ಮಡಿಕೇರಿ, ಫೆ. 10: ಕೊಡಗು ಜಿಲ್ಲೆಯಲ್ಲಿ ಎಲ್ಲಾ ಜನಾಂಗಗಳೊಂದಿಗೆ ಅನ್ಯೋನ್ಯತೆಯಿದ್ದು, ಜನಾಂಗೀಯ ಸಂಘರ್ಷವೆಂಬದು ಕೆಲವರಷ್ಟೇ ಸ್ವಾರ್ಥ ಸಾಧನೆಗಾಗಿ ಇಂತಹ ಅಪಪ್ರಚಾರ ನಡೆಸುತ್ತಿದ್ದಾರೆ. ಕೊಡಗಿನ ರಾಜಕೀಯ ವ್ಯವಸ್ಥೆ ಜಾತಿ ಮೀರಿ ಬೆಳೆದಿದ್ದು, ಆ ಮೂಲಕವೇ ಇದುವರೆಗೆ ತಾವು ಶಾಸಕರಾಗಿ ಬೆಳೆಯಲು ಅವಕಾಶ ನೀಡಿದೆ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಸ್ಪಷ್ಟಪಡಿಸಿದ್ದಾರೆ. ರಾಜ್ಯದ ಮಾಜೀ ಮುಖ್ಯಮಂತ್ರಿ ಹಾಗೂ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಬೋಪಯ್ಯ ಮುಂದಿನ ಬಿಜೆಪಿ ಅಭ್ಯರ್ಥಿಯೆಂದು ಈಚೆಗೆ ಜಿಲ್ಲಾ ಭೇಟಿ ಸಂದರ್ಭ ಘೋಷಿಸಿರುವ ಹಿನ್ನೆಲೆ ‘ಶಕ್ತಿ ವಿಶೇಷ ಸಂದರ್ಶನ ನಡೆಸಿದಾಗ ಮೇಲಿನಂತೆ ಮನದಾಳದ ಮಾತನಾಡಿದರು.

ಶಕ್ತಿ: ಕೊಡವ- ಗೌಡ ಜನಾಂಗ ನಡುವೆ ಸಂಘರ್ಷವಿಲ್ಲವೆ? ನಿಮ್ಮ ಮೌನವೇಕೆ?

ಕೆ.ಜಿ.ಬಿ.: ನಾನು ಬಾಲ್ಯದಿಂದಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂಲಕ ಬೆಳೆದು ಬಂದವ. ಸಹಕಾರ ಕ್ಷೇತ್ರ ಸೇರಿದಂತೆ ಬಿಜೆಪಿಯ ಹಲವಷ್ಟು ಜವಾಬ್ದಾರಿ ನಿರ್ವಹಿಸಿ, ಶಾಸಕನಾಗಿ ಚುನಾವಣೆ ಎದುರಿಸಲು ಹೊರಟಾಗ ಯಾರಿಗೂ ನನ್ನ ಜಾತಿ ಗೊತ್ತಿರಲಿಲ್ಲ. ಇಂದು ಕೂಡ ಅನೇಕರಿಗೆ ಗೊತ್ತಿಲ್ಲ. ಬಿಜೆಪಿಯ ಸೈದ್ಧಾಂತಿಕ ನೆಲೆಯಲ್ಲಿ ಗೆಲುವು ಸಾಧ್ಯವಾಗಿದೆ. ಅಂತೆಯೇ ಅಪ್ಪಚ್ಚು ರಂಜನ್ ಕೂಡ ಗೆದ್ದು ಬಂದಿದ್ದಾರೆ. ಕೊಡಗಿನ ಜನತೆ ರಾಜಕೀಯ ಹಾಗೂ ಸಾಮಾಜಿಕ, ಸಹಕಾರ ರಂಗ ಸೇರಿದಂತೆ ರಾಷ್ಟ್ರೀಯ ನೆಲೆಯಲ್ಲಿ ಪ್ರಬುದ್ಧರಿದ್ದಾರೆ ಎನಿಸುತ್ತದೆ.

