ಮಡಿಕೇರಿ, ಫೆ. 10: ಗೌಡ ಜನಾಂಗದಲ್ಲಿ ಇತ್ತೀಚೆಗೆ ಅಂತರಜಾತಿ ವಿವಾಹಗಳು ಹೆಚ್ಚಾಗುತ್ತಿದ್ದು, ಇದರಿಂದ ದಾಂಪತ್ಯದಲ್ಲಿ ಸಾಮರಸ್ಯ ಕಂಡುಬಾರದೆ ವಿಚ್ಛೇದನಗಳೂ ಕೂಡ ಅಧಿಕವಾಗುತ್ತಿರುವದು ಉತ್ತಮ ಬೆಳವಣಿಗೆಯಲ್ಲವೆಂದು ಜನಾಂಗದ ಪ್ರಮುಖರು ಆತಂಕ ವ್ಯಕ್ತಪಡಿಸಿದ್ದಾರೆ.ಕೊಡಗು ಗೌಡ ನಿವೃತ್ತ ನೌಕರರ ಸಂಘದ ವತಿಯಿಂದ ಇಲ್ಲಿನ ಗೌಡ ವಿದ್ಯಾಸಂಘದ ಸಭಾಂಗಣದಲ್ಲಿ ಏರ್ಪಡಿಸಿದ್ದ ವಧೂ - ವರರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಮಡಿಕೇರಿ ನಗರಸಭಾಧ್ಯಕ್ಷೆ ಕೂಡಕಂಡಿ ಕಾವೇರಮ್ಮ ಸೋಮಣ್ಣ ಅವರು ಈ ಹಿಂದೆ ಹಿರಿಯರು ಮನೆ - ಮನೆಗೆ ಹೋಗಿ ವಿವಾಹ ಸಂಬಂಧ ನಿಶ್ಚಯ ಮಾಡುತ್ತಿದ್ದರು. ಇಂದು ಹೊಟೇಲ್, ಲಾಡ್ಜ್‍ಗಳಲ್ಲಿ ಕುಳಿತು ಮಾತುಕತೆ ನಡೆಸುವ ಪ್ರಸಂಗ ಎದುರಾಗಿದೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಅಂತರಜಾತಿ ವಿವಾಹಗಳು ಅಧಿಕವಾಗುತ್ತಿದ್ದು, ಸಾಮರಸ್ಯ ಕಾಣದೆ ವಿಚ್ಛೇದನಗಳಾಗಿ ಹುಡುಗ ಅಥವಾ ಹುಡುಗಿಯರು ಸಂಕಷ್ಟದ ಜೀವನ ನಡೆಸುತ್ತಿರುವದನ್ನು ಕಾಣುತ್ತಿದ್ದೇವೆ. ಇದಕ್ಕೆ ಅವಕಾಶ ಕೊಡದೆ ಆಯಾ ಜನಾಂಗದವರನ್ನೇ ವಿವಾಹವಾಗಿ, ಸುಖಮಯ ಜೀವನ ನಡೆಸುವಂತಾಗಬೇಕು. ನಮ್ಮ ಸಂಸ್ಕøತಿ, ಪದ್ಧತಿಯನ್ನು ಬಿಟ್ಟು ಹೋಗಬೇಡಿ ಎಂದು ಮನವಿ ಮಾಡಿಕೊಂಡರು.

ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ಮಾತನಾಡಿ, ಹುಟ್ಟು ಆಕಸ್ಮಿಕ, ಸಾವು ಖಚಿತ ನಡುವೆ ಬರುವದು ಬಾಳ ಸಂಗಾತಿಯನ್ನು ಆಯ್ಕೆ ಮಾಡುವ ಮದುವೆ. ಈ ಸಂದರ್ಭ ಆಲೋಚನೆ ಮಾಡಿ ಆಯ್ಕೆ ಮಾಡಿ ಕೊಳ್ಳಬೇಕೆಂದರು.

