ಕೂಡಿಗೆ, ಫೆ. 5: ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬ್ಯಾಡಗೊಟ್ಟ ಹಾಗೂ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿಯಲ್ಲಿರುವ ಆದಿವಾಸಿಗಳ ಪುನರ್ವಸತಿ ಕೇಂದ್ರದಲ್ಲಿ ಈಗಾಗಲೇ ಸರಕಾರದ ಆದೇಶದಂತೆ 528 ಮನೆಗಳು ನಿರ್ಮಾಣದ ಹಂತದಲ್ಲಿದ್ದರೂ ಸಹ ಮರಳು, ಸಿಮೆಂಟ್ ಇಟ್ಟಿಗೆ ಮತ್ತಿತರ ಸಾಮಾಗ್ರಿಗಳ ಕೊರತೆಯಿಂದ ಮಂದಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ.
ಈಗಾಗಲೇ ಮೂರು ತಿಂಗಳ ಅವಧಿಯಲ್ಲಿ 305 ಮನೆಗಳು ಪೂರ್ಣ ಹಂತಕ್ಕೆ ಬಂದಿದ್ದು, 90 ಮನೆಗಳ ತಳಪಾಯ ಕಾಮಗಾರಿ ಆಗಿದ್ದು, 20 ಮನೆಗಳು ಅರ್ಧಗೋಡೆಯ ಕಾಮಗಾರಿ ನಡೆಸಿದ್ದು, ಇನ್ನುಳಿದ 113 ಪೂರ್ಣಗೊಳಿಸಲು ತಾತ್ಕಾಲಿಕ ಶೆಡ್‍ಗಳು ಆ ಸ್ಥಳದಲ್ಲಿರುವದರಿಂದ ಮನೆಗಳ ನಿರ್ಮಾಣ ಯೋಜನೆಯಲ್ಲಿ ಇಲಾಖೆಯವರು ಸಿದ್ಧತೆಯಲ್ಲಿದ್ದಾರೆ.
ಇದೀಗ ಪ್ರಮುಖವಾಗಿ ಕಾಮಗಾರಿ ನಡೆಸಲು ಬೇಕಾಗುವಂತ ಮರಳು, ಸಿಮೆಂಟ್ ಇಟ್ಟಿಗೆಗಳು ಸಕಾಲದಲ್ಲಿ ದೊರೆಯದೆ ಇರುವುದರಿಂದ ಗುತ್ತಿಗೆದಾರರು ಕಾಮಗಾರಿ ನಿರ್ವಹಿಸಲು ಸಿದ್ಧರಿದ್ದರೂ ಇವುಗಳ ಕೊರತೆಯಿಂದ ಕಾಮಗಾರಿಯು ಮಂದಗತಿಯಲ್ಲಿ ನಡೆಯುತ್ತಿದೆ.
ಜಿಲ್ಲಾ ಉಸ್ತುವಾರಿ ಸಚಿವರು ಇತ್ತೀಚೆಗೆ ಬ್ಯಾಡಗೊಟ್ಟ ಮತ್ತು ಬಸವನಹಳ್ಳಿ ಪುನರ್ವಸತಿ ಕೇಂದ್ರಗಳಿಗೆ ಭೇಟಿ ನೀಡಿದ ಸಂದರ್ಭ ಫೆಬ್ರವರಿ ಅಂತ್ಯದೊಳಗೆ ದಿಡ್ಡಳ್ಳಿಯಿಂದ ನಿರಾಶ್ರಿತರಾಗಿ ಬ್ಯಾಡಗೊಟ್ಟ ಮತ್ತು ಬಸವನಹಳ್ಳಿಗೆ ಬಂದಿರುವ 528 ಕುಟುಂಬಗಳಿಗೆ ಮನೆಗಳನ್ನು ನೀಡುವದಾಗಿ ಭರವಸೆ ನೀಡಿದ್ದರು.
ಆದರೆ ಮನೆಯ ಕಾಮಗಾರಿಗಳು ವಿವಿಧ ಹಂತದಲ್ಲಿರುವದರಿಂದ ಅವುಗಳಿಗೆ ಬೇಕಾಗುವ ಸಾಮಾಗ್ರಿಗಳನ್ನು ಒದಗಿಸುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ ಕಾಮಗಾರಿಯನ್ನು ಪೂರ್ಣಗೊಳಿಸಲು ಸಹಕಾರಿಗಳಾಗಬೇಕು ಎಂದು ಆದಿವಾಸಿ ಮುಖಂಡ ಮಲ್ಲಪ್ಪ, ಸ್ವಾಮಿ, ಗಿರಿಜಮ್ಮ, ಭೋಜಿ ಒತ್ತಾಯಿಸಿದ್ದಾರೆ.
ಇದರ ಜೊತೆಯಲ್ಲಿ ಪ್ರಮುಖವಾಗಿ ಬೇಕಾಗಿರುವ 528 ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಿಕೊಟ್ಟರೂ ಅವರಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರಿನ ವ್ಯವಸ್ಥೆ (ಹೈಟ್ಯಾಂಕ್), ಯುಜಿಡಿ ಕಾಮಗಾರಿ ಪ್ರಮುಖವಾಗಿ ಆಗಬೇಕಾಗಿದೆ. ಈಗ ನಿರ್ಮಾಣಗೊಳ್ಳುತ್ತಿರುವ ಮನೆಗಳಿಗೆ ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ. ಆದರೆ, ಶೌಚಾಲಯದ ಗುಂಡಿಯ ವ್ಯವಸ್ಥೆಗಳು ಪ್ರಮುಖವಾಗಿ ಆಗಬೇಕಿದೆ. ಇದಕ್ಕೆ ಸಂಬಂಧಪಟ್ಟಂತೆ ಯುಜಿಡಿ ಕಾಮಗಾರಿಯನ್ನು ಅತೀಶೀಘ್ರವಾಗಿ ಕೈಗೊಂಡು ಮನೆಗಳ ಹಸ್ತಾಂತರ ಮಾಡುವದು ಉತ್ತಮವಾದುದು ಎಂದು ಸ್ಥಳಕ್ಕೆ ತೆರೆಳಿದ ಸುದ್ದಿಗಾರರಿಗೆ ಆದಿವಾಸಿಗಳ ಪ್ರಮುಖರು ತಿಳಿಸಿದ್ದಾರೆ.
ಈಗಾಗಲೇ ಯುಜಿಡಿ ಮತ್ತು ಬೃಹತ್ ನೀರಿನ ಟ್ಯಾಂಕ್ ಕಾಮಗಾರಿಯ ಬಗ್ಗೆ ಸರಕಾರಕ್ಕೆ ಜಿಲ್ಲಾಧಿಕಾರಿಗಳ ಮುಖೇನ ಪ್ರಸ್ತಾವನೆ ನೀಡಲಾಗಿದೆ ಎಂಬ ವಿಚಾರ ತಿಳಿದುಬಂದಿದ್ದು, ಸರಕಾರದಿಂದ ಕಾಮಗಾರಿಗೆ ಅನುಮೋದನೆ ದೊರೆತಲ್ಲಿ ಕಾಮಗಾರಿಯನ್ನು ಅತೀಶೀಘ್ರವಾಗಿ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. -ಕೆ.ಕೆ.ನಾಗರಾಜಶೆಟ್ಟಿ