ಶಕ್ತಿ: ತಲಕಾವೇರಿ - ಭಾಗಮಂಡಲ ಮೇಲ್ಸೇತುವೆ, ಬ್ರಹ್ಮಗಿರಿ ಬೆಟ್ಟ ಏರುವ ವಿಷಯದಲ್ಲಿ ನಿಮ್ಮ ಮೌನವೇಕೆ?

ಕೆ.ಜಿ.ಬಿ.: ಕೊಡಗಿನ ಕುಲಮಾತೆ ಹಾಗೂ ದಕ್ಷಿಣ ಕಾಶಿ ಎಂಬ ಹೆಗ್ಗಳಿಕೆ ಇರುವಂತಹ ತಲಕಾವೇರಿ - ಭಾಗಮಂಡಲ ವಿಚಾರ ಪದೇ ಪದೇ ಮಾಧ್ಯಮಗಳಲ್ಲಿ ಪ್ರಸ್ತಾಪಗೊಳ್ಳುವದು ನೋವಿನ ಸಂಗತಿ. ಧಾರ್ಮಿಕ ನಂಬಿಕೆ ಇರುವವರಿಗೆ ಮತ್ತು ಶ್ರದ್ಧೆ ಹೊಂದಿರುವ ಭಕ್ತರಿಗೆ ಇಂತಹ ವಿಚಾರ ಬೇಸರ ಉಂಟುಮಾಡಲಿದೆ. ಇಂತಹ ವಿಷಯದಲ್ಲಿ ಎಲ್ಲಾ ಜನಾಂಗದ ಹಿರಿಯರು ಒಂದೆಡೆ ಕುಳಿತು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು. ಅಂತಹ ಪ್ರಯತ್ನ ಮಾಧ್ಯಮದಿಂದಲೇ ಆಗಬೇಕಿದೆ ವಿನಾ ಕಾರಣ ಹೇಳಿಕೆಗಳನ್ನು ಪತ್ರಿಕೆಗಳು ಪ್ರಕಟಿಸದಂತೆಯೂ ನಾನು ವಿನಂತಿಸುವೆ.

ಶಕ್ತಿ: ಆ ದಿಕ್ಕಿನಲ್ಲಿ ನೀವೇ ಪ್ರಯತ್ನಿಸಬಾರದೆ?

ಕೆ.ಜಿ.ಬಿ.: ಯಾರಾದರೂ ಅಪೇಕ್ಷಿಸಿದರೆ ಖಂಡಿತಾ ಮುಂದಾಗಬಹುದು.

ಶಕ್ತಿ: ಹೈಟೆನ್ಷನ್ ವಿದ್ಯುತ್ ಮಾರ್ಗ ಆಗಿಹೋಗಿದೆ. ಪ್ರಸಕ್ತ ರೈಲ್ವೇ - ಹೆದ್ದಾರಿ ಸಂಬಂಧ ನಿಮ್ಮ ನಿಲುವು?