(ಮೊದಲ ಪುಟದಿಂದ) ಪ್ರಸ್ತುತ ದಿನಗಳಲ್ಲಿ ಶಿಕ್ಷಣ, ಉದ್ಯೋಗಕ್ಕೆಂದು ಹೊರ ಪ್ರದೇಶಗಳಿಗೆ ತೆರಳುವವರು ಸ್ವಾತಂತ್ರ್ಯಕ್ಕೋಸ್ಕರ ಹುಡುಕಾಡುವ ಪರಿಸ್ಥಿತಿ ಇದೆ. ಇದರೊಂದಿಗೆ ಅಂತರಜಾತಿ ವಿವಾಹದಿಂದಾಗಿ ನಮ್ಮ ಸಂಸ್ಕøತಿಯನ್ನು ಮುಂದುವರಿಸಲು ಕಷ್ಟವಾಗುತ್ತವೆ. ಹಬ್ಬ- ಹರಿದಿನಗಳಲ್ಲಿ ಅವರುಗಳನ್ನು ಪ್ರತ್ಯೇಕವಾಗಿ ಕಾಣುವಂತಹ ಪರಿಸ್ಥಿತಿ ಕಂಡುಬರುತ್ತಿದೆ. ಇದಕ್ಕೆ ಅವಕಾಶ ನೀಡಬಾರದು. ಮಕ್ಕಳ ಬೆಳವಣಿಗೆಯಲ್ಲಿ ತಾಯಂದಿರು ಗಮನ ಹರಿಸಿದಲ್ಲಿ ಎಲ್ಲವೂ ಸರಿಯಾಗುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ‘ಶಕ್ತಿ’ ಉಪ ಸಂಪಾದಕ, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕುಡೆಕಲ್ ಸಂತೋಷ್ ಮಾತನಾಡಿ ಹಿಂದೆ ಅವಿಭಕ್ತ ಕುಟುಂಬ ಪದ್ಧತಿ ಇದ್ದಾಗ ಬಹುತೇಕ ಎಲ್ಲರೂ ಹಳ್ಳಿಗಳಲ್ಲಿ ಒಟ್ಟಾಗಿ ನೆಲೆಸುತ್ತಿದ್ದ ಸಂದರ್ಭ ಅಲ್ಲಲ್ಲೇ ಮನೆ- ಮನೆಗೆ ತೆರಳಿ ವಧು - ವರರ ಬಗ್ಗೆ ಅನ್ವೇಷಿಸಿ ಸಾಂಪ್ರದಾಯಿಕವಾಗಿ ಮದುವೆ ಮಾಡುತ್ತಿದ್ದರು. ಇದೀಗ ಕಾಲಕ್ಕೆ ತಕ್ಕಂತೆ ಕೋಲ ಎಂಬಂತಾಗಿದೆ. ಸಾಮಾಜಿಕ ಜಾಲ ತಾಣಗಳು ಬಂದ ನಂತರ ಮುಖ ಪರಿಚಯವಿಲ್ಲದವರೊಂದಿಗೆ ಸಂಬಂಧವೇರ್ಪಟ್ಟು ಮೂರು ದಿನಗಳಲ್ಲಿ ಮುರಿದು ಬೀಳುತ್ತಿರುವದನ್ನು ಕಾಣಬಹುದಾಗಿದೆ. ಬಡ ಕುಟುಂಬಗಳಲ್ಲಿ ಕಲಹವಿದ್ದರೂ ವಿಚ್ಛೇದನದಂತಹ ಹಂತ ತಲಪುವದಿಲ್ಲ. ಆದರೆ ವಿದ್ಯಾವಂತ, ಉನ್ನತ ಹುದ್ದೆಯನ್ನೇರಿದ ಅತಿಬುದ್ಧಿವಂತರಲ್ಲಿ ಇದು ಹೆಚ್ಚಾಗಿ ಕಂಡುಬರುತ್ತಿದೆ. ಪರಸ್ಪರ ಹೊಂದಾಣಿಕೆಯಿದ್ದರೆ ಇಂತಹುದಕ್ಕೆ ಕಡಿವಾಣ ಹಾಕಬಹುದೆಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೋರನ ವಿಶ್ವನಾಥ್ ಮಾತನಾಡಿ, ಸಮಾವೇಶದಲ್ಲಿ ವಿವಾಹ ಭಾಗ್ಯ ಕಂಡುಕೊಂಡವರು ಸಂಘಕ್ಕೆ ಮಾಹಿತಿ ನೀಡಬೇಕು. ಸಂಘ ವಧು- ವರರ ಮಧ್ಯೆ ಮಾಧ್ಯಮದಂತೆ ಕೆಲಸ ಮಾಡುತ್ತಿದ್ದು, ಮುಂದಿನ ಹೆಜ್ಜೆಯಿಡುವ ಕಾರ್ಯ ಅವರವರಿಗೆ ಸಂಬಂಧಿಸಿದೆಂದು ಹೇಳಿದರು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಕುದುಪಜೆ ಬೋಜಪ್ಪ, ಕಾರ್ಯದರ್ಶಿ ಬೈತಡ್ಕ ಬೆಳ್ಯಪ್ಪ, ಜಂಟಿ ಕಾರ್ಯದರ್ಶಿ ಕುದುಪಜೆ ಶಾರದ, ಖಜಾಂಚಿ ಪೊನ್ನಚನ ಸೋಮಣ್ಣ, ನಿರ್ದೇಶಕರಾದ ದಂಬೆಕೋಡಿ ಆನಂದ, ಕುಯ್ಯಮುಡಿ ವಸಂತ, ಪಟ್ಟಡ ದೇವಯ್ಯ, ಚೆರಿಯಮನೆ ಪ್ರಮೋದ್, ಹೊಸೊಕ್ಲು ಪೊನ್ನಪ್ಪ, ತಳೂರು ಕಾಳಪ್ಪ, ಸಾಹಿತಿಗಳಾದ ಪಟ್ಟಡ ಪ್ರಭಾಕರ್, ಪುತ್ತೂರು ಅನಂತರಾಜ್ ಗೌಡ, ಇನ್ನಿತರರಿದ್ದರು.

ಉಪನ್ಯಾಸಕ ಪಟ್ಟಡ ಶಿವಕುಮಾರ್ ಕಾರ್ಯಕ್ರಮ ನಡೆಸಿಕೊಟ್ಟರು.