ಸೋಮವಾರಪೇಟೆ, ಫೆ. 5: ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಳ್ಳಿ ಗ್ರಾಮದಲ್ಲಿ ಕಾಡಾನೆಗಳ ಉಪಟಳ ಮಿತಿ ಮೀರಿದ್ದು, ಕೃಷಿಕರು ಕಷ್ಟಪಟ್ಟು ಬೆಳೆದಿರುವ ಕೃಷಿ ಫಸಲನ್ನು ತಿಂದು ನಷ್ಟಪಡಿಸುತ್ತಿವೆ. ಅತ್ತ ಬೆಲೆಯೂ ಇಲ್ಲದೇ,ಇತ್ತ ಬೆಳೆಯೂ ಇಲ್ಲದೇ ಕೃಷಿಕರು ಕಂಗಾಲಾಗಿದ್ದು, ಅರಣ್ಯ ಇಲಾಖೆಯಿಂದ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.

ನಿನ್ನೆ ತಡರಾತ್ರಿ ಹೊಸಳ್ಳಿ ಗ್ರಾಮದ ಜಗನ್ನಾಥ ಅವರ ಹೊಲಕ್ಕೆ ನುಗ್ಗಿರುವ ಎರಡು ಕಾಡಾನೆಗಳು ಹೊಲದಲ್ಲಿ ಬೆಳೆಯಲಾಗಿದ್ದ ಗೆಣಸು, ಕ್ಯಾನೆ ಗೆಡ್ಡೆ, ಬಾಳೆ ಫಸಲನ್ನು ತಿಂದು-ತುಳಿದು ನಷ್ಟಪಡಿಸಿವೆ. ಒಂದೇ ರಾತ್ರಿ ಸುಮಾರು 10 ಕ್ವಿಂಟಾಲ್‍ನಷ್ಟು ಸಿಹಿಗೆಣಸನ್ನು ನೆಲಸಮಗೊಳಿಸಿದ್ದು, ಸುಮಾರು 30 ಸಾವಿರಕ್ಕೂ ಅಧಿಕ ನಷ್ಟಗೊಳಿಸಿವೆ.

ಈ ಭಾಗಕ್ಕೆ ಆಗಾಗ್ಗೆ ಲಗ್ಗೆಯಿಡುತ್ತಿರುವ ಕಾಡಾನೆಗಳು ಹೊಲದಲ್ಲಿ ಬೆಳೆಯುವ ಕ್ಯಾನೆ, ಬಾಳೆ ಫಸಲನ್ನು ಮನಸೋಯಿಚ್ಚೆ ತಿಂದು ನಾಶಪಡಿಸುತ್ತಿವೆ. ಮಳೆಯಿಲ್ಲದಿದ್ದರೂ ಅಲ್ಪ ಸ್ವಲ್ಪ ನೀರನ್ನು ಬಳಸಿಕೊಂಡು ಕಷ್ಟದಲ್ಲಿಯೇ ಕೃಷಿ ಕೈಗೊಂಡ ನಮಗೆ ಇದೀಗ ಕಾಡಾನೆಗಳ ಕಾಟದಿಂದ ಕೃಷಿ ಫಸಲು ಕೈಸೇರದ ಸ್ಥಿತಿ ನಿರ್ಮಾಣವಾಗಿದೆ. ಬ್ಯಾಂಕಿನಲ್ಲಿ ಕೃಷಿ ಸಾಲವನ್ನೂ ಮಾಡಿಕೊಂಡಿದ್ದೇವೆ. ಕೈಗೆ ಬಂದ ಫಸಲು ಬಾಯಿಗೆ ಬಂದಿಲ್ಲ ಎಂಬಂತಾಗಿದ್ದು, ಸಾಲ ಮರುಪಾವತಿ ಹೇಗೆ? ಎಂಬ ಚಿಂತೆ ಮೂಡಿದೆ ಎಂದು ಕೃಷಿಕ ಜಗನ್ನಾಥ್ ಅಳಲು ತೋಡಿಕೊಂಡಿದ್ದಾರೆ.

ಮನೆಯ ಸಮೀಪದ ಹೊಲಗಳಿಗೆ ಕಾಡಾನೆಗಳು ರಾಜಾರೋಷವಾಗಿ ಲಗ್ಗೆಯಿಡುತ್ತಿವೆ. ನಿಡ್ತ ಮೀಸಲು ಅರಣ್ಯದ ಬಾಣಾವರ ಫಾರೆಸ್ಟ್‍ನಿಂದ ಕಾಡಾನೆಗಳು ಇತ್ತ ಬರುತ್ತಿವೆ. ಆಡಿನಾಡೂರು ಸೇತುವೆಯವರೆಗೆ ಆನೆಕಂದಕ ನಿರ್ಮಿಸಲಾಗಿದ್ದು, ಇದನ್ನು ಹಳೆ ಮದಲಾಪುರದವರೆಗೆ ವಿಸ್ತರಿಸಬೇಕು. ಕಾಡಾನೆಗಳಿಗೆ ಅರಣ್ಯದಲ್ಲಿಯೇ ಮೇವು ಒದಗಿಸುವ ಮೂಲಕ ಜನವಸತಿ ಹಾಗೂ ಕೃಷಿ ಪ್ರದೇಶಕ್ಕೆ ಬಾರದಂತೆ ಸೋಲಾರ್ ಬೇಲಿ ಅಳವಡಿಸಬೇಕೆಂದು ಗ್ರಾಮಸ್ಥರಾದ ಗಣೇಶ್, ಈರಪ್ಪ, ಧನಂಜಯ ಸೇರಿದಂತೆ ಇತರರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಕಳೆದ ಒಂದು ವಾರದಲ್ಲೇ ಆಡಿನಾಡೂರು ಗ್ರಾಮದ ವಿಜಯ ಅವರ ತೋಟ, ಹೊಸಳ್ಳಿ ಗ್ರಾಮದ ಬಾಹುದಾಸ್, ವೆಂಕಟೇಶ್, ನಾಗೇಶ್ ಸೇರಿದಂತೆ ಇತರ ಕೃಷಿಕರಿಗೆ ಸೇರಿದ ಕೃಷಿ ಫಸಲನ್ನೂ ನಷ್ಟಪಡಿಸಿವೆ. ಕಾಡಾನೆಗಳ ಹಾವಳಿ ಹೀಗೆಯೇ ಮುಂದುವರೆದರೆ ಈ ಭಾಗದಲ್ಲಿ ನೆಲೆಸಿರುವ ಮಂದಿ ಗುಳೇ ಹೋಗಬೇಕಾಗುತ್ತದೆ. ತಕ್ಷಣ ಅರಣ್ಯ ಇಲಾಖೆಯವರು ಈ ಬಗ್ಗೆ ಗಮನಹರಿಸಿ ಕಾಡಾನೆಗಳ ಉಪಟಳದಿಂದ ಕೃಷಿಕರನ್ನು ಪಾರುಮಾಡಬೇಕು. ಜಗನ್ನಾಥ್ ಸೇರಿದಂತೆ ಇತರರಿಗೆ ಫಸಲು ನಷ್ಟಕ್ಕೆ ಪರಿಹಾರ ಒದಗಿಸಿಕೊಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.