(ಮೊದಲ ಪುಟದಿಂದ) ಕೆ.ಜಿ.ಬಿ.: ಕೇಂದ್ರ ಸರಕಾರದ ಹೈಟೆನ್ಷನ್ ಯೋಜನೆ ಬೇಡವೆಂದು 2005ರಲ್ಲಿ ಮಡಿಕೇರಿ ಕ್ಷೇತ್ರದ ಶಾಸಕನಾಗಿದ್ದಾಗಲೇ ನನ್ನ ನಿಲುವು ಸ್ಪಷ್ಟಪಡಿಸಿದ್ದೆ. 2010ರ ನಂತರ ಕೇಂದ್ರ ಯುಪಿಎ ಸರಕಾರ ಯೋಜನೆಯ ಮರು ಪ್ರಸ್ತಾಪಿಸಿದಾಗ, ಅಂದಿನ ಸಂಸದ ಹೆಚ್. ವಿಶ್ವನಾಥ್ ಮೌನ ವಹಿಸಿದ್ದರು. ಬಳಿಕ 2013ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂಧನ ಸಚಿವ ಡಿ.ಕೆ. ಶಿವಕುಮಾರ್ ಸಮ್ಮುಖ ಬೆಂಗಳೂರು ಸಭೆಯಲ್ಲಿ ಮೈಸೂರಿನ ವಕೀಲ ಪಿ.ಡಿ. ಮೇದಪ್ಪ ಹಾಗೂ ತಾನು ಮಾತ್ರ ವಿರೋಧಿಸಿದ್ದೆವು. ಆ ಬಗ್ಗೆ ಉನ್ನತ ಸಮಿತಿ ರಚಿಸಿದ ರಾಜ್ಯ ಸರಕಾರ 2 ತಿಂಗಳಲ್ಲಿ ಯೋಜನೆ ಅನುಷ್ಠಾನಕ್ಕೆ ಶಿಫಾರಸು ಮಾಡಿದಾಗ, ಕರ್ನಲ್ ಮುತ್ತಣ್ಣ ಸಹಿತ ಹೋರಾಟಗಾರರು, ಕಾಂಗ್ರೆಸ್ ಮುಖಂಡರು ಕೂಡ ಮೌನ ವಹಿಸಿದ್ದರು. ಅಲ್ಲಿ ಏನು ನಡೆದಿದೆ ಎಂಬ ನಿಗೂಢ ಸತ್ಯ ಬಹಿರಂಗಗೊಳ್ಳಬೇಕಿದೆ. ತಾನು ಸಹಿತ ಬಿಜೆಪಿ ಈ ಯೋಜನೆಯನ್ನು ವಿರೋಧಿಸುತ್ತಲೇ ಬಂದಿದ್ದು, ಯೋಜನೆಗೆ ಕಾರಣರಾರು? ಎಂಬ ಪ್ರಶ್ನೆ ನಿಗೂಢವಿದೆ.

ಶಕ್ತಿ: ಕೊಡಗಿಗೆ ರೈಲು ಅವಶ್ಯಕವೆ?

ಕೆ.ಜಿ.ಬಿ.: ಕೊಡಗಿಗೆ ರೈಲ್ವೇ ಯೋಜನೆಗೆ ವೈಯಕ್ತಿಕವಾಗಿ ನಾನೂ ವಿರೋಧಿಸುವೆ. ಆದರೆ ಅನೇಕರ ಕೋರಿಕೆಯಂತೆ ಈ ಯೋಜನೆಯನ್ನು ಕುಶಾಲನಗರ ತನಕ ತರಲು ಹಿಂದಿನ ಕೇಂದ್ರ ರೈಲ್ವೇ ಸಚಿವ ಡಿ.ವಿ. ಸದಾನಂದಗೌಡ ಪ್ರಯತ್ನಿಸಿದಾಗ, ತಾನೂ ಸೇರಿದಂತೆ ಬಿಜೆಪಿಯು ಯೋಜನೆಗೆ ಬೆಂಬಲಿಸಿದ್ದು, ತಲಚೇರಿ ಮೂಲಕ ವೀರಾಜಪೇಟೆ ಮಾರ್ಗಕ್ಕೆ ಯಾವ ಕಾರಣಕ್ಕೂ ಒಪ್ಪಿಗೆಯಿಲ್ಲ. ಒಂದು ವೇಳೆ ಅಂತಹ ಪ್ರಯತ್ನ ನಡೆದರೆ ಸ್ವತಃ ಬಿಜೆಪಿ ಹೋರಾಟ ನಡೆಸಲಿದೆ. ಈಗಾಗಲೇ ಈ ಬಗ್ಗೆ ಕೇಂದ್ರ ರೈಲ್ವೇ ಸಚಿವರಿಗೂ ಮನವರಿಕೆ ಮಾಡಿದ್ದಾಗಿದೆ.

