿದೆ.

ರಾಜ್ಯಕ್ಕೆ ಸಿಗಬೇಕಾದ ಅನುದಾನವನ್ನು ಕೇಂದ್ರ ಸರಕಾರಗಳು ನೀಡದೆ ಅನ್ಯಾಯ ಮಾಡುತ್ತಿದೆ. ಈ ಕಾರಣದಿಂದ ಪ್ರಾದೇಶಿಕ ಪಕ್ಷಗಳು ದೇಶವನ್ನು ಆಳಬೇಕು ಎಂದರು.

ಪಕ್ಷದ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್ ಮಾತನಾಡಿ, ಕೋಮುವಾದದಿಂದ ದೇಶವನ್ನಾಳುವ ಭರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಜನರಿಂದ ದೂರವಾಗುತ್ತಿವೆ. ಬಹುತೇಕ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಮತದಾರರು ಗೆಲುವು ತಂದು ಕೊಡುತ್ತಿದ್ದಾರೆ. ಕರ್ನಾಟಕದಲ್ಲೂ ಜೆಡಿಎಸ್ ಅಧಿಕಾರಕ್ಕೆ ಬರಲಿದೆ ಎಂದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಸಮಿತಿ ಅಧ್ಯಕ್ಷ ಹೆಚ್.ಆರ್. ಸುರೇಶ್, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಡಿಸಿಲ್ವಾ, ತಾ.ಪಂ. ಅಧ್ಯಕ್ಷೆ ಪುಷ್ಪಾ ರಾಜೇಶ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜಾನಕಿ ವೆಂಕಟೇಶ್, ತಾ.ಪಂ. ಸದಸ್ಯೆ ಕುಸುಮಾ ಅಶ್ವಥ್, ಜಿಲ್ಲಾ ವಕ್ತಾರ ಕಾಟ್ನಮನೆ ವಿಠಲ್‍ಗೌಡ, ಜಿ.ಪಂ. ಮಾಜಿ ಅಧ್ಯಕ್ಷೆ ಹೆಚ್.ಬಿ. ಜಯಮ್ಮ, ಗೌಡಳ್ಳಿ ಗ್ರಾ.ಪಂ. ಅಧ್ಯಕ್ಷೆ ಜಿ.ವಿ. ನಾಗರತ್ನ, ದೊಡ್ಡಮಳ್ತೆ ಗ್ರಾ.ಪಂ. ಅಧ್ಯಕ್ಷ ದಿವಾಕರ್ ಮತ್ತಿತರರು ಇದ್ದರು.