ವೀರಾಜಪೇಟೆ, ಫೆ. 5: ವಿದ್ಯಾರ್ಥಿಗಳು ವಿದ್ಯೆ ಕಡೆಗೆ ಹೆಚ್ಚಿನ ಗಮನ ಹರಿಸುವದರೊಂದಿಗೆ ಶ್ರದ್ಧೆ-ದಕ್ಷತೆಯಿಂದ ಸಾಧನೆ ಮಾಡು ವಂತಾಗಬೇಕು ಇದರಿಂದ ಭವಿಷ್ಯ ದಲ್ಲಿ ಉನ್ನತ ಹುದ್ದೆಗೇರಲು ಸಾಧ್ಯ ಎಂದು ಗೋಣಿಕೊಪ್ಪ ಕಾವೇರಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ. ಎ. ಪೂವಣ್ಣ ಹೇಳಿದರು.

ಗೋಣಿಕೊಪ್ಪ ಕಾವೇರಿ ಕಾಲೇಜಿ ನಲ್ಲಿ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟದ ಸಮಾರಂಭ ದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಶಿಸ್ತು, ಪ್ರಾಮಾಣಿಕತೆಯ ಮನೋಭಾವ ಬೆಳೆಸಿಕೊಂಡು ವಿದ್ಯೆಯೊಂದಿಗೆ ಕ್ರೀಡೆಗಳಲ್ಲಿಯೂ ಭಾಗವಹಿಸು ವಂತಾಗಬೇಕು ಎಂದರು.

ಅಂತರ ವಿಶ್ವ ವಿದ್ಯಾಲಯಗಳ ಬಾಸ್ಕೆಟ್‍ಬಾಲ್ ಕ್ರೀಡಾಪಟು ಹಾಗೂ ಕಾಲೇಜಿನ ಹಳೆ ವಿದ್ಯಾರ್ಥಿನಿ, ವೀರಾಜಪೇಟೆ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಮನೆಯಪಂಡ ದೇಚಮ್ಮ ಹಾಗೂ ಅಂತರರಾಷ್ಟ್ರೀಯ ಕರಾಟೆ ಕ್ರೀಡಾಪಟು ಕಾಲೇಜಿನ ಹಳೇ ವಿದ್ಯಾರ್ಥಿ ಜಮ್ಮಡ ಜೋಯಪ್ಪ ಕಾವೇರಿ ಕಾಲೇಜಿನ ವಾಯ್ಸ್ ಆಫ್ ಕಾವೇರಿ ಎರಡನೇ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.

ಕಾವೇರಿ ಕಾಲೇಜಿನ ಸಭಾಂಗಣದಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟದ ಸಮಾರಂಭದಲ್ಲಿ ಅತಿಥಿಗಳಾಗಿ ಪಿ.ಯು. ಕಾಲೇಜಿನ ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ಕಾವೇರಿ ವಿದ್ಯಾ ಸಂಸ್ಥೆಯ ನಿರ್ದೇಶಕ ಕೆ.ಪಿ. ಬೋಪಣ್ಣ ಉಪಸ್ಥಿತರಿದ್ದರು.