ಶಕ್ತಿ: ಹೆದ್ದಾರಿ ಯೋಜನೆಗೂ ಅಪಸ್ವರವಿದೆಯಲ್ಲಾ?

ಕೆ.ಜಿ.ಬಿ.: ಕೊಡಗಿನಲ್ಲಿ ಆರು ಅಥವಾ ಎಂಟು ಪಥಗಳ ಮಾರ್ಗದ ಯಾವ ಪ್ರಸ್ತಾವನೆಯೂ ಕೇಂದ್ರ ಸರಕಾರ ಮಾಡಿಲ್ಲ. ಬದಲಾಗಿ ಕೊಡಗಿನಲ್ಲಿ ಪ್ರತಿ ನಾಲ್ಕು ಮಂದಿಗೆ ಒಂದರಂತೆ ವಾಹನಗಳಿವೆ ಎಂಬ ಅಂಕಿ ಅಂಶ ಲಭಿಸಿದೆ. ಹೀಗಾಗಿ ವಾಹನ ದಟ್ಟಣೆಯೊಂದಿಗೆ ನಿರಂತರ ಪ್ರವಾಸಿಗರ ಆಗಮನದಿಂದ ಸಂಚಾರ ವ್ಯವಸ್ಥೆ ಪದೇ ಪದೇ ಅಸ್ತವ್ಯಸ್ತಗೊಳ್ಳುವಂತಾಗಿದೆ. ಹೀಗಾಗಿ ಅನಿವಾರ್ಯವೆಂಬಂತೆ ಕೊಡಗಿಗೆ ಚತುಷ್ಪಥ ಮಾರ್ಗದೊಂದಿಗೆ ಹೆದ್ದಾರಿಗಳ ಸುಧಾರಣೆ ಅವಶ್ಯಕ. ಈ ಯೋಜನೆಗೆ ಎಲ್ಲರೂ ಸಹಕಾರ ನೀಡಬೇಕೆಂದು ವಿನಂತಿಸುವೆ.

ಶಕ್ತಿ: ಪ್ರಸಕ್ತ ಶಾಸಕರುಗಳಾಗಿರುವ ಬಿಜೆಪಿಯ ಇಬ್ಬರು ಕೂಡ ನಿರೀಕ್ಷಿತ ಅಭಿವೃದ್ಧಿಗೆ ಕಾಳಜಿ ವಹಿಸುತ್ತಿಲ್ಲ ಎಂಬ ಆರೋಪವಿದೆಯಲ್ಲಾ?

ಕೆ.ಜಿ.ಬಿ.: ‘ಶಕ್ತಿ’ಯ ಸಮೀಕ್ಷೆ ಸರಿಯಿದೆ. ಹಣ ಬಾರದೆ ಹೇಗೆ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯ? ಹಿಂದಿನ ಬಿಜೆಪಿ ಸರಕಾರ ಕೊಡಗಿಗೆ 1850 ಕೋಟಿ ಅನುದಾನದೊಂದಿಗೆ ಜಿಲ್ಲಾ ಆಡಳಿತ ಭವನ, ಈಜುಕೊಳ, ಒಳಾಂಗಣ ಕ್ರೀಡಾಂಗಣ, ವೈದ್ಯಕೀಯ ಕಾಲೇಜು, ತಾಂತ್ರಿಕ ಕಾಲೇಜು, ವೀರಾಜಪೇಟೆ ಮಿನಿ ವಿಧಾನಸೌಧ, ಪೊನ್ನಂಪೇಟೆ- ಕೂಡಿಗೆ ಟರ್ಫ್ ಮೈದಾನಗಳು, ಗ್ರಾಮೀಣ ರಸ್ತೆ ಅಭಿವೃದ್ಧಿ, ಮಡಿಕೇರಿಗೆ ಮತ್ತು ವೀರಾಜಪೇಟೆ, ಸೋಮವಾರಪೇಟೆಗೆ ಶಾಶ್ವತ ಕುಡಿಯುವ ನೀರಿಗೆ ಆದ್ಯತೆ ಕಲ್ಪಿಸಿದೆ. ಈಗಿನ ಸರಕಾರ ಹಣವನ್ನೇ ಬಿಡುಗಡೆಗೊಳಿಸದೆ ಚುನಾವಣೆ ಸಮೀಪಿಸುತ್ತಿರುವಾಗ ನಾಟಕವಾಡುತ್ತಿದೆ.

ಸಚಿವರು ಹೊಣೆ: ರಾಜ್ಯ ಸರಕಾರದ ಅಭಿವೃದ್ಧಿ ಯೋಜನೆಗಳು ಕೊಡಗು ಜಿಲ್ಲಾ ಅಭಿವೃದ್ಧಿ ಪರಿಶೀಲನಾ ಸಭೆಗಳಲ್ಲಿ (ಕೆಡಿಪಿ) ಚರ್ಚೆಯಾಗಬೇಕಿತ್ತು. ಕಳೆದ ಸುಮಾರು ಎರಡು ವರ್ಷಗಳಲ್ಲಿ ಈಗಿನ ಉಸ್ತುವಾರಿ ಸಚಿವರು ಕನಿಷ್ಟ ಪ್ರತಿ ಮೂರು ತಿಂಗಳಿಗೊಮ್ಮೆ ನಡೆಸಬೇಕಿದ್ದ ಸಭೆಗಳನ್ನು ಕರೆಯದೆ ಕೇವಲ ಕಾಟಾಚಾರಕ್ಕೆ ಎರಡು ಸಭೆ ನಡೆಸಿದ್ದಾರೆ. ಅದು ಕೂಡ ಶಾಸಕರುಗಳಾದ ನಾವು ಮೂವರು ಇಲ್ಲದ ಸಂದರ್ಭದ್ದಾಗಿದೆ.

ಶಕ್ತಿ: ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವದರ ಬದಲು ಬೈದು ನೀವು ವಿರೋಧ ಮಾಡುತ್ತೀರಿ ಎಂಬ ಆರೋಪಕ್ಕೆ ಏನೆನ್ನುತ್ತೀರಿ?

ಕೆ.ಜಿ.ಬಿ.: ಕೆಡಿಪಿ ಸಭೆಗಳು ನಡೆಯದೆ ಅಧಿಕಾರಿಗಳು ಏನೇನೂ ಸ್ಪಂದಿಸುತ್ತಿಲ್ಲ. ಪದೇ ಪದೇ ಜಿಲ್ಲಾ ಮಟ್ಟದ ಅಧಿಕಾರಿಗಳ ಬದಲಾವಣೆ, ಹುದ್ದೆಗಳನ್ನು ಭರ್ತಿ ಮಾಡದಿರುವದು ಕೂಡ ಕೊಡಗಿನ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಆಡಳಿತಾರೂಢ ಅನೇಕ ಸಚಿವರು, ಶಾಸಕರೇ ಅಧಿಕಾರಿಗಳು ಹೇಳಿದ್ದು ಕೇಳುತ್ತಿಲ್ಲವೆನ್ನುವಾಗ, ನಾವು ಬೈಯ್ಯದೆ ಕೆಲಸ ಮಾಡಿಸಲು ಸಾಧ್ಯವೇ? ಈ ಬಗ್ಗೆ ಸರಕಾರಕ್ಕೆ ನ್ಯಾಯಾಲಯ ಕೂಡ ಛೀಮಾರಿ ಹಾಕಿ ಅಧಿಕಾರಿಗಳ ಮೇಲೆ ಹಿಡಿತ ಸಾಧಿಸಿ ಕೆಲಸ ಮಾಡಿಸಲು ತಿಳಿಸಿರುವ ಬಗ್ಗೆ ಮಾಧ್ಯಮಗಳೇ ಬೆಳಕು ಚೆಲ್ಲಿವೆ.

ಶಕ್ತಿ: ಟಿಕೆಟ್ ಖಾತರಿಯೇ? ಯಡಿಯೂರಪ್ಪನವರ ಭರವಸೆಯೇ ಅಂತಿಮವೇ?

ಕೆ.ಜಿ.ಬಿ.: ಪಕ್ಷದ ತೀರ್ಮಾನ ಅಂತಿಮ. ನನ್ನದೇನು ಇಲ್ಲ.

ಶಕ್ತಿ: ದ್ವಿತೀಯ ಹಂತದಲ್ಲಿ ಯಾರನ್ನೂ ಬೆಳೆಸಿಲ್ಲವೇಕೆ?

ಕೆ.ಜಿ.ಬಿ.: ಕೊಡಗಿನಲ್ಲಿ ಎಲ್ಲಾ ಹಂತದಲ್ಲಿ ಸ್ಪರ್ಧಿಸಲು ಬೇಕಷ್ಟು ಕಾರ್ಯಕರ್ತರು ನಾಯಕತ್ವ ಗುಣದೊಂದಿಗೆ ಬೆಳೆದು ನಿಂತವರಿದ್ದಾರೆ. ಇಲ್ಲದಿದ್ದರೆ ಗ್ರಾ.ಪಂ.ನಿಂದ ಜಿ.ಪಂ. ತನಕ ಬಿಜೆಪಿ ಅಧಿಕಾರ ಹಿಡಿಯುವದು ಸಾಧ್ಯವಿತ್ತೇ? ಅವರೆಲ್ಲರೂ ಭವಿಷ್ಯದ ನಾಯಕತ್ವ ಗುಣ ಹೊಂದಿದ್ದಾರೆ ಎನಿಸುತ್ತದೆ.

ಶಕ್ತಿ: ನಗರಸಭೆ ಕಾರ್ಯವೈಖರಿ, ದಸರಾ, ಕಿತ್ತಾಟ ಸಂದರ್ಭ ಮೌನವೇಕೆ?

ಕೆ.ಜಿ.ಬಿ.: ನಾನು ಮಡಿಕೇರಿಯಲ್ಲಿದ್ದರೂ, ನಗರಸಭೆ ನನ್ನ ವ್ಯಾಪ್ತಿಗೆ ಬರುವದಿಲ್ಲ. ನಾನು ವೀರಾಜಪೇಟೆ ಕ್ಷೇತ್ರದ ಶಾಸಕನಾಗಿ ಇಲ್ಲಿ ಮೂಗು ತೂರಿಸುವದು ಎಷ್ಟು ಸರಿ? ಹಿಂದೆ ಮಡಿಕೇರಿ ಕ್ಷೇತ್ರದ ಶಾಸಕನಾಗಿದ್ದಾಗ ಕುಂಡಾಮೇಸ್ತ್ರಿ ಯೋಜನೆಯಂತಹ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿಲ್ಲವೇ?

ಶಕ್ತಿ: ಕ್ಷೇತ್ರ ಬದಲಾವಣೆಯಾಗಲಿದೆಯೇ? ಇತರರು ಟಿಕೆಟ್ ಬಯಸುತ್ತಿದ್ದಾರಾ?

ಕೆ.ಜಿ.ಬಿ.: ಬಿಜೆಪಿ ಆಂತರಿಕ ವಿಷಯಗಳ ಬಗ್ಗೆ ಮಾತನಾಡುವದಿಲ್ಲ. ರಾಷ್ಟ್ರಾಧ್ಯಕ್ಷರೇ ಮಾಧ್ಯಮ ಬಳಿ ಹೇಳದಂತೆ ನಿರ್ದೇಶಿಸಿರುವಾಗ ಪದೇ ಪದೇ ಅತ್ತ ಪ್ರಶ್ನಿಸಬಾರದು. ಎಲ್ಲವನ್ನು ವರಿಷ್ಠರು ನಿರ್ಧರಿಸುತ್ತಾರೆ. ಧನ್ಯವಾದ...